ನವದೆಹಲಿ : ಭೂ ದಾಖಲೆಗಳ ಗಣಕೀಕರಣ ಹಾಗೂ ನವೀಕರಣ ಕಾರ್ಯಕ್ರಮವನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿರುತ್ತಾರೆ.
ಲೋಕಸಭೆ ಕಲಾಪದ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ನಿಗದಿತ ಅವಧಿಯೊಳಗೆ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಿ ನವೀಕರಿಸಬೇಕು, ಯಾವುದೇ ನ್ಯೂನತೆಯಾಗದಂತೆ ಕ್ರಮಕೈಗೊಳ್ಳಬೇಕು. ಈ ಯೋಜನೆಗೆ ನೀಡಿರುವ ಅನುದಾನ ವಿವರ ನೀಡುವಂತೆ ಚುಕ್ಕೆ ಗುರುತಿನ ಪ್ರಶ್ನೆಯ ಮೂಲಕ ಗ್ರಾಮೀಣಾಭಿವೃದ್ಧಿ ಹಾಗೂ ಭೂ ಸಂಪನ್ಮೂಲ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರನ್ನು ಒತ್ತಾಯಿಸಿದರು.
ಭೂದಾಖಲೆಗಳ ನವೀಕರಣಕ್ಕಾಗಿ ನ್ಯಾಷನಲ್ ಲ್ಯಾಂಡ್ ರೆಕಾರ್ಡ್ಸ್ ಮಾರ್ಡನೈಜೇಷನ್ ಪ್ರೋಗ್ರಾಂ ಅನ್ನು 2008 ರಿಂದ ಅನುಷ್ಟಾನಗೊಳಿಸಲಾಗಿದೆ. ಪ್ರಸ್ತುತವಾಗಿ ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ ಮಾರ್ಡನೈಜೇಷನ್ ಪ್ರೋಗ್ರಾಂ ಎಂದು ಮರುನಾಮಕರಣ ಮಾಡಿ ದಾಖಲಾತಿಗಳ ನವೀಕರಣ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ರಾಜ್ಯ ಸರಕಾರಗಳಿಗೆ 1171 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. 457 ಜಿಲ್ಲೆಯಲ್ಲಿ ಕಾರ್ಯವು ಪ್ರಗತಿಯಲ್ಲಿದೆ. ಯೋಜನೆಯು 2021-22 ರೊಳಗೆ ಪೂರ್ಣಗೊಳ್ಳಲಿದೆ. ಭೂ ದಾಖಲಾತಿಗಳ ಗಣಕೀಕರಣ ಕಾರ್ಯವು ಕರ್ನಾಟಕ ಸೇರಿದಂತೆ 31 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಗತಿಯಲ್ಲಿದೆ. ವಿವಿಧ ರಾಜ್ಯಗಳಲ್ಲಿ ವಿವಿಧ ಆಸ್ತಿಗಳ ಏಕೀಕೃತ ನೊಂದಣಿ ಕಾರ್ಯವು ಪ್ರಗತಿಯಲ್ಲಿದೆ ಎಂದು ಕೇಂದ್ರ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಉತ್ತರಿಸಿರುತ್ತಾರೆ.