ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏ.1 ರಿಂದ ‘ಇ-ವೀಸಾ’ ಸೌಲಭ್ಯ ದೊರೆಯಲಿದ್ದು ಕರಾವಳಿಯ ಪ್ರವಾಸೋದ್ಯಮ ಹಾಗೂ ವೈದ್ಯಕೀಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ ದೊರೆಯಲಿದೆ. ಕರ್ನಾಟಕದಲ್ಲಿ ಬೆಂಗಳೂರು ಬಳಿಕ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸೌಲಭ್ಯಕ್ಕೆ ಅನುಮತಿ ಕಲ್ಪಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಜಿಲ್ಲೆಯ ಜನತೆ ಅಭಿನಂದನೆ ಸಲ್ಲಿಸುವುದಾಗಿ ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಇ-ವೀಸಾ ಪರಿಶೀಲನಾ ಸೌಲಭ್ಯ ಇಲ್ಲದ ಕಾರಣ ವಿದೇಶದಿಂದ ಇ-ವೀಸಾ ಮೂಲಕ ನೇರ ಮಂಗಳೂರಿಗೆ ಬರುವ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿತ್ತು. ಈ ನಿಟ್ಟಿನಲ್ಲಿ ಮಂಗಳೂರು ನಿಲ್ದಾಣಕ್ಕೆ ಇ-ವೀಸಾ ಸೌಲಭ್ಯ ಕಲ್ಪಿಸುವಂತೆ ಸಂಬಂಧಪಟ್ಟ ಸಚಿವಾಲಯಗಳಿಗೆ ಮನವಿ ಸಲ್ಲಿಸಲಾಗಿತ್ತು. ಇದೀಗ ಇ-ವೀಸಾ ಸೌಲಭ್ಯ ಅನುಷ್ಠಾನವಾಗುವ ಮೂಲಕ ಹೊರದೇಶದ ಪ್ರವಾಸಿಗರು, ಉದ್ಯಮಿಗಳು ಹಾಗೂ ವೈದ್ಯಕೀಯ ಚಿಕಿತ್ಸೆಗೆ ಬರುವವರು ನೇರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಬಹುದಾಗಿದೆ. ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಮಂಗಳೂರು ನಗರದ ಬೆಳವಣಿಗೆಗೆ ಇದು ಅವಕಾಶ ತೆರೆದಿಡಲಿದೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.