Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಅಂಗನವಾಡಿ ಕಾರ್ಯಕರ್ತೆಯರ ರಾಜ್ಯ ಸಮ್ಮೇಳನಕ್ಕೆ ತೆರೆ

ಸುಳ್ಯ: ಸುಳ್ಯದಲ್ಲಿ ನಡೆದ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ರಾಜ್ಯ ಸಮ್ಮೇಳನ `ಸ್ನೇಹ ಸಂಗಮ’ ಸಮಾಪನಗೊಂಡಿತು. ಸಂಸದ ನಳಿನ್‌ಕುಮಾರ್ ಕಟೀಲ್ ಸಮಾರೋಪ ಭಾಷಣ ಮಾಡಿದರು. ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸೇವೆ ಮತ್ತು ಕರ್ತವ್ಯ ಮಹತ್ತರವಾದುದು ಮತ್ತು ಶ್ಲಾಘನೀಯ. ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿರ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನೂ ನಡೆಸಲಾಗುವುದು. ಈ ಸಮ್ಮೇಳನದಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಿರುವ ಮನವಿಯನ್ನು ಪ್ರಧಾನಿಗೆ ತಲುಪಿಸಿ ಬೇಡಿಕೆ ಈಡೇರಿಸುವ ಬಗ್ಗೆ ಒತ್ತಾಯ ಮಾಡುತ್ತೇನೆ ಎಂದು ಅವರು ಹೇಳಿದರು.

SUL-15MAR-1

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮುಖ್ಯ ಅತಿಥಿಯಾಗಿದ್ದರು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿರು ಮುಂದಿಟ್ಟ ಎಲ್ಲಾ ಬೇಡಿಕೆಗಳನ್ನೂ ಸರ್ಕಾರದ ಮುಂದೆ ಪ್ರಸ್ತಾಪಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಅವರು ಭರವಸೆ ನೀಡಿದರು. ಮುಖ್ಯಮಂತ್ರಿ ಬಳಿ ನಿಯೋಗ ಕೊಂಡು ಹೋಗಿ ಬೇಡಿಕೆಗಳನ್ನು ಅವರ ಮುಂದಿಟ್ಟು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು. ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಈ ಬಾರಿ ಬಜೆಟ್‌ನಲ್ಲೂ ಸರ್ಕಾರ ಗೌರವಧನ ಹೆಚ್ಚಳ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೌಲಭ್ಯ ದೊರಕಿಸುವ ಪ್ರಯತ್ನ ನಡೆಯಲಿದೆ ಎಂದರು.

ನಗರ ಪಂಚಾಯಿತಿ ಅಧ್ಯಕ್ಷ ಎನ್.ಎ.ರಾಮಚಂದ್ರ ಸನ್ಮಾನ ನೆರವೇರಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ನವೀನ್‌ಕುಮಾರ್ ಮೇನಾಲ ಅಧ್ಯಕ್ಷತೆ ವಹಿಸಿದ್ದರು. ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಹರೀಶ್ ಕಂಜಿಪಿಲಿ, ತಾಲೂಕು ಪಂಚಾಯಿತಿ ಸದಸ್ಯೆ ಗುಣವತಿ ಕೊಲ್ಲಂತ್ತಡ್ಕ, ಮುಖ್ಯ ಅತಿಥಿಗಳಾಗಿದ್ದರು. ಸಮಾರಂಭದಲ್ಲಿ ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ ನೀರಬಿದಿರೆ, ಅತ್ಯುತ್ತಮ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನು, ಸಮಾವೇಶ ನಿರ್ದೇಶಕ ಲೋಕೇಶ್ ಪೆರ್ಲಂಪಾಡಿ ಮತ್ತು ಸುಳ್ಯ ತಾಲೂಕು ಘಟಕದ ಅಧ್ಯಕ್ಷೆ ಲತಾ ಅಂಬೆಕಲ್ಲು ಅವರನ್ನು ಸನ್ಮಾನಿಸಲಾಯಿತು.

ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಕನ್ಯಾ, ರಾಜ್ಯ ಸಂಘದ ಅಧ್ಯಕ್ಷೆ ಜಯಲಕ್ಷ್ಮಿ, ಜಿಲ್ಲಾ ಸಂಘದ ಅಧ್ಯಕ್ಷ ವಿಶಾಲಾಕ್ಷಿ, ಸುಳ್ಯ ಸ್ತ್ರೀಶಕ್ತಿ ಸೊಸೈಟಿ ಅಧ್ಯಕ್ಷೆ ಉಷಾ ಜಯರಾಮ, ನಿವೃತ್ತ ಮೇಲ್ವಿಚಾರಕಿ ಗಿರಿಜಾ, ಸ್ತ್ರೀಶಕ್ತಿ ಸೊಸೈಟಿಯ ಗೀತಾ ಕೋಲ್ಚಾರ್, ಸುಳ್ಯ ಸಂಘದ ಪದಾಧಿಕಾರಿಗಳಾದ ಲತಾ ಕಾಯರ್ತೋಡಿ, ಜಯಂತಿ ರಾಜಾರಾಮಪುರ, ಚೆರಿಯಮ್ಮ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಸಂಘದಿಂದ ಪ್ರವರ್ತಿಸಲಾಗುವ ಸಹಕಾರಿ ಸಂಘಕ್ಕೆ ಚಾಲನೆ ನೀಡಲಾಯಿತು ಮತ್ತು ಸಮ್ಮೇಳನ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಅಧ್ಯಕ್ಷೆ ಲತಾ ಅಂಬೆಕಲ್ಲು ಸ್ವಾಗತಿಸಿದರು. ನಿವೇದಿತಾ ಕೋನಡ್ಕಪದವು ಸನ್ಮಾನಿತರನ್ನು ಪರಿಚಯಿಸಿದರು. ಮೋಹಿನ ಬಳ್ಪ ಸನ್ಮಾನ ಪತ್ರ ವಾಚಿಸಿದರು. ಸಮಾವೇಶ ನಿರ್ದೇಶಕ ಲೋಕೇಶ್ ಪೆರ್ಲಂಪಾಡಿ ವಂದಿಸಿದರು. ಶಶಿಧರ್ ಮಾವಿನಕಟ್ಟೆ ನಿರೂಪಿಸಿದರು.

`ಮಕ್ಕಳಲ್ಲಿ ಮೌಲ್ಯ ತುಂಬುವವರು’
ಸಾಮಾಜಿಕ ಮೌಲ್ಯಗಳನ್ನು ರೂಡಿಸಿ ಕೊಂಡು ಮುಗ್ದ ಮಕ್ಕಳನ್ನು ಸಲಹುವ ಅಂಗನವಾಡಿ ಕಾರ್ಯಕರ್ತೆಯರ ಕಾಳಜಿ ಮಹತ್ತರವಾದುದು. ಎಳವೆಯಲ್ಲಿಯೇ ಮಕ್ಕಳಲ್ಲಿ ಮೌಲ್ಯಗಳನ್ನು ತುಂಬುವ ಇವರ ಕಾರ್ಯ ಶ್ಲಾಘನೀಯ ಎಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಹೇಳಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ರಾಜ್ಯ ಸಮ್ಮೇಳನದ ಅಂಗವಾಗಿ ನಡೆದ ವಿಚಾರಗೋಷ್ಠಿಯಲ್ಲಿ `ಸಾಮಾಜಿಕ ಕಾಳಜಿ ಮತ್ತು ಸಮಾಜದಲ್ಲಿ ಸಮನ್ವಯತೆ’ ಎಂಬ ವಿಷಯದಲ್ಲಿ ಅವರು ಮಾತನಾಡಿದರು. ಚಿಕ್ಕ ಮಕ್ಕಳಲ್ಲಿ ಸನ್ಮಾರ್ಗದ ಮತ್ತು ಸನ್ನಡತೆಯ ಮೌಲ್ಯಗಳನ್ನು ತುಂಬುವ ಮೂಲಕ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಇವರು ಮುನ್ನುಡಿ ಬರೆಯುತ್ತಾರೆ ಎಂದು ಅವರು ಹೇಳಿದರು.

`ನಾವು ಮತ್ತು ಸಂಘಟನೆ ಎಂಬ ವಿಷಯದಲ್ಲಿ ಸಂಘದ ರಾಜ್ಯಾಧ್ಯಕ್ಷೆ ಜಯಲಕ್ಷ್ಮಿ ಬಿ.ಆರ್ ವಿಷಯ ಮಂಡಿಸಿದರು.

Highslide for Wordpress Plugin