ಪುತ್ತೂರು: ವಿದ್ಯಾರ್ಥಿಗಳು ಹಾಗೂ ಯುವಕರು ಕೇವಲ ಅಂಕ ಗಳಿಸಲು, ಉದ್ಯೋಗ ಪಡೆಯಲು ಮಾತ್ರವೇ ಓಡಾಡಬೇಡಿ. ಸಮಾಜದ ಕಡೆಗೂ ಕೊಂಚ ಚಿಂತಿಸಿ, ನಾಯಕತ್ವ ಗುಣ ಬೆಳೆಸಿಕೊಳ್ಳಿ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಪುತ್ತೂರು ನಟರಾಜ ವೇದಿಕೆಯಲ್ಲಿ ಬುಧವಾರ ನಡೆದ ಜಿಲ್ಲಾ ಯುವ ಸಮಾವೇಶ, ಯುವಕೃತಿ ವಸ್ತುಪ್ರದರ್ಶನ ಹಾಗೂ ಜಿಲ್ಲಾ ಅತ್ಯುತ್ತಮ ಯುವಮಂಡಳ ಪ್ರಶಸ್ತಿ ಪ್ರದಾನ ಮತ್ತು ಯುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯುವ ತಂಡಗಳು ಕ್ರಿಯಾತ್ಮಕವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಆಗಬೇಕಾಗಿದೆ. ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವುದರ ಜೊತೆಗೆ ಸಮಾಜದ ಆಗುಹೋಗುಗಳಿಗೂ ಸ್ಪಂದಿಸುವ ಮನೋಭಾವ ಬೆಳೆಸಬೇಕಾಗಿದೆ. ಇದಕ್ಕಾಗಿ ಯುವಕರಲ್ಲಿ ಧೈರ್ಯ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಇದಕ್ಕೆ ಪೂರಕವಾಗಿ ಕೇಂದ್ರ ಸಚಿವಾಲಯಗಳಿಂದ ಮಾಡಬೇಕಾದ ಕಾರ್ಯಗಳ ಬಗ್ಗೆ ಇಲಾಖೆಯ , ಇಲಾಖಾ ಸಚಿವರ ಜೊತೆ ಮಾತನಾಡುವುದಾಗಿ ನಳಿನ್ ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ವಹಿಸಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಅತ್ಯುತ್ತಮ ಯುವಮಂಡಳ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಯುವ ಸಾಧಕರುಗಳಾದ ಕಂದ್ರಪ್ಪಾಡಿ ಶೃತಿ ಯುವತಿ ಮಂಡಲದ ಪ್ರತಿಭಾ ಕೆಸಿ, ರೇಖಾ ಹಾಗೂ ಗೀತಾ ಕಡ್ಯ ಇವರನ್ನು ಗೌರವಿಸಲಾಯಿತು.