ಸಂಸದ ನಳಿನ್ ಕುಮಾರ್ ಕಟೀಲ್ ಇವರು ಇಂದು ಮಾನ್ಯ ಕೇಂದ್ರ ನಾಗರೀಕ ವಿಮಾನಯಾನ ಸಚಿವರಾದ ಹರ್ದೀಪ್ ಸಿಂಗ್ ಪುರಿ ಇವರನ್ನು ಲೋಕಸಭೆಯಲ್ಲಿ ಭೇಟಿಯಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಏರ್ ಇಂಡಿಯಾ ವಿಮಾನವು ರನ್-ವೇ ಯಿಂದ ಹೊರಗೆ ಜಾರಿದ ಘಟನೆಯ ವಿವರಿಸಿದರು ಹಾಗೂ ಈ ಘಟನೆಯ ತನಿಖೆಗೆ ಆಗ್ರಹಿಸಿದರು ಅಲ್ಲದೇ ಇಂತಹ ಘಟನೆಗಳಿಗೆ ಕಾರಣವಾಗಿರುವ ರನ್-ವೇ ವಿಸ್ತರಣೆಗೆ ಮನವಿ ಸಲ್ಲಿಸಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ದಿನಾಂಕ 30-06-2019 ರಂದು ದುಬಾಯಿಯಿಂದ ಮಂಗಳೂರಿಗೆ ಆಗಮಿಸಿದ ಏರ್ ಇಂಡಿಯಾ ವಿಮಾನವು ತನ್ನ ಲಯವನ್ನು ಕಳೆದುಕೊಂಡು ರನ್-ವೇ ಯಿಂದ ಹೊರಗೆ ಜಾರಿ ಸಂಭಾವನೀಯ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿರುತ್ತದೆ. ಇದೇ ರೀತಿ ಈ ಹಿಂದೆ 2010ರ ಮೇ 22ರಂದು ದುಬಾಯಿಯಿಂದ ಮಂಗಳೂರಿಗೆ ಆಗಮಿಸಿದ ಏರ್ ಇಂಡಿಯಾ ವಿಮಾನವು ರನ್-ವೇ ಯಿಂದ ಹೊರಗೆ ಜಾರಿ ಕಂದಕಕ್ಕೆ ಉರುಳಿ ಅದರಲ್ಲಿದ್ದ 158 ಪ್ರಯಾಣಿಕರು ಮೃತಪಟ್ಟಿರುತ್ತಾರೆ. 1981 ಅಗಸ್ಟ್ 19 ರಂದು ಇಂತಹದೇ ಅವಘಢ ಸಂಭವಿಸಿರುತ್ತದೆ ಅದರೆ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿರುವುದಿಲ್ಲ. ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಈ ದುರ್ಘಟನೆಗಳಿಗೆ ಇಲ್ಲಿನ ಕಿರಿದಾದ ರನ್-ವೇಯೇ ಕಾರಣ ಎಂಬುವುದು ಸ್ಪಷ್ಟವಾಗಿರುತ್ತದೆ. ಆದುದರಿಂದ ಮಂಗಳೂರು ವಿಮಾನ ನಿಲ್ದಾಣದ ರನ್-ವೇ ಯನ್ನು ವಿಸ್ತರಿಸುವ ಬಗ್ಗೆ ಹಾಗೂ ವಿಮಾನ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸಂಸದರು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿದರು ಹಾಗೂ ಮೊನ್ನೆ ನಡೆದ ಘಟನೆಯ ತನಿಖೆಗೆ ಆಗ್ರಹಿಸಿದರು.