ಟಿಆರ್‌ಪಿ ಹಿಂದೆ ಬಿದ್ದವರಿಗೆ ದೇಸೀ ಪ್ರತಿಭೆಯ ಅರಿವಿಲ್ಲ : ರವಿ ಹೆಗಡೆ
ಪುತ್ತೂರು: ಮಾಧ್ಯಮದಲ್ಲಿ ಕುಳಿತು ಟಿಆರ್‌ಪಿ ಬಗೆಗೆ ಆಲೋಚನೆ ಮಾಡುತ್ತಾ, ಅವರು ಇವರಿಗೆ ಇವರು ಅವರಿಗೆ ಯಾವಾಗ ಬಯ್ಯುತ್ತಾರೆ ಎಂದೇ ಕಾಯುತ್ತಿರುವ ಅನೇಕರಿಗೆ ಗ್ರಾಮೀಣ ಬದುಕು ಹಾಗೂ ಇಲ್ಲಿನ ಪ್ರತಿಭಾವಂತರ ಬಗೆಗೆ ಅರಿವೇ ಇರುವುದಿಲ್ಲ. ಹೀಗಿರುವಾಗ ದೇಸೀ ಸಂಸ್ಕೃತಿ, ಸಂಸ್ಕಾರಗಳ ಸಾಕ್ಷಾತ್ಕಾರ ಸಮುದಾಯ ಬಾನುಲಿ ಕೇಂದ್ರಗಳಲ್ಲಾಗುತ್ತಿದೆ. ಇದು ಅತ್ಯಂತ ಸುದೈವದ ಸಂಗತಿ. ಇಂದು ಸಮುದಾಯ ಬಾನುಲಿ ಕೇಂದ್ರದ ಕಾರಣದಿಂದಾಗಿಯೇ ನಮ್ಮ ನೆಲೆಗಟ್ಟು ಉಳಿದುಕೊಳ್ಳಲು ಸಾಧ್ಯವಿದೆ ಎಂದು ಕನ್ನಡ ಪ್ರಭ ಪತ್ರಿಕೆಯ ಪ್ರಧಾನ ಸಂಪಾದಕರಾದ ರವಿ ಹೆಗಡೆ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯದ ಆಶ್ರಯದಲ್ಲಿ ಗುರುವಾರ ಆಯೋಜಿಸಲಾದ ಅಖಿಲ ಕರ್ನಾಟಕ ಸಮುದಾಯ ಬಾನುಲಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಪತ್ರಿಕೋದ್ಯಮ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎಂಬ ಆತಂಕ ಸ್ವತಃ ಪತ್ರಕರ್ತರನ್ನೇ ಕಾಡಲು ಆರಂಭಿಸಿದೆ. ಆದರೆ ಯಾವುದೋ ಒಂದು ವಾಹಿನಿ ಅಥವ ಪತ್ರಿಕೆ ತಾನು ಮೌಲ್ಯಯುತವಾದದ್ದನ್ನಷ್ಟೇ ಪ್ರಕಟಿಸುತ್ತೇನೆಂದು ಏಕಾಂಗಿಯಾಗಿ ಶಸ್ತ್ರತ್ಯಾಗ ಮಾಡಿದರೆ ಉಪಯೋಗವಿಲ್ಲ. ಎಲ್ಲಾ ಮಾಧ್ಯಮಗಳು ಈ ಹಿನ್ನೆಲೆಯಲ್ಲಿ ಕಟಿಬದ್ಧವಾಗಬೇಕು. ಇಂದು ಕಾಲೇಜಿನಿಂದ ಹೊರಬಂದ ತಕ್ಷಣ ವಿದ್ಯಾರ್ಥಿಗಳಿಗೆ ಕೆಟ್ಟ ಪ್ರಪಂಚದ ದರ್ಶನವಾಗುತ್ತದೆ. ಃಆಗಾಗಿ ಕಾಲೇಜುಗಳಲ್ಲಿ ದೊರಕುವ ಒಳ್ಳೆಯ ಅಂಶಗಳನ್ನು ಮೈಗೂಡಿಸಿಕೊಂಡು ಹೊರಜಗತ್ತಿಗೆ ಅಡಿಯಿಡಬೇಕು ಎಂದರು.
ಕಮ್ಯೂನಿಟಿ ಅಂದ ತಕ್ಷಣ ಜಾತಿ, ಧರ್ಮದ ಹಿನ್ನೆಲೆಯಲ್ಲೇ ಯೋಚನೆಗಳು ಮೂಡಿಬರುತ್ತವೆ. ವಿದ್ಯಾರ್ಥಿಗಳನ್ನು ಕೇಳಿದಾಗ ವಾಟ್ಸಾಪ್, ಫೇಸ್‌ಬುಕ್ ಕಮ್ಯೂನಿಟಿ ಬಗೆಗೆ ಮಾತನಾಡುತ್ತಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಕಮ್ಯೂನಿಟಿ ರೇಡಿಯೋದ ಬಗೆಗೂ ಆಲೋಚನೆಗಳು ಹರಿಯಲಾರಂಭಿಸಿದೆ ಒಂದು ಹಂತದಲ್ಲಿ ರೇಡಿಯೋಗೆ ಭವಿಷ್ಯವೇ ಇಲ್ಲ ಅನ್ನುವಂತಹ ಸ್ಥಿತಿ ನಿರ್ಮಾಣವಾಗುವ ಹೊತ್ತಿನಲ್ಲಿ ಖಾಸಗಿ ಹಾಗೂ ಸಮುದಾಐ ಬಾನುಲಿಗಳು ಪ್ರಸಿದ್ಧಿಗೆ ಬರಲಾರಂಭಿಸಿದವು ಎಂದು ಅಭಿಪ್ರಾಯಪಟ್ಟರು.
ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ರೂಪಿಸಿದ ರೇಡಿಯೋ ಪಾಂಚಜನ್ಯದ ಬಗೆಗಿನ ಸಾಕ್ಷ್ಯಚಿತ್ರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ದೇಶದಲ್ಲಿ ವೈಯಕ್ತಿಕ ಸಂಪರ್ಕಕ್ಕಾಗಿ ಅಂಚೆ ವ್ಯವಸ್ಥೆ ಹಾಗೂ ಸಮುದಾಯ ಸಂಪರ್ಕಕ್ಕಾಗಿ ಬಾನುಲಿ ಕೇಂದ್ರಗಳು ಮಾತ್ರ ಅಸ್ಥಿತ್ವದಲ್ಲಿದ್ದವು. ನಂತರ ತಂತ್ರಜ್ಞಾನದ ಬೆಳವಣಿಗೆಯಾದರೂ ರೇಡಿಯೋ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ಆದರೆ ಖಾಸಗಿ ಎಫ್.ಎಂ ಗಳು ಭಾಷೆಯ ಮೇಲೆ ಪರಿಣಾಮ ಬೀರಿದರೆ ಸ್ವಚ್ಚ ಭಾಷೆಯನ್ನು ಸಮುದಾಯ ಬಾನುಲಿಯನ್ನು ಆಲಿಸುವಂತಾಗಿದೆ ಎಂದರು.
ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ನಂತರ ಮರಳಿ ಮನೆ ಮನೆಗಳಲ್ಲೂ ರೇಡಿಯೋ ಜಾಗ ಪಡೆದುಕೊಂಡಿದೆ. ಮನ್ ಕೀ ಬಾತ್ ದೇಶಾದ್ಯಂತ ರೇಡಿಯೋದ ಮೂಲಕ ಸದ್ದು ಮಾಡುತ್ತಿದೆ. ಮೋದಿಯವರು ಪ್ರಧಾನಿಯಾದ ನಂತರದ ಇನ್ನೊಂದು ಪ್ರಮುಖ ಹೆಜ್ಜೆ ಅಂಚೆ ಕಛೇರಿಯ ಸುಧಾರಣೆ. ಈಗ ಅಂಚೆ ಕಛೇರಿಯನ್ನೂ ಬ್ಯಾಂಕ್ ಆಗಿ ಪರಿವರ್ತಿಸಿ, ಅಂಚೆಯಣ್ಣನ ಜೀವನಕ್ಕೆ ಬಣ್ಣ ತುಂಬುವ ಯೋಜನೆ ಜಾರಿಗೆ ಬರುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಸಿನೆಮಾ ಛಾಯಾಚಿತ್ರಗಾರ ಎಚ್.ಎಂ.ರಾಮಚಂದ್ರ ನಾವೆಲ್ಲ ಸಂವಹನದ ವರ್ತುಲವನ್ನು ಅರಿತವರು. ಆದರೆ ಇಂದು ಸಂವಹನದ ವ್ಯವಸ್ಥೆಯೇ ಬದಲಾಗಿ ಕೇಳುಗನ, ನೋಡುಗನ ಮೇಲೆ ವಿಷಯವನ್ನು ಹೇರುವುದು ಕಾಣುತ್ತಿದೆ. ಈ ಸಂದರ್ಭದಲ್ಲಿ ಸಮುದಾಯ ಬಾನುಲಿ ಕೇಂದ್ರಗಳು ನಿಜಾರ್ಥದಲ್ಲಿ ಸಂವಹನವನ್ನು ಸುಂದರವಾಗಿ ನಡೆಸಿಕೊಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಭಾರತದ ಜೀವವಿರುವುದೇ ಹಳ್ಳಿಯಲ್ಲಿ. ಇಂತಹ ಹಳ್ಳಿಯ ಭಾವವನ್ನು ಪಸರಿಸುವ ಕಾಯಕದಲ್ಲಿ ಸಮುದಾಯ ಬಾನುಲಿ ಕಾರ್ಯನಿರ್ವಹಿಸುತ್ತದೆ. ನಾವಿಂದು ನಗರ ಬದುಕಿನ ಜಂಜಡದಲ್ಲಿ ಸಿಲುಕಿ ಜರ್ಝರಿತರಾಗುತ್ತಿದ್ದಾರೆ. ಗುರಿ, ಧ್ಯೇಯವಿಲ್ಲದೆ ತಿರುಗಾಡುತ್ತಿದ್ದೇವೆ. ಆದರೆ ಹಳ್ಳಿಗಳಲ್ಲಿ ಜನರಿಗೆ ಬದುಕಿನ ಬಗೆಗಿನ ಸುಂದರ ಕಲ್ಪನೆಯಿದೆ. ಹಾಗಾಗಿ ಅಂತಹ ಹಳ್ಳಿ ಸೊಗಡನ್ನು ಕಾಯುವ ಕಾರ್ಯ ಸಮುದಾಯ ಬಾನುಲಿಯಿಂದ ಆಗುತ್ತಿದೆ ಎಂದರು.
ನಗರದಲ್ಲಿರುವವನು ಮಾತ್ರ ಪ್ರತಿಭಾವಂತ ಅನ್ನುವುದು ತಪ್ಪು ಕಲ್ಪನೆ. ನಿಜವಾದ ಪ್ರತಿಭೆ ಅಡಗಿರುವುದು ಹಳ್ಳಿಗಳಲ್ಲಿ. ಇಲ್ಲಿಯ ಧ್ವನಿಯನ್ನು ಜಗತ್ತಿನಾದ್ಯಂತ ತಲಪಿಸುವ ಕಾರ್ಯ ಆಗಬೇಕು. ಆ ಹಿನ್ನೆಲೆಯಲ್ಲಿ ಬಾನುಲಿ ಕೇಂದ್ರದಲ್ಲಿ ಕಾರ್ಯ ನಡೆಯುತ್ತಿದೆ ಎಂದರಲ್ಲದೆ ಭಾರತ ಸಕಲ ಅದ್ಭುತಗಳಿಂದ ಸಮೃದ್ಧವಾದ ದೇಶ. ಇಲ್ಲಿನ ಅನೇಕ ಸಾಧನೆಗಳನ್ನು ನಾವೇ ಗುರುತಿಸಿಕೊಳ್ಳುವುದಿಲ್ಲ. ಪೇಟೆಂಟ್ ಹಿಂದೆ ಓಡುವುದಿಲ್ಲ. ಹಾಗಾಗಿ ಎಲ್ಲವನ್ನೂ ವಿದೇಶೀಯರ ಸಾಧನೆ ಎಂದು ನಂಬಿ ಕೂತಿದ್ದೇವೆ ಎಂದು ನುಡಿದರು.
ಈ ಸಂದರ್ಭದಲ್ಲಿ ರೇಡಿಯೋ ಪಾಂಚಜನ್ಯದ ಸ್ಟುಡಿಯೋ ಹಾಗೂ ಕಾರ್ಯಕ್ರಮ ಸಂಯೋಜನೆಗಾಗಿ ಶ್ರಮಿಸಿದ ನರಸಿಂಹ ಸ್ವಾಮಿ ಹಾಗೂ ಶ್ಯಾಮ ಭಟ್ ಅವರನ್ನು ಸನ್ಮಾನಿಸಲಾಯಿತು. ರೇಡಿಯೋ ಪಾಂಚಜನ್ಯದಲ್ಲಿ ಮುಂದಿನ ದಿನಗಳಲ್ಲಿ ಪ್ರಸಾರಗೊಳ್ಳಲಿರುವ ಸಾಹಿತ್ಯ ಮತ್ತು ಯಕ್ಷಗಾನಕ್ಕೆ ಸಂಬಂಧಿಸಿದ ಎರಡು ಕಾರ್ಯಕ್ರಮಗಳ ಸಿಗ್ನೇಚರ್ ಟ್ಯೂನ್ ಅನ್ನು ಬಿಡುಗಡೆಗೊಳಿಸಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್ ಸ್ವಾಗತಿಸಿದರು. ರೇಡಿಯೋ ಪಾಂಚಜನ್ಯದ ಆಡಳಿತ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ ಕುಂಟಿನಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಶ್ರೀಕಾಂತ್ ಕೊಳತ್ತಾಯ ವಂದಿಸಿದರು. ವಿವೇಕಾನಂದ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕಿ ವಿದ್ಯಾ ಎಸ್ ಕಾರ್ಯಕ್ರಮ ನಿರ್ವಹಿಸಿದರು.