ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ ಮತ್ತು ಪುಣಚ ಶ್ರೀದೇವಿಯ ಪ್ರೌಢಶಾಲೆಯ ಬಡ ವಿದ್ಯಾರ್ಥಿಗಳಿಗೆ ಕೊಲ್ಲೂರು ದೇವಾಲಯದಿಂದ ನೀಡಲಾಗುತ್ತಿದ್ದ ಅನ್ನವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಕಸಿದಿರುವುದು ಅಮಾನವೀಯ ಕ್ರಮವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಹಿಂದೂ ವಿರೋಧಿ ನೀತಿ ಹಾಗೂ ದ್ವೇಷದ ರಾಜಕೀಯಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ ಎಂದು ದ.ಕ.ಸಂಸದ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ.
ಕಲ್ಲಡ್ಕದ ಶ್ರೀ ರಾಮ ಶಾಲೆ ಗ್ರಾಮಾಂತರ ಪ್ರದೇಶದಲ್ಲಿ ಗುಣಮಟ್ಟ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಕರಾವಳಿಯ ಹೆಮ್ಮೆಯ ಸಂಸ್ಥೆಯಾಗಿದೆ. ದೇಶ, ವಿದೇಶದ ಗಣ್ಯರು ಇಲ್ಲಿಗೆ ಆಗಮಿಸಿ ಡಾ.ಪ್ರಭಾಕರ ಭಟ್ ಅವರ ಶೈಕ್ಷಣಿಕ ಸೇವೆಯನ್ನು ಪ್ರಶಂಸಿದ್ದಾರೆ. ಶೇ. 90 ಕ್ಕೂ ಅಧಿಕ ಹಿಂದುಳಿದ ವರ್ಗದ ಬಡ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇಂತಹ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುವ ಬದಲು ದೇವಸ್ಥಾನ ನೀಡುತ್ತಿದ್ದ ಅನ್ನವನ್ನೇ ಸರ್ಕಾರ ಕಸಿದಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ಮುಖ್ಯಮಂತ್ರಿ ಇಂತಹ ಹೇಯ ಕೆಲಸ ಮಾಡಿದ್ದಾರೆ. ಬಡ ಮಕ್ಕಳ ಅನ್ನದಲ್ಲಿ ಚೆಲ್ಲಾಟ ಆಡುವ ಇಂತಹ ನೀಚ ರಾಜಕೀಯವನ್ನು ಜಿಲ್ಲೆಯ ಜನತೆ ಕ್ಷಮಿಸುವುದಿಲ್ಲ. ಬಡ ಮಕ್ಕಳನ್ನು ಬೀದಿಗಿಳಿಸಿದ ಕಾಂಗ್ರೆಸ್ಗೆ ಮುಂದಿನ ಚುನಾವಣೆಯಲ್ಲಿ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.