ಮಂಗಳೂರು : ಬಿಜೆಪಿಗೆ ಜಿಲ್ಲೆಯ ಭವಿಷ್ಯದ ಕಾಳಜಿ ಹಾಗೂ ನೇತ್ರಾವತಿ ಉಳಿಸುವ ಬದ್ಧತೆ ಇರುವ ಕಾರಣದಿಂದ ಎತ್ತಿನಹೊಳೆ ಯೋಜನೆ ವಿರುದ್ಧ ಬೃಹತ್ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿದೆ. ಪಕ್ಷದ ಈ ಜನಪರ ಹೋರಾಟಕ್ಕೆ ಈಗಾಗಲೇ ನಾಡಿನ ಜನತೆಯಿಂದ ಅತ್ಯಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.
ನೇತ್ರಾವತಿಯನ್ನು ಬರಡಾಗಿಸುವ ಎತ್ತಿನಹೊಳೆ ಯೋಜನೆಯಿಂದ ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡದಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಬಹುದು. ಜಿಲ್ಲೆಯ ಕೃಷಿ ಭೂಮಿ ಮರುಭೂಮಿಯಾಗಬಹುದು. ಇಂತಹ ಅಪಾಯದ ವಿರುದ್ಧ ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿ ಹೋರಾಡುವುದು ಬಿಜೆಪಿಯ ಕರ್ತವ್ಯ. ಈ ಹಿಂದೆಯೂ ಅಡಕೆ ಬೆಳೆಗಾರರ ಹೋರಾಟ ಸೇರಿದಂತೆ ಜಿಲ್ಲೆಯ ಹಿತಾಸಕ್ತಿಗೆ ತೊಂದರೆಯಾಗುವ ಸಂದರ್ಭ ಬಂದಾಗಲೆಲ್ಲಾ ಬಿಜೆಪಿ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದೆ.
ಯಾವುದೇ ಮಾಹಿತಿ ನೀಡದೆ ಜನಪ್ರತಿನಿಧಿಗಳನ್ನು ಕತ್ತಲಲ್ಲಿಟ್ಟು ಕೋಟ್ಯಾಂತರ ರೂ.ವೆಚ್ಚದ ಕಾಮಗಾರಿ ನಡೆಸುತ್ತಿರುವುದರಿಂದ ಜಿಲ್ಲೆಯ ಜನತೆಯಲ್ಲಿ ಸಂಶಯ ಮೂಡಿದೆ. ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಭಾವನೆಗಳನ್ನು ಗೌರವಿಸಿ ಎತ್ತಿನಹೊಳೆ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು. ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರೇ ಆರೋಪಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಅವರು ಆಗ್ರಹಿಸಿದ್ದಾರೆ.
ಅ.10 ರಿಂದ 13ರ ವರೆಗೆ ಮಂಗಳೂರಿನಿಂದ ಎತ್ತಿನಹೊಳೆಗೆ ನಡೆಯುವ ಬೃಹತ್ ಕಾಲ್ನಡಿಗೆ ಜಾಥಾದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಜಾಥಾ ಸಂಘಟಿಸಲಾಗುವುದೆಂದು ನಳಿನ್‌ಕುಮಾರ್ ತಿಳಿಸಿದ್ದಾರೆ.