Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಧಾರಿಣಿ ತೆಂಗು ಬೆಳೆಗಾರರ ಒಕ್ಕೂಟ ಉದ್ಘಾಟನಾ ಸಮಾರಂಭ

ಬೆಳ್ತಂಗಡಿ : ದ.ಕ. ಜಿಲ್ಲೆಯಲ್ಲಿ ವಿಶೇಷ ಕೃಷಿ ವಲಯವನ್ನು ನಿರ್ಮಿಸುವುದು (ಎಸ್.ಎ.ಝೆಡ್), ಸುಳ್ಯ-ಬೆಳ್ತಂಗಡಿಯಲ್ಲಿ ರಬ್ಬರ್ ಪಾರ್ಕ್ ಮತ್ತು ಬಂಟ್ವಾಳದಲ್ಲಿ ರಾಜ್ಯದಲ್ಲಿಯೇ ಮೊದಲ ತೆಂಗು ಪಾರ್ಕ್ ಹಾಗೂ ನೀರಾ ಘಟಕ ಸ್ಥಾಪಿಸುವ ಉದ್ದೇಶ ಸರಕಾರದ ಮುಂದಿದೆ. ಇದಕ್ಕೆ ಕೇಂದ್ರ ಸರಕಾರದ ತಜ್ಞರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಸಂಸದ ನಳಿನ್‌ ಕುಮಾರ್ ಕಟೀಲು ಪ್ರಕಟಿಸಿದ್ದಾರೆ.

21dharini

ಅವರು ಸೋಮವಾರ ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಬೆಳ್ತಂಗಡಿ ತಾಲೂಕು ಧಾರಿಣಿ ತೆಂಗು ಬೆಳೆಗಾರರ ಒಕ್ಕೂಟವನ್ನು ಉದ್ಘಾಟನಾ ಸಮಾರಂಭದಲ್ಲಿ ಒಕ್ಕೂಟದ ಲಾಂಛನವನ್ನು ಅನಾರಣಗೊಳಿಸಿ ಮಾತನಾಡಿದರು.

ದ.ಕ.ವು ಕೃಷಿಯಲ್ಲಿ ಪ್ರಯೋಗಶೀಲತೆಯನ್ನು ಹೊಂದಿರುವ ಜಿಲ್ಲೆ. ಸ್ವಾಭಿಮಾನದ ಚಿಂತನೆ ಇಲ್ಲಿನ ಕೃಷಿಕರದ್ದು .ಹೀಗಾಗಿ ಇಲ್ಲಿ ಆತ್ಮಹತ್ಯೆಗಳು ಇಲ್ಲ. ಭತ್ತಕ್ಕೆ ಭವಿಷ್ಯವಿಲ್ಲವೆಂದಾದಾಗ ತೋಟಗಾರಿಕಾ ಬೆಳೆಗಳತ್ತ ವಾಲಿದ್ದೇವೆ. ಅದು ಹಿಂದೆ ಬಿದ್ದಾಗ ವೆನಿಲ್ಲಾ, ರಬ್ಬರ್‌ ಕಡೆಗೆ ಹೊರಳಿದ್ದೇವೆ. ಆದರೆ ಅಡಿಕೆ ಉತ್ಪನ್ನದಲ್ಲಿ ಪ್ರಯೋಗಶೀಲತೆ ಕಡಿಮೆಯಾಗಿ ಅದರ ಸಂಶೋಧನೆಯಲ್ಲಿ ಹಿಂದೆ ಬಿದ್ದಿದ್ದೇವೆ. ಕ್ಯಾಂಪ್ಕೋದಿಂದಾಗಿ ಅಡಕೆಗೆ ದರ ಉಳಿದಿದೆ. ನುಸಿ, ಕೊಳೆ, ಹುಳ ರೋಗಗಳು ಬಂದಾಗ ಅದರ ನಿಯಂತ್ರಣಕ್ಕೆ ಔಷಧಿತಯಾರಿಕೆ ಆಗದಿರುವುದು ವಿಷಾದನೀಯ. ರಬ್ಬರ್ ಆಮದಿನ ಅಂತರಾಷ್ಟೀಯ ಒಪ್ಪಂದಿಂದಾಗಿ ಏನಿದ್ದರೂ 2017 ರ ವರೆಗೆ ರಬ್ಬರ್‌ ದರ ಏರುವುದರ ಬಗ್ಗೆ ಸಂಶಯ ಎಂದರು.

ಇಂದು ರೈತ ಅತಂತ್ರ ಮತ್ತು ಮಾನಸಿಕ ಚಂಚಲತೆಗೆ ಒಳಗಾಗುತ್ತಿದ್ದಾನೆ. ಕೃಷಿಯನ್ನು ಸಾಂಸ್ಕೃತಿಕ ಪರಂಪರೆಯಿಂದ ವ್ಯವಹಾರಿಕತೆಗೆ ಸೇರಿಸಿದ್ದೇವೆ. ಹೀಗಾಗಿ ಕೃಷಿ ಉದ್ದಿಮೆಯಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಕೃಷಿಕರನ್ನು ಬದುಕಿಸುವುದು ತೆಂಗು ಮಾತ್ರ. ತೆಂಗು ಬುಡದಿಂದ ತುದಿಯ ವರಿಗೆ ಉಪಯೋಗಕ್ಕೆ ಬರುವ ಕಲ್ಪವೃಕ್ಷ. ದೇಶದಲ್ಲಿ ತೆಂಗಿನ ಪೌಡರ್, ನೀರಾ ಮೊದಲಾದ ಉಪ ಉತ್ಪನ್ನಗಳಿಗೆ ಅತಿ ಹೆಚ್ಚಿನ ಬೇಡಿಕೆ ಇದೆ. ತೆಂಗಿಗೆ ದರ ಇಳಿತವಾಗದು. ನೀರಾ ತೆಗೆಯುವವರಿಗೆ ತೆಂಗು ಮಂಡಳಿ ತರಬೇತಿಯನ್ನು ನೀಡುತ್ತದೆ. ರಾಜ್ಯದಲ್ಲಿಯೇ ಪ್ರಥಮ ತೆಂಗು ಪಾರ್ಕ್ ಬಂಟ್ವಾಳದಲ್ಲಿ ಸ್ಥಾಪನೆ ಮಾಡುವ ಉದ್ದೇಶವಿದ್ದು ಇದಕ್ಕಾಗಿ ದಿಲ್ಲಿಯಲ್ಲಿ ತಜ್ಞರ ತಂಡ ಕಾರ್ಯನಿರತವಾಗಿದೆ. ಸರಕಾರದ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಈ ಪಾರ್ಕ್ ಸ್ಥಾಪಿಸಲಾಗುವುದು. ಕೃಷಿಕರು ಇದಕ್ಕೆ ಎಲ್ಲಾ ಸಹಕಾರವನ್ನು ನೀಡಬೇಕು ಎಂದರು.

ಬಂಟ್ವಾಳದ  ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ ನೀರಾ ಘಟಕ ಸ್ಥಾಪಿಸುವ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ. ರಾಜ್ಯ ಸರಕಾರ ಇದಕ್ಕೆ ಶೀಘ್ರವಾಗಿ ಸ್ಪಂದಿಸಬೇಕಾಗಿದೆ. ಮೊದಲು ಕೃಷಿಕರು ತಾನು ಕೃಷಿಕ ಎಂಬ ಕೀಳರಿಮೆ ಹೋಗಲಾಡಿಸಿ ಕೊಳ್ಳಬೇಕು ಎಂದರು.

ಒಕ್ಕೂಟವನ್ನು ಉದ್ಘಾಟಿಸಿದ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ ಅವರು ದಕ್ಷಿಣ ಕನ್ನಡವು ತೆಂಗು ಬೆಳಗೆ ಅತ್ಯಂತ ಸೂಕ್ತವಾದ ಜಿಲ್ಲೆಯಾಗಿದೆ. ಕಲ್ಪವೃಕ್ಷ ನಮ್ಮನ್ನು ಬದುಕಿಸುತ್ತದೆಎಂಬುದು ನಿಸ್ಸಂಶಯ ಎಂದರು.

ಅಧ್ಯಕ್ಷತೆಯನ್ನು ವಹಿಸಿ ಪ್ರಸ್ತಾವಿಸಿ ಸ್ವಾಗತಿಸಿದ ಒಕ್ಕೂಟದಅಧ್ಯಕ್ಷರಾಜಶೇಖರ ಹೆಬ್ಬಾರ್ ಪರಾರಿಅವರು, ದೇಶದಲ್ಲಿತೆಂಗು ಬೆಳೆಗಾರರ ೮೨೧೯ ಸಂಘಗಳಿದ್ದು ೬೧೪ ಒಕ್ಕೂಟಗಳಿವೆ. 39 ಕಂಪೆನಿಗಳಿವೆ. ಇದರಲ್ಲಿ 25 ಕಂಪೆನಿಗಳು ಕೇರಳ ಒಂದರಲ್ಲೇಕಾರ್ಯಾಚರಿಸುತ್ತಿವೆ. ಕರ್ನಾಟಕದಲ್ಲಿ 6 ಕಂಪೆನಿಗಳು ಮಾತ್ರ ಇವೆ. ದೇಶದಲ್ಲಿತೆಂಗಿನ ಶೇ.8 ರಷ್ಟು ಮಾತ್ರ ಮೌಲ್ಯವರ್ಧಿತ ಉತ್ಪನ್ನಗಳು ಇವೆ. ಈ ಒಕ್ಕೂಟವು 65 ಗ್ರಾಮಗಳ 800 ಸದಸ್ಯರನ್ನು ಹೊಂದಿದೆಎಂದರು.

ಮಂಗಳೂರು ತೆಂಗು ಉತ್ಪಾದಕರ ಜಿಲ್ಲೆ ಫೆಡರೇಶನ್‌ ಅಧ್ಯಕ್ಷ ಶ್ರೀಧರ ಶೆಟ್ಟಿ ಪುಣಚ, ಬೆಂಗಳೂರಿನ ತೆಂಗು ಮಂಡಳಿಯ ತಾಂತ್ರಿಕ ಸಹ ನಿರ್ದೇಶಕಿ ಸಿಮಿ ಥಾಮಸ್, ಉಡುಪಿ ಸಹಾಯಕ ತೋಟಗಾರಿಕಾ ನಿರ್ದೇಶಕ ಸಂಜೀವ ನಾಯ್ಕ, ಬೆಳ್ತಂಗಡಿ ಸಹಾಯಕ ತೋಟಗಾರಿಕಾ ನಿರ್ದೇಶಕಿ ದಿವ್ಯಾ ಹೆಚ್.ಸಿ., ಮುರುವ ಮಹಾಬಲ ಭಟ್, ಸೇವಾ ಭಾರತಿ ಅಧ್ಯಕ್ಷ ಹರೀಶ್‌ರಾವ್ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಒಕ್ಕೂಟ ಸದಸ್ಯರಾದ ದೇವಪಾಲ ಅಜ್ರಿ ಪಟ್ರಮೆ, ಜನಾರ್ದನಗೌಡ ನೂಜಿತೋಟತ್ತಾಡಿ, ಶಿವಭಟ್ ಅಳದಂಗಡಿ, ಪಿ.ವಸಂತ ಮಚ್ಚಿನ, ಬಿ.ಶಿವಾನಂದ ಮಯ್ಯ ಅರಸಿನಮಕ್ಕಿ, ಜಿನ್ನಪ್ಪಗೌಡ ನಿಡ್ಲೆ ಉಪಸ್ಥಿತರಿದ್ದರು.ಸೇವಾ ಭಾರತಿ ಕನ್ಯಾಡಿಇದರ ಸಂಯೋಜಕ ವಿನಾಯಕರಾವ್‌ ಕನ್ಯಾಡಿ ಮಾರ್ಗದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಅರ್ಧ ದಿನದಲ್ಲಿ 50ಕ್ಕೂ ಹೆಚ್ಚಿನತೆಂಗಿನ ಮರಏರುವ ಮತ್ತು ದಿನದಲ್ಲಿ ಒಂದೂವರೆ ಸಾವಿರಕ್ಕಿಂತಲೂ ಹೆಚ್ಚು ತೆಂಗಿನ ಸಿಪ್ಪೆ ಸುಲಿಯುವ ನಿತ್ಯ ಕಾಯಕದವರಾದ ಕೆಂಪ ನಾವೂರು, ಬಾಬು ದೇವಾಡಿಗ ಪಿಲ್ಯ, ಕಿಟ್ಟು ಮೂಲ್ಯ ಕುದ್ಯಾಡಿ, ನಾರಾಯಣ ಮಡಿವಾಳ ಸುಲ್ಕೇರಿ ಮೊಗ್ರು, ಲಾದ್ರು ಪಿರೇರಾ ಕುದ್ಯಾಡಿ, ಮೊಯ್ದು ಕಕ್ಕಿಂಜೆ, ಜಯಂತ ನಾಯ್ಕ ಮಾಚಾರ್, ಪ್ರಸಾದ್ ಕಾಶಿಬೆಟ್ಟು, ಡೀಕಯ್ಯ ನಾಯ್ಕ ಕಲ್ಮಂಜ, ಗೋವಿಂದ ನಿಡ್ಲೆ, ರವಿಪೂಜಾರಿ ಸಾವ್ಯ, ಈಶ್ವರ ಅಳದಂಗಡಿ ಇವರನ್ನು ಸಂಸದರು ಗೌರವಿಸಿದರು.

ಕಾರ್ಯಕ್ರಮದ ಬಳಿಕ ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಶ್ರೀಶ ಕುಮಾರ್ ಎಂ.ಕೆ. ಅವರು ಮಳೆ ನೀರುಕೊಯ್ಲು- ಇಂದಿನ ಅನಿವಾರ್ಯತೆ ಕುರಿತು ಮಾತನಾಡಿದರು. ಒಕ್ಕೂಟದ ಕಾರ್ಯದರ್ಶಿ ಗಜಾನನ ವಝೆ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎಂ.ಕೆ.ಶ್ರೀಕಾಂತ ರಾವ್ ವಂದಿಸಿದರು.

ರಬ್ಬರ್‌ಗೆ ಕೇರಳದಲ್ಲಿ ಬೆಂಬಲ ಬೆಲೆ ಘೋಷಿಸಲಾಗಿದೆ. ಆದರೆ ನಮ್ಮ ರಾಜ್ಯ ಮಾತ್ರ ಇದರ ಬಗ್ಗೆ ಅವಲೋಕನವನ್ನೇ ಮಾಡಿಲ್ಲ. ಇಷ್ಟೇ ಅಲ್ಲದೆ ಸರಕಾರ ನೀರಾವನ್ನು ಹೊರಗಿಟ್ಟಿರುವುದು ಸರಿಯಲ್ಲ. ತೆಂಗಿನಿಂದ ನೀರಾ ತೆಗೆಯಲು ಅವಕಾಶ ನೀಡಬೇಕು. ಇದು ಮಾದಕ ಪೇಯವಲ್ಲ ಬದಲಾಗಿ ಕಲ್ಪ ರಸ – ನಳೀನ್.

ನಿಡ್ಡೋಡಿ ಉಷ್ಣವಿದ್ಯುತ್ ಸ್ಥಾವರವನ್ನು ಮತ್ತು ಸೆಝ್ ವಿಚಾರದಲ್ಲಿ ಪ್ರತಿಭಟಿಸಿದಾಗ ಹಲವು ರೈತರೇ ನನ್ನನ್ನು ವಿರೋಧಿಸಿದ್ದರು. ಕೃಷಿ ಭೂಮಿಗೆ ನಾಲ್ಕು ಪಟ್ಟು ಬೆಲೆ ಕೊಡುವಾಗ ನಿವ್ಯಾಕೆ ಪ್ರತಿಭಟಿಸುತ್ತೀರಿ ಎಂದು ನನ್ನನ್ನು ಪ್ರಶ್ನಿಸುತ್ತಿದ್ದರು. ಹೀಗಾಗಿ ಭೂಮಿಯ ವಿಚಾರದಲ್ಲಿ ಕೃಷಿಕರಿಂದ ಲಾಭ ನಷ್ಟದ ಲೆಕ್ಕಾಚಾರವೂ ನಡೆಯುತ್ತದೆ- ನಳೀನ್

Highslide for Wordpress Plugin