ಬೆಳ್ತಂಗಡಿ: ಯುವಕರಲ್ಲಿ ಮಾದಕ ದ್ರವ್ಯಗಳ ಬಗ್ಗೆ ಆಕರ್ಷಣೆ ಹೆಚ್ಚುತ್ತಿದ್ದು ಅದನ್ನು ತಡೆಯುವ ಆಂದೋಲನವನ್ನು ಜನಜಾಗೃತಿ ವೇದಿಕೆ ಮಾಡಲಿದೆ ಮದ್ಯಪಾನ, ಡ್ರಗ್ಸ್‌ನಂತ ದುಶ್ಚಟಗಳ ಬಗ್ಗೆ ಎಚ್ಚರಿಸುವ ಕೆಲಸದಲ್ಲಿ ಮಾಧ್ಯಮದವರು ಮುಖ್ಯ ಪಾತ್ರ ವಹಿಸಬೇಕಾದ ಅವಶ್ಯಕತೆ ಇದೆ ಎಂದು ವೇದಿಕೆಯ ಗೌರವಾಧ್ಯಕ್ಷರೂ ಆಗಿರುವ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶನಿವಾರ ಉಜಿರೆ ಲಾಯಿಲ ಶ್ರೀ ಮಂಜುನಾಥೇಶ್ವರ ಕ್ಷಯ ತಪಾಸಣಾ ಆಸ್ಪತ್ರೆ ಬಳಿ ರೂ. 2 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿರುವ ಕ್ಷಯ ರೋಗದ ಸಮಸ್ಯೆಗೆ ಕಾರಣವಾಗುವ ಮದ್ಯಪಾನ ಮತ್ತು ಮಾದಕ ವಸ್ತುಗಳ ತಡೆಗಟ್ಟುವಿಕೆಗಾಗಿ ಜಾಗೃತಿ ಸೌಧ ಕಟ್ಟಡ ಹಾಗು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದುಷ್ಟ ಅಭ್ಯಾಸಗಳಿಂದ ಮನುಷ್ಯನ ವ್ಯಕ್ತಿತ್ವ ಬದಲಾಗುತ್ತದೆ ಮತ್ತು ಆತನನ್ನು ಅದು ಭ್ರಷ್ಟನನ್ನಾಗಿಸುತ್ತದೆ. ಅದನ್ನು ಬಿಟ್ಟರೆ ಆತ ಶ್ರೇಷ್ಠನಾಗುತ್ತಾನೆ. ಕ್ಷೇತ್ರಗಳು ದೋಷಗಳನ್ನು ಸ್ವೀಕರಿಸುವ ಸ್ಥಳವಾಗಿರುತ್ತದೆ. ಜಾಗೃತಿ ಸೌಧ ಪವಿತ್ರಾತ್ಮರಾಗುವಂತಹ ಕ್ಷೇತ್ರವಾಗಿದೆ. ಮಹಿಳೆಯರಲ್ಲಿ ದುಶ್ಚಟಗಳ ಬಗ್ಗೆ ಜಾಗೃತಿ ಉಂಟಾದರೆ ಮಹತ್ತರ ಬದಲಾವಣೆ ಉಂಟಾಗುತ್ತದೆ. ಇಂದು ಮದ್ಯಪಾನದಂತಹ ಅದರಲ್ಲೂ ಡ್ರಗ್ಸ್‌ನಂತಹ ದುಶ್ಚಟಗಳು ಮಕ್ಕಳಲ್ಲೂ ಸಾಮಾನ್ಯವಾಗಿದೆ. ಹೀಗಾಗಿ ನಾವೆಲ್ಲರೂ ಮನೆ ದೀಪ ಬೆಳಗಿಸುವ ಹೆಣ್ಣು ಮಕ್ಕಳ ಕಣ್ಣೀರು ಒರೆಸುವ ದೀಕ್ಷೆ ತೊಡಬೇಕಿದೆ ಎಂದರು.
ವೇದಿಕೆಯಿಂದ ನಡೆಯುವ ಮದ್ಯವರ್ಜನ ಶಿಬಿರಗಳ ಸಂಖ್ಯೆ ಸಾವಿರ ಕ್ಕೆ ತಲುಪುವ ಹಂತದಲ್ಲಿದೆ. 1000ನೇ ಶಿಬಿರವನ್ನು ಧರ್ಮಸ್ಥಳದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಮೋಹನ ಆಳ್ವ ಅವರ ನೇತೃತ್ವದಲ್ಲಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.
ಸಾಂಸದ ನಳೀನ್‌ಕುಮಾರ್ ಕಟೀಲು ಅವರು ಕಿರುಚಿತ್ರಗಳನ್ನು ಬಿಡುಗಡೆಗೊಳಿಸಿ, ಗಾಂಧೀಜಿಯವರ ಕಲ್ಪನೆಯ ರಾಮರಾಜ್ಯ, ಗ್ರಾಮರಾಜ್ಯದ ಕನಸನ್ನು ಸಾಕಾರಗೊಳಿಸುತ್ತಿರುವವರು ಡಾ| ಹೆಗ್ಗಡೆಯವರು. ಕಡೆಗಣಿಸಲ್ಪಟ್ಟವರನ್ನು ವ್ಯಕ್ತಿ ನಿರ್ಮಾಣದ ಕಾರ್ಯದ ಮೂಲಕ ರಾಮನನ್ನು ಕಾಣುವ ಈ ಕಾರ್ಯ ಅತೀ ಮುಖ್ಯವಾದದ್ದು. ಆಧ್ಯಾತ್ಮಿಕತೆಗೆ ಹಿಮಾಲಯ, ಆರ್ಥಿಕತೆಗೆ ಮುಂಬಯಿ, ಶಿಕ್ಷಣಕ್ಕೆ ದ.ಕ.ಜಿಲ್ಲೆಯಾದರೆ ಮದ್ಯವಸನ ಮುಕ್ತತೆಗೆ ವಿಕಾಸ ಸೌಧ ತೀರ್ಥಕ್ಷೇತ್ರವಾಗಿದೆ ಎಂದರು.
ಸರಕಾರ ಸಮಾಜದಲ್ಲಿ ಪರಿವರ್ತನೆ ತಂದರೆ, ಸರಕಾರದ ಕಣ್ಣು ತೆರಸುವ ಕೆಲಸ ಜನ ಜಾಗೃತಿ ವೇದಿಕೆಯ ಮೂಲಕ ಡಾ| ಹೆಗ್ಗಡೆಯವರು ಮಾಡಿದ್ದಾರೆ. ಭವಿಷ್ಯತ್‌ಕಾಲದಲ್ಲಿ ಬೆಳಕು ಮೂಡಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ. ಸ್ವಸಹಾಯ ಸಂಘಗಳ ಮೂಲಕ ಜೀವನ ಪರಿವರ್ತನೆಯಾಗಿದೆ. ಮದ್ಯವರ್ಜನದ ಚಳವಳಿ ಯಶಸ್ವಿಯಾಗಲು ಒಂದೇ ಒಂದು ದಾರಿಯೆಂದರೆ ಡಾ| ಹೆಗ್ಗಡೆಯವರ ಮಾರ್ಗದರ್ಶನವೇ ಆಗಿದೆ. ಆದರ್ಶ ಗ್ರಾಯ ಯೋಜನೆಯನ್ವಯ ಬಳ್ಪ ಗ್ರಾಮದಲ್ಲಿ ಕಳೆದ ಒಂದು ವರ್ಷದಲ್ಲಿ ಜ.ಜಾ.ವೇದಿಕೆಯ ಶಿಬಿರಗಳಿಂದಾಗಿ 102 ಮಂದಿ ಮದ್ಯಮುಕ್ತರಾಗಿದ್ದಾರೆ. ಕಳ್ಳ ಸಾರಾಯಿ ದಂಧೆ ನಿಂತು ಹೋಗಿದೆ ಎಂದು ಅವರು ಹೈಫೈ ಲೈಫ್ ನಿಂದಾಗಿ ಸ್ವದೇಶಿ ಸಂಸ್ಕೃತಿ ವಿಚಲಿತವಾಗಿದೆ. ಅನಕ್ಷರಸ್ಥರಿಗಿಂತ ಅಕ್ಷರಸ್ಥರೆ ಮದ್ಯವ್ಯಸನಿಗಳಾಗುತ್ತಿರುವುದು ದುರಂತ ಎಂದರು.
ರಜತ ಸಂಭ್ರಮ ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಮ್. ಆರ್.ರಂಗಶ್ಯಾಮಯ್ಯ ಅವರು, ಮದ್ಯಪಾನ ನಿಷೇಧಕ್ಕಾಗಿ ಮುಖ್ಯಮಂತ್ರಿಯಾದಿಗಾಗಿ ಎಲ್ಲರಿಗೂ ಪತ್ರ ಬರೆದಿದ್ದೇನೆ. ಜ.ಜಾ.ವೇದಿಕೆಯ ಶಿಬಿರಗಳಲ್ಲಿ ಮದ್ಯಪಾನಿಗಳ ಮನವೊಲಿಸಿ, ಅವರನ್ನು ಪಳಗಿಸಿ ಯೋಗ್ಯ ವ್ಯಕ್ತಿಗಳನ್ನಾಗಿ ಮಾಡುತ್ತಿರುವ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಸ್ ಅವರ ಸಾಧನೆ ಅನನ್ಯವಾದದ್ದು ಎಂದರು.
ಜನ ಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್ ಅವರು ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ಅವರನ್ನು ಸಮ್ಮಾನಿಸಿ ಅವರಿಗೆ ಸ್ವಸ್ಥ ಸಮಾಜ ಯೋಗಿ ಎಂಬ ಬಿರುದನ್ನು ಪ್ರದಾನಿಸಲಾಯಿತು. ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇಗುಲ ಆಡಳ್ತೆ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಅವರು ಮಾತೃಶ್ರೀ ಸಭಾಭವನ ಉದ್ಘಾಟಿಸಿದರು.
ವೇದಿಕೆಯಲ್ಲಿ ಶ್ರೀ.ಧ.ಮಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹಷೇಂದ್ರ ಕುಮಾರ್, ಟ್ರಸ್ಟಿ ಸುರೇಂದ್ರ ಕುಮಾರ್, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ಜಿ.ಪಂ. ಸದಸ್ಯೆ ಸೌಮ್ಯಲತಾ ಗೌಡ, ತಾ.ಪಂ.ಸದಸ್ಯೆ ಸುಧಾಕರ ಬಿ.ಎಲ್.,ಲಾಯಿಲ ಗ್ರಾ.ಪಂ.ಅಧ್ಯಕ್ಷೆ ವೀಣಾ ರಾವ್ ಇದ್ದರು.
ವಿವಿಧ ಜಿಲ್ಲೆಯ ವೇದಿಕೆಯ ಪದಾಧಿಕಾರಿಗಳು ಡಾ| ಹೆಗ್ಗಡೆಯವರನ್ನು ಗೌರವಿಸಿದರು. ಕಟ್ಟಡ ವಿನ್ಯಾಸಕಾರ ಸಂಪತ್‌ರತ್ನ ಅವರನ್ನು ಗೌರವಿಸಲಾಯಿತು. ವೇದಿಕೆ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಸ್ ಸ್ವಾಗತಿಸಿ, ಪ್ರಸ್ತಾವಿಸಿದರು. ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ ಪೂವಣಿ ವಂದಿಸಿದರು. ವೇದಿಕೆ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಕೆಲವೊಂದು ಬಾರಿ ಅಪಘಾತಗಳು ಮದ್ಯಪಾನದಿಂದಾಗುವ ಸಂಭವಿರುತ್ತದೆ. ಇದನ್ನು ಸರಕಾರ ಮತ್ತು ಮಾಧ್ಯಮಗಳು ಪ್ರಚುರಪಡಿಸಬೇಕು. ಇದರಿಂದ ಇನ್ನಷ್ಟು ಜಾಗೃತಿ ಉಂಟಾಗಲು ಸಾಧ್ಯವಿದೆ. ವೇದಿಕೆಯಿಂದಾಗಿರುವ ಯಶಸ್ಸು ಕೇವಲ ನನ್ನದು ಮಾತ್ರವಲ್ಲ. ಇದರ ಹಿಂದೆ ವಿವೇಕ್ ವಿನ್ಸೆಂಟ್ ಪಾಯಸ್‌ರಂತಹ ಸೇನಾನಿಗಳ ತಂಡವಿದೆ. ಅವರ ಕರ್ತತ್ವ ಶಕ್ತಿ, ಬದ್ಧತೆ ಇರುವುದರಿಂದಲೇ ಶಿಬಿರಗಳು ಯಶಸ್ಸು ಗಳಿಸಲು ಕಾರಣವಾಗಿದೆ. ಅವರು ನೌಕರರಂತೆ ಕೆಲಸ ಮಾಡದೆ ಸೇವಾ ಮನೋಭಾವದಿಂದ ಮಾಡುತ್ತಿರುವುದು ಶ್ಲಾಘನೀಯ– ಡಾ| ಹೆಗ್ಗಡೆ
ಪೇಟೆಗಳಲ್ಲಿ ಯುವ ಜನತೆ ಡ್ರಗ್ಸ್ ಬಲಿಯಾಗುತ್ತಿರುವುದು ಹೆಚ್ಚಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಸಭೆ ಕೆರೆದು ನಿಯಂತ್ರಣಕ್ಕೆ ತರುವಂತೆ ಸೂಚಿಸಲಾಗಿತ್ತು. ಈ ವ್ಯಸನವನ್ನು ತಡೆಗಟ್ಟಲು ಡ್ರಗ್ಸ್ ನಿಗ್ರಹ ದಳದ ಅವಶ್ಯಕತೆ ಇದೆ- ನಳೀನ್‌ಕುಮಾರ್ ಕಟೀಲು.
ಇದುವರೆಗೆ 935 ಸಮುದಾಯ ಮದ್ಯವರ್ಜನ ಶಿಬಿರಗಳನ್ನು ನಡೆಸಿ 65 ಸಾವಿರಕ್ಕೂ ಹೆಚ್ಚು ಜನರಿಗೆ ವ್ಯಸನಮುಕ್ತ ಚಿಕಿತ್ಸೆ ಮಾಡಲಿಗಿದೆ. ವಾರ್ಷಿಕವಾಗಿ 150 ಶಿಬಿರಗಳ ಮೂಲಕ 10 ಸಾವಿರಕ್ಕೂ ಮಿಕ್ಕಿದ ಮದ್ಯ ವ್ಯಸನಿಗಳಿಗೆ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಶಿಬಿರಗಳನ್ನು ನಡೆಸಲಾಗುತ್ತಿದೆ. 65 ವಿಐಪಿ ಶಿಬಿರಗಳನ್ನು ನಡೆಸಲಾಗಿದ್ದು 3000 ಮಂದಿ ವ್ಯಸನ ಮುಕ್ತರಾಗಿದ್ದಾರೆ. ಇಲ್ಲಿ ತಿಂಗಳಿಗೆ 2 ವಿಶೇಷ ಶಿಬಿರಗಳನ್ನು ನಡೆಸಲಾಗುತ್ತದೆ. 3107 ನವಜೀವನ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಶಾಲಾ ಕಾಲೇಜುಗಳಲ್ಲಿ ಪ್ರತೀ ವರ್ಷ 2 ಲಕ್ಷಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ದುಶ್ಚಟಗಳಿಗೆ ಒಳಗಾಗದಂತೆ ಪ್ರೇರೆಪಿಸುವ ಸ್ವಾಸ್ಥ್ಯ ಸಂಕಲ್ಪದ ಪಾಠವನ್ನು 632 ಸಂಪನ್ಮೂಲ ವ್ಯಕ್ತಿಗಳ ಮೂಲಕ ಭೋಧಿಸಲಾಗುತ್ತದೆ. ವಿದ್ಯಾರ್ಥಿ ಜಾಗೃತಿ ಮೂಡಿಲು ಟಿ.ಎಸ್.ನಾಗಾಭರಣ ನಿರ್ದೇಶನದಲ್ಲಿ 4 ಕಿರುಚಿತ್ರಗಳನ್ನು ನಿರ್ಮಿಸಲಾಗಿದೆ.– ವಿವೇಕ್ ವಿನ್ಸೆಂಟ್ ಪಾಯಸ್