Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಮುಂಬೈಗೆ ಮಂಗಳೂರಿನಿಂದ ವಂದೇ ಭಾರತ್ ರೈಲು ವಿಸ್ತರಣೆಗೆ ನಳಿನ್ ಪತ್ರ

ಮುಂಬೈಗೆ ಮಂಗಳೂರಿನಿಂದ ವಂದೇ ಭಾರತ್ ರೈಲು ವಿಸ್ತರಣೆಗೆ ನಳಿನ್ ಪತ್ರ
ಪ್ರಯಾಣಿಕರ ಅನುಕೂಲತೆಗೆ ಇದು ಅಗತ್ಯ ಎಂದು ರೈಲ್ವೆ ಸಚಿವರಿಗೆ ಮನವಿ

ಮಂಗಳೂರು ಸೆಂಟ್ರಲ್ – ಮಡಗಾಂ ಮಧ್ಯೆ ಸಂಚರಿಸುತ್ತಿರುವ ವಂದೇ ಭಾರತ್ (ವಿ.ಬಿ) ರೈಲನ್ನು ಮುಂಬಯಿಯವರೆಗೆ ವಿಸ್ತರಿಸುವ ಮೂಲಕ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಯಾಣಿಕರಿಗೆ ನ್ಯಾಯ ಒದಗಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪ್ರಸ್ತುತ ಕೆಲವರು ಮಂಗಳೂರು ವಂದೇ ಭಾರತ್ ರೈಲನ್ನೇ ಕೋಯಿಕ್ಕೋಡ್ ಗೆ ವಿಸ್ತರಿಸಬೇಕೆಂಬ ಬೇಡಿಕೆ ಮಂಡಿಸಿರುವುದು ಕಂಡುಬಂದಿದೆ. ಆದರೆ ಈ ವಿಸ್ತರಣೆಯಿಂದ ಯಾವುದೇ ಉಪಯೋಗವಿಲ್ಲ. ಅದರ ಬದಲಿಗೆ ಮುಂಬೈಗೆ ವಿಸ್ತರಿಸುವುದರಿಂದ ಹೆಚ್ಚು ಉಪಯೋಗವಿದೆ. ಮಂಗಳೂರು ಭಾಗದಿಂದ ಮುಂಬೈಗೆ ತೆರಳುವ ಎಲ್ಲಾ ರೈಲುಗಳಲ್ಲಿ ಯಾವಾಗಲೂ ಆಸನಗಳು ಭರ್ತಿಯಾಗುವುದರಿಂದ ಈ ರೂಟಿನಲ್ಲಿ ವಂದೇ ಭಾರತ್ ರೈಲು ಓಡಿಸಿದರೆ ಜನರಿಗೂ ಹೆಚ್ಚು ಉಪಯೋಗವಾಗಲಿದೆ. ಮಂಗಳೂರಿನಿಂದ ಮುಂಬೈಗೆ ಉದ್ಯೋಗ, ವ್ಯವಹಾರಕ್ಕೆ ತೆರಳುವವರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.

ಎರಡು ಪ್ರಮುಖ ಕಡೆ ನಿಲುಗಡೆಗೆ ಮನವಿ

ಈಗ ಈ ರೈಲು ಮೂಕಾಂಬಿಕಾ ರೋಡ್ ಬೈಂದೂರು ಮತ್ತು ಕುಮಟಾ ನಿಲ್ದಾಣಗಳಲ್ಲಿ ನಿಲುಗಡೆಯಿಲ್ಲ. ಈ ಪ್ರದೇಶಗಳಿಗೆ ದೊಡ್ಡ ಸಂಖ್ಯೆಯಲ್ಲಿ ಯಾತ್ರಿಕರು ಬರುತ್ತಾರೆ. ಆದರೆ ವಂದೇ ಭಾರತ್ ಗೆ ನಿಲುಗಡೆ ಇರದ ಕಾರಣ ಪ್ರಯಾಣಿಕರು ಸೌಲಭ್ಯವನ್ನು ಬಳಸಿಕೊಳ್ಳದಂತಾಗಿದೆ. ಮುಂಬೈಗೆ ವಿಸ್ತರಣೆಯಾಗುವಾಗಲೂ ಈ ಎರಡು ನಿಲ್ದಾಣಗಳಲ್ಲಿ ನಿಲುಗಡೆ ಒದಗಿಸಬೇಕು ಎಂದು ನಳಿನ್ ಒತ್ತಾಯಿಸಿದ್ದಾರೆ.
ಇತರ ರೈಲುಗಳಿಗಿಂತ ವಂದೇ ಭಾರತ್ ರೈಲಿನಲ್ಲಿ ಹೆಚ್ಚಿನ ಸೌಲಭ್ಯ, ಉತ್ತಮ ಆಸನ ವ್ಯವಸ್ಥೆ, ಅಧಿಕ ವೇಗ ಹಾಗೂ ಆರಾಮದಾಯಕವಾಗಿದೆ. ಹಾಗಾಗಿ 12 ಗಂಟೆಗಿಂತ ಅಧಿಕ ಪ್ರಯಾಣ ಅವಧಿ ಇದ್ದರೂ ಕುಳಿತು ಪ್ರಯಾಣಿಸುವುದು ತ್ರಾಸದಾಯಕವಲ್ಲ. ಹಾಗಾಗಿ ವಂದೇ ಭಾರತ್ ಮುಂಬಯಿಗೆ ವಿಸ್ತರಣೆಯಾಗಲಿ ಎಂದು ಒತ್ತಾಯಿಸಿದ್ದಾರೆ.
ಮಂಗಳೂರು – ಮಡಗಾಂ ವಿಸ್ತರಣೆ ಅಸಾಧ್ಯವಾದರೆ ಮಂಗಳೂರು – ಮಡಗಾಂ ರೈಲನ್ನೇ ಮುಂಬೈಗೆ ಈಗಿರುವ ಕೋಚ್ ಗಳೊಂದಿಗೆ ವಾರಕ್ಕೆ ಮೂರು ದಿನಗಳಂತೆ ಮುಂಬೈ ಮತ್ತು ಮಂಗಳೂರು ಸೆಂಟ್ರಲ್ ಮಧ್ಯೆ ಓಡಿಸಿದರೆ ಜನರಿಗೆ ಅನುಕೂಲವಾಗಲಿದೆ. ಹಾಗೆಯೇ ಪ್ರವಾಸೋದ್ಯಮಕ್ಕೂ ಪುಷ್ಟಿ ಸಿಗಲಿದೆ ಎಂದು ತಿಳಿಸಿದ್ದಾರೆ.

Highslide for Wordpress Plugin