ಸರಕಾರದ ಯೋಜನೆಗಳ ಯಶಸ್ಸು ಜನಸಾಮಾನ್ಯರ ಸಹಭಾಗಿತ್ವದಿಂದ ಮಾತ್ರ ಸಾಧ್ಯ : ಸಂಸದ ನಳಿನ್ ಕುಮಾರ್ ಕಟೀಲ್
ಸುಳ್ಯ : ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಜನಸಾಮಾನ್ಯರು ಸಂಪೂರ್ಣವಾಗಿ ತೊಡಗಿಸಿಕೊಂಡರೆ ಮಾತ್ರ ಯೋಜನೆಗಳು ಯಶಸ್ವಿಯಾಗಲು ಸಾಧ್ಯ. ಜನಪ್ರತಿನಿಧಿಗಳು ಸರಕಾರದ ಅಧಿಕಾರಿಗಳಿಗಿಂತ, ಜನಸಾಮಾನ್ಯರ ಸಹಭಾಗಿತ್ವ ಅತೀ ಮುಖ್ಯ. ಆ ನಿಟ್ಟಿನಲ್ಲಿ `ಸಂಸದರ ಆದರ್ಶ ಗ್ರಾಮ ಯೋಜನೆ’ ಜನರ ಯೋಜನೆಯಾಗಿ ರೂಪುಗೊಂಡಿದೆ. ಇದು ಜನರ ಮನ, ಮನೆಗಳನ್ನು ತಲುಪುವಂತಾಗಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕರೆ ನೀಡಿದರು.
ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಆಯ್ಕೆ ಮಾಡಿದ ಸುಳ್ಯ ತಾಲೂಕಿನ ಬಳ್ಪ ಗ್ರಾಮದಲ್ಲಿ ಯೋಜನೆಯ ಅನುಷ್ಠಾನದ ಬಗ್ಗೆ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಹಾಗೂ ಗ್ರಾಮಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರೋಗ್ಯ, ಸ್ವಚ್ಛತೆ, ಶಿಕ್ಷಣ, ಹಸಿರಿನ ಸಿರಿ ಹಾಗೂ ಸಮುದಾಯಗಳಲ್ಲಿ ಸೌಹಾರ್ದತೆ ಸಾಧಿಸುವುದು ಈ ಯೋಜನೆಯ ಸದುದ್ಧೇಶವಾಗಿದೆ. ಗ್ರಾಮಸ್ಥರು ವೈಯಕ್ತಿಕ, ಆರ್ಥಿಕ, ಸಾಮಾಜಿಕ, ಪರಿಸರ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಸಾಧ್ಯವಿರುವ ಯೋಜನೆ ಇದಾಗಿರುತ್ತದೆ. ಗ್ರಾಮದ ಅಭಿವೃದ್ದಿ ಬಗ್ಗೆ ಬೇಡಿಕೆ ಇರಿಸುವುದು ಜನತೆ ಹಕ್ಕು. ಪ್ರಜ್ಞಾವಂತ ನಾಗರಿಕರು ಸಕಾಲದಲ್ಲಿ ತೆರಿಗೆ ಪಾವತಿಸುವ ಮೂಲಕ ಪಂಚಾಯಿತಿಯ ಪ್ರಗತಿ ಕಾರ್ಯದಲ್ಲಿ ಕೈಜೋಡಿಸಬೇಕು. ಸಾರ್ವಜನಿಕರು ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳವಂತೆ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಳ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆಗಳ ಅಭಿವೃದ್ಧಿ, ರಾಷ್ಟ್ರೀಕೃತ ಬ್ಯಾಂಕ್ ಶಾಖೆ, ಗ್ರಾಮದ ರಸ್ತೆಗಳ ಅಭಿವೃದ್ಧಿ, ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸುವ ಅವಶ್ಯಕತೆ ಸೇರಿದಂತೆ ಕೃಷಿ, ಕಂದಾಯ, ಪಶುಸಂಗೋಪನಾ, ಮೆಸ್ಕಾಂ, ಆರೋಗ್ಯ ಇಲಾಖೆ, ಶಿಕ್ಷಣ, ಜಲಾನಯನ ಇಲಾಖೆಗಳಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಗ್ರಾಮಸ್ಥರು ಸಲ್ಲಿಸಿದರು. ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂದು ಕೆಲವರು ದೂರಿದರು. ಅಕ್ರಮ ಮದ್ಯ ಮಾರಾಟ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ ಸಂಸದರು, ಎಲ್ಲ ಇಲಾಖೆಯ ಅಧಿಕಾರಿಗಳು ಒಂದು ವಾರದಲ್ಲಿ ಸಾಧ್ಯತಾ ವರದಿ ಸಲ್ಲಿಸಲು ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ 42 ಅಧಿಕಾರಿಗಳು ಅಲ್ಲದೆ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಾರ್ವಜನಿಕ ವಲಯದ ಕೈಗಾರಿಕಾ ಉದ್ಯಮಿಗಳು, ಎಂ.ಆರ್.ಪಿ.ಎಲ್, ಓ.ಎಂ.ಪಿ.ಎಲ್, ಎಸ್.ಈ.ಝಡ್, ಎಂ.ಸಿ.ಎಫ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಸ್ಥರು, ಶ್ರೀನಿವಾಸ ವಿದ್ಯಾಸಂಸ್ಥೆಗಳ ಇಂಜನೀಯರ್ಗಳು, ಮುಖ್ಯಸ್ಥರು ಭಾಗವಹಿಸಿ ಬಳ್ಪ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ತಮ್ಮ ತಮ್ಮ ಕೊಡುಗೆಗಳನ್ನು ಘೋಷಿಸಿದರು.
ವೇದಿಕೆಯಲ್ಲಿ ಸುಳ್ಯ ಶಾಸಕ ಶ್ರೀ ಅಂಗಾರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ. ಆಶಾ ತಿಮ್ಮಪ್ಪ, ಅಪರ ಜಿಲ್ಲಾಧಿಕಾರಿಯವರಾದ ಶ್ರೀ ಸದಾಶಿವ ಪ್ರಭು, ಜಿಲ್ಲಾ ಪಂ. ಉಪಕಾರ್ಯದರ್ಶಿ ಶ್ರೀ ಉಮೇಶ್, ಈ ಯೋಜನೆಯ ಅನುಷ್ಠಾನಾಧಿಕಾರಿ ಶ್ರೀ ಲೋಕೇಶ್, ಜಿ.ಪಂ.ಸದಸ್ಯ ಕೆ.ಎಸ್.ದೇವರಾಜ್, ತಾ.ಪಂ.ಅಧ್ಯಕ್ಷ ಜಯಪ್ರಕಾಶ್ ಕುಂಚಿನಡ್ಕ, ತಾ.ಪಂ.ಸದಸ್ಯೆ ವಿಮಲಾ ರಂಗಯ್ಯ, ಬಳ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ.ಪಿ.ಎಸ್ ಮತ್ತಿತರರು ಹಾಜರಿದ್ದರು.