ಮಂಗಳೂರು: ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಗೂಗಲ್ ಹ್ಯಾಂಗೌಟ್ ಮೂಲಕ ಜಗತ್ತಿನ ನಾನಾ ಭಾಗಗಳಲ್ಲಿರುವ ಜನರೊಂದಿಗೆ ಸಂವಾದ ನಡೆಸಿದ್ದಾರೆ.
ಇದೇ ಪ್ರಪ್ರಥಮ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಜಿಲ್ಲೆಯ ರಾಜಕಾರಣಿಯೊಬ್ಬರು ಜನರ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ
ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾದರೆ ದಕ್ಷಿಣಕನ್ನಡದಲ್ಲಿ ಉದ್ಯೋಗ ಸೃಷ್ಟಿಗೆ ಏನು ಕೈಗೊಳ್ಳುತ್ತೀರಿ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಳಿನ್, ‘ಪ್ರಕೃತಿಗೆ ಯಾವುದೇ ರೀತಿಯ ಹಾನಿಯುಂಟಾಗದಂತೆ ಐಟಿ ಪಾರ್ಕ್ಗಳನ್ನು ಸ್ಥಾಪಿಸುವುದು ಹಾಗೂ ವಿಶೇಷ ಕೃಷಿ ವಲಯವನ್ನು ಸ್ಥಾಪಿಸುವುದು ಮುಂತಾದ ಹಲವು ಯೋಜನೆಗಳನ್ನು ಜಾರಿಗೊಳಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂಬ ಭರವಸೆ ನೀಡಿದರು.
ಅಲ್ಲದೇ ಮೀನುಗಾರರ ಮಕ್ಕಳ ಉಪಯೋಗಕ್ಕಾಗಿ ಫಿಶರೀಸ್ ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸುತ್ತೇನೆ. ಎನ್ಡಿಎ ಸರ್ಕಾರ ಆಡಳಿತಕ್ಕೆ ಬಂದರೆ ಈ ಯೋಜನೆಯನ್ನು ತರುವುದು ಕಷ್ಟವೇನಲ್ಲ ಎಂದರು.
ನಿಡ್ಡೋಡಿ ಮತ್ತು ಎತ್ತಿನ ಹೊಳೆಯಂತಹ ದಕ್ಷಿಣಕನ್ನಡಕ್ಕೆ ಮಾರಕವಾದ ಯಾವುದೇ ಯೋಜನೆಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸೋದಿಲ್ಲ ಎಂದರು.
ರಾಷ್ಟ್ರೀಯ ವಿಚಾರಧಾರೆಯಿಂದ ಬಂದ ನಾನು ಎಂದಿಗೂ ಜಾತಿ ರಾಜಕಾರಣ ಮಾಡೋದಿಲ್ಲ, ಇದು ಕಾಂಗ್ರೆಸ್ ಮತ್ತು ಬಿಜೆಪಿಯ ನಡುವಣ ಹೋರಾಟವೇ ಹೊರತು ಜಾತಿಗಳ ನಡುವಣ ಹೋರಾಟವಲ್ಲ ಎಂದು ಸ್ಪಷ್ಟಪಡಿಸಿದರು.
ಮಹಿಳೆಯರ ರಕ್ಷಣೆಗಾಗಿ ಕಠೋರವಾದ ಕಾನೂನಿನ ಅಗತ್ಯವಿದೆ. ಮಹಿಳೆ ಸೇರಿದಂತೆ ಪ್ರತಿಯೊಬ್ಬರ ರಕ್ಷಣೆ ಮಾಡುವುದು ಸರ್ಕಾರ ಜವಾಬ್ದಾರಿ, ಗುಜರಾತಿನಲ್ಲಿ ಕಾನೂನು ಸುವ್ಯವಸ್ಥೆ ಕೆಡದ ರೀತಿ 10ವರ್ಷ ಕಾರ್ಯ ನಿರ್ವಹಿಸಿದ ಮೋದಿಗೆ ದೇಶದ ಚುಕ್ಕಾಣಿ ಹಿಡಿಯುವ ಜವಾಬ್ದಾರಿ ನೀಡಿದರೆ ಮಹಿಳೆಯರು ನಿರ್ಭೀತಿಯಿಂದ ಓಡಾಡುವ ಕಾಲ ಬರುತ್ತದೆ ಎಂದರು.
ಜಿಲ್ಲೆಯಲ್ಲಿ ಪ್ರವಾಸೋದ್ಯವನ್ನು ಅಭಿವೃದ್ಧಿಪಡಿಸೋದು, ಅತ್ಯುನ್ನತ ಐಟಿ ಪಾರ್ಕ್ ನಿರ್ಮಿಸುವುದು, ಉತ್ತಮ ರಸ್ತೆ, ರಸ್ತೆ ಚತುಷ್ಪಥೀಕರಣ ಮುಂತಾದ ಹತ್ತು ಹಲವು ಯೋಜನೆಗಳನ್ನು ಇನ್ನೊಂದು ಅವಧಿಗೆ ಅವಕಾಶ ಕೊಟ್ಟರೆ ಮಾಡಿ ತೋರಿಸುತ್ತೇನೆ ಎಂಬ ಭರವಸೆ ನೀಡಿದರು.