Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಆದರ್ಶ ಗ್ರಾಮ ಯೋಜನೆ: ಬಳ್ಪದಲ್ಲಿ ನಡೆಯುತ್ತಿದೆ ಬಿರುಸಿನ ಅಭಿವೃದ್ಧಿ ಕಾಮಗಾರಿ

ಸುಳ್ಯ: ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಮಾದರಿ ಗ್ರಾಮವನ್ನು ರೂಪಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಆಯ್ಕೆ ಮಾಡಿದ ಸುಳ್ಯ ತಾಲೂಕಿನ ಬಳ್ಪ ಗ್ರಾಮದಲ್ಲಿ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗಳು ಮುಂದಿನ ಡಿಸೆಂಬರ್ ತಿಂಗಳಲ್ಲಿ ಪೂರ್ತಿಗೊಳ್ಳಲಿದೆ. ತನ್ನ ಒಡಲಲ್ಲಿ ಎಂಟು ದೇವಾಲಯಗಳನ್ನು ಹೊಂದಿದ್ದು ದೇವಾಲಯಗಳ ನಾಡೆಂದು ಪ್ರಸಿದ್ಧವಾದ ಬಳ್ಪದಲ್ಲಿ ಬಿರುಸಿನ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು ಆದರ್ಶ ಗ್ರಾಮವಾಗುವತ್ತ ಮುನ್ನಡೆದಿದೆ. ಆದರ್ಶ ಗ್ರಾಮವನ್ನು ರೂಪಿಸುವ ನಿಟ್ಟಿನಲ್ಲಿ ಐದು ಹಂತಗಳಲ್ಲಿ ಒಟ್ಟು 20 ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿಗಳು ನಡೆಸುವ ನೀಲಿ ನಕಾಶೆಯನ್ನು ತಯಾರಿಸಲಾಗಿದೆ.

nalin-balpa-grama-visit1

nalin-balpa-grama-visit2

nalin-balpa-grama-visit3

nalin-balpa-grama-visit4

ಎರಡನೇ ಹಂತದಲ್ಲಿ ಸುಮಾರು ನಾಲ್ಕು ಕೋಟಿ ರೂ ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ಸೇವಾ ಕೇಂದ್ರ, ಐದು ಬಸ್ ತಂಗುದಾಣಗಳ ನಿರ್ಮಾಣ, ಮೂರು ಅಂಗನವಾಡಿ ಕಟ್ಟಡ, ಎರಡು ಶಾಲಾ ಕಟ್ಟಡಗಳ, ಧ್ಯಾನ ಕೇಂದ್ರದ ನಿರ್ಮಾಣ ಕಾರ್ಯ ನಡೆಯುತಿದೆ. ಇವುಗಳ ಅಭಿವೃದ್ಧಿ ಕಾಮಗಾರಿಗಳು ಅಂತಿಮ ಹಂತದಲ್ಲಿದೆ. ಸುಮಾರು ಒಂದೂವರೆ ಎಕ್ರೆ ವಿಸ್ತೀರ್ಣದಲ್ಲಿರುವ ಇತಿಹಾಸ ಪ್ರಸಿದ್ಧ ಬೋಗಾಯನ ಕೆರೆಯನ್ನು ಹೂಳೆತ್ತಿ ಅಭಿವೃದ್ಧಿ ಪಡಿಸಲಾಗುವುದು.

ಪ್ರಥಮ ಹಂತದಲ್ಲಿ ಗ್ರಾಮದಲ್ಲಿ ಸೋಲಾರ್ ಬೀದಿ ದೀಪಗಳ ಅಳವಡಿಕೆ, ಎರಡು ಆಸ್ಪತ್ರೆಗಳ ಮೇಲ್ದರ್ಜೆಗೇರಿಸುವ ಕಾರ್ಯ, ಶೌಚಾಲಯ ನಿರ್ಮಾಣ, ಅಡ್ಡಬೈಲು-ಬೀದಿಗುಡ್ಡೆ ರಸ್ತೆ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ನಾಲ್ಕು ಕೋಟಿ ರೂ ವೆಚ್ಚದ ಕಾಮಗಾರಿಗಳು ಪೂರ್ತಿಯಾಗಿದೆ. ಗ್ರಾಮದಲ್ಲಿ ಬ್ಯಾಂಕ್, ಸಹಕಾರಿ ಸಂಸ್ಥೆ ಸ್ಥಾಪನೆಯಾಗಿದೆ. ಶಾಲೆಗಳಲ್ಲಿ ಕಂಪ್ಯೂಟರ್ ವ್ಯವಸ್ಥೆ ಅಳವಡಿಸಲಾಗಿದೆ. ಶಾಲೆಗಳಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ.

ಗೋ ಆಧಾರಿತ ಕೃಷಿ:
ಮುಂದಿನ ಜನವರಿಯ ವೇಳೆಗೆ ಮೂರನೇ ಹಂತದ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ. ಮೂರನೇ ಹಂತದಲ್ಲಿ ಗ್ರಾಮದ ಮೂಲಭೂತ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಗ್ರಾಮದ ಒಳ ರಸ್ತೆಗಳ ಅಭಿವೃದ್ಧಿ, ವಸತಿ ನಿರ್ಮಾಣ ಕಾರ್ಯಗಳು ನಡೆಯಲಿದೆ. ಗೋ ಆಧಾರಿತ ಸಾವಯವ ಕೃಷಿಗೆ ಒತ್ತು ನೀಡಲಾಗುವುದು. ಪ್ರತಿ ಮನೆಗೆ ಹಸುಗಳನ್ನು ನೀಡಿ ಹೈನುಗಾರಿಕೆ ಮತ್ತು ಸಾವಯವ ಕೃಷಿ ನಡೆಸಲು ಪ್ರೋತ್ಸಾಹ ನೀಡಲಾಗುವುದು. ಗೋಬರ್ ಗ್ಯಾಸ್, ವಿದ್ಯುತ್ ಉತ್ಪಾದನೆಗೆ ಸಹಾಯ ನೀಡಲಾಗುವುದು. ನಾಲ್ಕನೇ ಹಂತದಲ್ಲಿ ಗ್ರಾಮದಲ್ಲಿ ಗಾರ್ಡನ್, ಪಾರ್ಕ್ ಗಳ ನಿರ್ಮಾಣ, ಬೋಗಾಯನ ಕೆರೆಯ ಸುತ್ತಲ ಪ್ರದೇಶದ ಅಭಿವೃದ್ಧಿ, ಭಜನಾ ಮಂದಿರಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಐದನೇ ಹಂತದಲ್ಲಿ ಸಮುದಾಯ ಭವನಗಳ ನಿರ್ಮಾಣ, ಸಣ್ಣ ಉದ್ಯಮಗಳ ಸ್ಥಾಪನೆ, ಸ್ವಯಂ ಉದ್ಯೋಗ ಸೃಷ್ಠಿಗೆ ಪ್ರಯತ್ನ ನಡೆಸಲಾಗುವುದು.

ಆದರ್ಶ ಗ್ರಾಮದ ಆಯ್ಕೆಯಾದ ಬಳಿಕ ಬಳ್ಪದಲ್ಲಿ ಯುವಕ, ಯುವತಿಯರಿಗೆ ಕಂಪ್ಯೂಟರ್, ಟೈಲರಿಂಗ್, ಐಟಿ ಆಧಾರಿತ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತಿದೆ. ಮದ್ಯವರ್ಜನ ಶಿಬಿರಗಳು, ವೈದ್ಯಕೀಯ ಶಿಬಿರಗಳು, ವೈದ್ಯಕೀಯ ಸಮೀಕ್ಷೆ, ಕೃಷಿ ಆಧಾರಿತ ವಿಷಯಗಳ ತರಬೇತಿಗಳು ನಿರಂತರವಾಗಿ ನಡೆಯುತಿದೆ. ಗ್ರಾಮದಲ್ಲಿ ಪಡಿತರ ಚೀಟಿ, ಆಧಾರ ಕಾರ್ಡ್ ವಿತರಣೆ ಪೂರ್ತಿಯಾಗಿದೆ.

20 ಕೋಟಿ ಅಭಿವೃದ್ಧಿ:
ಹಲವು ಮೂಲಗಳಿಂದ ಸಂಪನ್ಮೂಲವನ್ನು ಕ್ರೋಡೀಕರಿಸಿ 20 ಕೋಟಿ ರೂಗಳ ಅಭಿವೃದ್ಧಿಯನ್ನು ಗ್ರಾಮದಲ್ಲಿ ಕೈಗೊಳ್ಳಲಾಗುತಿದೆ. ಎಂಆರ್ ಪಿಎಲ್, ಎನ್ಎಂಪಿಟಿ, ಒಎನ್ಜಿಸಿ, ಎಂಸಿಎಫ್, ಶ್ರಿಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಆಳ್ವಾಸ್ ಕಾಲೇಜು, ಶ್ರೀನಿವಾಸ ಕಾಲೇಜು ಸೇರಿದಂತೆ ಹಲವು ಸಂಸ್ಥೆಗಳು ಆದರ್ಶ ಗ್ರಾಮ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಶಾಸಕರ ಅನುದಾನ ಮತ್ತು ಇತರ ಸರ್ಕಾರಿ ಯೋಜನೆಗಳನ್ನು ಬಳಸಿಕೊಳ್ಳಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ. ಸಂಪೂರ್ಣ ಶಿಕ್ಷಣ ಮತ್ತು ಆರೋಗ್ಯವಂತ ಸಮಾಜದ ರೂಪಿಸುವುದರ ಜೊತೆಗೆ ವ್ಯಾಜ್ಯ ಮುಕ್ತ, ಮದ್ಯ ಮುಕ್ತ ಗ್ರಾಮದ ಸಾಕಾರಕ್ಕೆ ಪ್ರಯತ್ನ ನಡೆಸಲಾಗುತ್ತಿದೆ.

ಮುಂದಿನ ಗ್ರಾಮ ಮಂಗಳೂರಿನಲ್ಲಿ:
ತನ್ನ ಎರಡನೇ ಆದರ್ಶ ಗ್ರಾಮವನ್ನು ಮಂಗಳೂರು ತಾಲೂಕಿನಿಂದ ಆಯ್ಕೆ ಮಾಡಲಾಗುವುದು. ಉದ್ಯಮಿಗಳು ಈಗಾಗಲೇ ಆರ್ಥಿಕ ನೆರವು ನೀಡಲು ಮುಂದೆ ಬಂದಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಪ್ರಥಮ ಆದರ್ಶ ಗ್ರಾಮದ ಕೆಲಸ ಸಂಪೂರ್ಣ ಮುಗಿದ ಬಳಿಕ ಮುಂದಿನ ಗ್ರಾಮದ ಆಯ್ಕೆ ನಡೆಸಲಾಗುವುದು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯಂತೆ ಬಳ್ಪವನ್ನು ಆದರ್ಶ ಗ್ರಾಮವನ್ನಾಗಿ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಹಲವು ಸಂಸ್ಥೆಗಳು ನೆರವು ನೀಡಿದ್ದಾರೆ. ಶಾಸಕರು ಮತ್ತು ಇತರ ಜನಪ್ರತಿನಿಧಿಗಳು, ಗ್ರಾಮ ಮಟ್ಟದ ಜನಪ್ರತಿನಿಧಿಗಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Source :www.newskannada.com

Highslide for Wordpress Plugin