ನವದೆಹಲಿ : ಭಾರತ ವಾರ್ಷಿಕ ಏಳು ಲಕ್ಷ ಟನ್ ಅಡಿಕೆ ಉತ್ಪಾದಿಸುತ್ತಿದ್ದು, ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಆಮದು ಅಡಿಕೆಯ ಮೇಲಿನ ಆಮದು ಸುಂಕ ಕನಿಷ್ಠ ದರವನ್ನು 110 ರೂಪಾಯಿಗಳಿಂದ 162 ರೂಪಾಯಿಗಳಿಗೆ ಪರಿಷ್ಕರಿಸಿದೆ ಎಂದು ಮಾನ್ಯ ಕೇಂದ್ರ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಇವರು ನಳಿನ್ ಕುಮಾರ್ ಕಟೀಲ್, ಲೋಕಸಭಾ ಸದಸ್ಯರು ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಆಮದು ಅಡಿಕೆಯಿಂದಾಗಿ ದೇಶೀಯ ಅಡಿಕೆ ಬೆಲೆಯನ್ನು ಅಸ್ಥಿರಗೊಳಿಸುತ್ತದೆ ಮತ್ತು ದೇಶದಲ್ಲಿ ಅಡಿಕೆ ಉದ್ಯಮ ಮತ್ತು ಬೆಳೆಗಾರರ ಹಿತಕ್ಕೆ ಅಡ್ಡಿಯಾಗುತ್ತಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅರಿವು ಇದೆಯೇ ಎಂದು ಕೇಳಿದ ಚುಕ್ಕೆರಹಿತ ಪ್ರಶ್ನೆಗೆ ಲಿಖಿತ ಉತ್ತರವನ್ನು ನೀಡುತ್ತಾ ಈ ಸಂಬಂಧ 2015 ರ ಜೂನ್ 8 ರಂದು ನಿರ್ಧಾರ ಕೈಗೊಳ್ಳಲಾಗಿದ್ದು, ಇದು 2020 ರವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿರುತ್ತಾರೆ.
ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಕೇಂದ್ರ ಸರಕಾರವು ಆಮದು ಅಡಿಕೆಯ ಮೇಲೆ ಟನ್ಗೆ 2558 ಡಾಲರ್ ಕಸ್ಟಮ್ಸ್ ಸುಂಕ ವಿಧಿಸುತ್ತಿದ್ದು, ಅಡಿಕೆ ಮೇಲಿನ ಆಮದು ಸುಂಕವನ್ನು ಶೇಕಡ 100 ೦ಕ್ಕೆ ನಿಗದಿಪಡಿಸಿದೆ ಅಲ್ಲದೇ ವಿಶೇಷ ಹೆಚ್ಚುವರಿ ಸುಂಕವಾಗಿ ಶೇಕಡ 4 ನ್ನು ವಿಧಿಸುತ್ತಿದೆ.
ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು, ತನ್ನ ಕ್ಷೇತ್ರ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಆಮದು ಅಡಿಕೆ ಗುಣಮಟ್ಟವನ್ನು ಪರಿಶೀಲಿಸುವಂತೆ ಸೂಚಿಸಿದೆ ಎಂದು ವಿವರಿಸಿದ್ದಾರೆ.
ಭಾರತದಲ್ಲಿ 2013-14 ರಲ್ಲಿ 698821 ಟನ್ ಅಡಿಕೆ ಉತ್ಪಾದನೆಯಾಗಿದ್ದು, 2014-15 ರಲ್ಲಿ ಈ ಪ್ರಮಾಣ 727407 ಟನ್ಗೆ ಹೆಚ್ಚಿದೆ. ಕಳೆದ ಹಣಕಾಸು ವರ್ಷದಲ್ಲಿ 702869 ಟನ್ ಅಡಿಕೆ ಉತ್ಪಾದನೆಯಾಗಿದೆ ಎಂದು ಹೇಳಿದ್ದಾರೆ.