ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ. ವೇದವ್ಯಾಸ್ ಕಾಮತ್ ರವರು ದಿನಾಂಕ 30-5-2018 ರಂದು ಬೆಳಗ್ಗಿನಿಂದ ನಿನ್ನೆ ಸುರಿದ ಧಾರಾಕಾರ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ, ಅವಲೋಕನ ನಡೆಸಿ ಪರಿಹಾರದ ಭರವಸೆ ನೀಡಿದರು.
ಬಿಜೈ ಆನೆಗುಂಡಿ ಪ್ರದೇಶದಲ್ಲಿ ಸುಮಾರು 32 ಮನೆಗಳಿಗೆ ಹಾನಿಯಾಗಿವೆ, ಕದ್ರಿ ಪ್ರದೇಶದಲ್ಲಿ ಸುಮಾರು 10 ಸ್ಥಳಗಳಲ್ಲಿ ಮನೆಗಳ ಹಾನಿ, ಶಕ್ತಿನಗರ, ಕುಂಟಲ್ಪಾಡಿ ಪ್ರದೇಶದಲ್ಲಿ 5 ಮನೆಗಳು ಹಾನಿಯಾಗಿವೆ , ಸರಿಪಳ್ಳ ಕೃತಕ ನೆರೆಯಿಂದ ಮನೆಗಳಿಗೆ ಹಾನಿಯಾಗಿದೆ ಎನ್ನಲಾಗಿದೆ.
ಈಗಾಗಲೇ ನಗರದಲ್ಲಿ 1,500 ಕ್ಕೂ ಅಧಿಕ ಜನರಿಗೆ ತೀವ್ರ ತೊಂದರೆಗಳಾಗಿದ್ದು ಸಾರ್ವಜನಿಕರು, ಜಿಲ್ಲಾಡಳಿತ , ಪೊಲೀಸ್ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದು , ನಗರದ ಜ್ಯೋತಿ ವೃತ್ತ , ಕೆ.ಎಂ.ಸಿ ಆಸ್ಪತ್ರೆ , ಪಡೀಲ್ ರೈಲ್ವೆ ಅಂಡರ್ ಪಾಸ್, ಕೊಡಿಯಾಲ್ ಬೈಲ್,ಕೊಟ್ಟಾರ ಮುಂತಾದ ಕಡೆ ಧಾರಾಕಾರವಾಗಿ ಮಳೆ ಸುರಿದಿದ್ದು ಜನ ಸಂಚಾರ ಮತ್ತು ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು ರಸ್ತೆಯಲ್ಲೇ ನದಿಯಂತೆ ನೀರು ನಿಂತಿದ್ದು ಟ್ರಾಫಿಕ್ ಜಾಮ್ ಕೂಡಾ ಉಂಟಾಗಿತ್ತು.
ಹಲವೆಡೆ ಸಂಸದರು ಹಾಗೂ ಶಾಸಕರು ಭೇಟಿ ನೀಡಿದ್ದು ಸೂಕ್ತ ಪರಿಹಾರ ನೀಡುವ ಬಗ್ಗೆ ಆಶ್ವಾಸನೆ ನೀಡಿದ್ದಾರೆ. ಸುಮಾರು 500 ಕ್ಕೂ ಅಧಿಕ ಸಂತ್ರಸ್ಥರಿಗೆ ವಸತಿ ಮತ್ತು ಆಹಾರ ಪೂರೈಕೆ ವ್ಯಸ್ಥೆಯನ್ನು ಮಾಡಲಾಗಿದೆ ಎಂದು ಶಾಸಕ ಡಿ. ವೇದವ್ಯಾಸ್ ಕಾಮತ್ ತಿಳಿಸಿದರು.