ಬೆಳ್ತಂಗಡಿ: ನಾವು ನಮ್ಮ ಪಾರಂಪರಿಕ ಕೃಷಿ ಪದ್ಧತಿ, ಆಹಾರ ಪದ್ಧತಿಯನ್ನು ಕಡೆಗಣಿಸುತ್ತಿದ್ದೇವೆ. ಇದರಿಂದ ವಿಷಯುಕ್ತ ಉತ್ಪನ್ನಗಳನ್ನು ತಿನ್ನುವ ಮೂಲಕ ನಮ್ಮ ಆರೋಗ್ಯ, ಆಯುಷ್ಯ ಕುಂಠಿತವಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ರವರು ಹೇಳಿದರು.
ಅವರು ನಾಗರಿಕ ಸೇವಾ ಟ್ರಸ್ಟ್ ಆಶ್ರಯದಲ್ಲಿ ಕರಾವಳಿ ಮಹಿಳಾ ಜಾಗೃತಿ ವೇದಿಕೆ, ಕೃಷಿಕರ ವೇದಿಕೆ ಕರ್ನಾಟಕ, ದ.ಕ.ಪರಿಸರಾಸಕ್ತರ ಒಕ್ಕೂಟ ಮತ್ತು ನಾಗರಿಕ ಸೇವಾ ಬಳಗಗಳ ಆಶ್ರಯದಲ್ಲಿ ‘ವಿಶ್ವ ಪರಿಸರ ದಿನ’ದ ಅಂಗವಾಗಿ ನಡೆದ ‘ಪರಿಸರಜಾಗೃತಿ ಮತ್ತು ನಿಸರ್ಗದತ್ತ ಆಹಾರ ಅಭಿಯಾನ’ ಉದ್ಘಾಟಿಸಿ ಮಾತನಾಡಿದರು.
ವಿಶೇಷ ಆರ್ಥಿಕ ವಲಯಕ್ಕೆ ಅವಿಭಜಿತ ಜಿಲ್ಲೆಯಲ್ಲಿ ಸಾವಿರಾರು ಎಕ್ರೆ ಭೂಮಿ ನೀಡಿದರೂ ಸ್ಥಳೀಯರಿಗೆ ಉದ್ಯೋಗಾವಕಾಶ ಲಭಿಸಿದ್ದು ಬೆರಳೆಣಿಕೆಯಲ್ಲಿ ಮಾತ್ರ. ಅದರಲ್ಲೂ ‘ಡಿ’ ವರ್ಗದ ಉದ್ಯೋಗ ಮಾತ್ರ. ಅಭಿವೃದ್ಧಿಯ ಕನಸು ಕಂಡ ನಮಗೆ ನಿರಾಶೆ ಆಗಿದೆ. ಇಂದು ಬೃಹತ್ ಕಂಪೆನಿಗಳಿಗಿಂತ ಕಡಿಮೆ ಖರ್ಚಿನ ಗೇರುಕಾರ್ಖಾನೆಗಳಂತ ಕೈಗಾರಿಕೆ ನಿರಕ್ಷರರಿಂದ ಹಿಡಿದು ವಿದ್ಯಾವಂತರವರೆಗಿನ ಜನರಿಗೆ ಭರವಸೆಯ ಉದ್ಯೋಗಾವಕಾಶ ನೀಡಿದೆ. ಬ್ರಹ್ಮಕಲಶ, ನಾಗಮಂಡಲ, ಧರ್ಮನೇಮ ಕಾರ್ಯಕ್ರಮಗಳ ಮೂಲಕ ಸಾವಿರಾರು ಜನರಿಗೆ ಉದ್ಯೋಗಾವಕಾಶ ಲಭ್ಯವಾಗುತ್ತದೆ. ಇದರ ಹಲವು ಪಟ್ಟು ಖರ್ಚಿನ ಬೃಹತ್ ಕೈಗಾರಿಕೆಗಳು ನೀಡುವ ಉದ್ಯೋಗ ತೀರಾ ಕಡಿಮೆ ಎಂದು ಅಂಕಿ ಅಂಶಗಳೊಂದಿಗೆ ಅವರು ವಿವರಿಸಿದರು.
ಟ್ರಸ್ಟ್ನ ಜನಪರ ಕೆಲಸ ಕಾರ್ಯಗಳನ್ನು ಶ್ಲಾಘಿಸಿ ಈಗ ಆಗಬೇಕಾಗಿರುವುದು ವಿಶೇಷ ಆರ್ಥಿಕ ವಲಯ ಅಲ. ಬದಲಾಗಿ ವಿಶೇಷ ಕೃಷಿ ವಲಯ ಆಗಬೇಕು. ಇದಕ್ಕೆ ನಾನು ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳುತ್ತಾ ನಮ್ಮ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ತೆಂಗು ಬೆಳೆಗೆ ಹೆಚ್ಚು ಬೇಡಿಕೆ ಬರಲಿದೆ ಎಂದು ಸಕಾರಣವಾಗಿ ಕಟೀಲ್ ವಿವರಿಸಿದರು.
ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮನಾಥ ನಾಯಕ್ ಮಾತನಾಡಿ ವಿಷಕಾರಿ ಮ್ಯಾಗಿಯನ್ನು ನಿಷೇಧಿಸಬೇಕಾದ ಸ್ಥಿತಿ ಬಂದಿದೆ. ಕಂಪೆನಿಗಳು ನಮ್ಮ ಜನರ ಆಹಾರ ಪದ್ದತಿಯನ್ನೇ ಪ್ರಚಾರಗಳಿಂದ ಕಸಿದುಕೊಂಡಿವೆ. ನಾವು ಈಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು. ಜಿಲ್ಲೆಯ ಧಾರಣಾ ಸಾಮರ್ಥ್ಯ ಅಧ್ಯಯನದ ಮತ್ತು ಕೃಷಿ ಆಧಾರಿತ ಉದ್ಯಮಗಳ ಅಗತ್ಯವನ್ನು ಅವರು ಪ್ರತಿಪಾದಿಸಿದರು.
ಸಭಾಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಜಯಂತಿ ಪಾಲೇದುರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ.ಜಿ.ಪಂ.ಸದಸ್ಯೆ ತುಳಸಿ ಹಾರಬೆ, ತಾ.ಪಂ.ಸದಸ್ಯೆ ಮಮತಾ ಎಂ.ಶೆಟ್ಟಿ, ವಲಯ ಅರಣ್ಯಾಧಿಕಾರಿ ಹೆಚ್ ಸುಂದರಶೆಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ. ಪುಟ್ಟ ಸ್ವಾಮಿ ಇದ್ದರು.
ಟ್ರಸ್ಟ್ನ ಉಪಾಧಕ್ಷೆ ವಿದ್ಯಾ ನಾಯಕ್ ಸ್ವಾಗತಿಸಿದು. ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ.ಹೆಚ್ ವಂದಿಸಿದರು. ದಲಿತ ಅಭಿವೃದ್ಧಿ ಸಮಿತಿ ಸಂಚಾಲಕ ನಾರಾಯಣ ಕಿಲಂಗೋಡಿ ಮತ್ತು ದ.ಕ. ಪರಿಸರಾಸಕ್ತರ ಒಕ್ಕೂಟದ ಅಧ್ಯಕ್ಷ ಉಮೇಶ್ ನಿರ್ಮಲ್ ಕಾರ್ಯಕ್ರಮ ನಿರೂಪಿಸಿದರು.