ಮಂಗಳೂರು : ಮಂಗಳೂರಿನ ಎಂಸಿಎಫ್ ಕಂಪನಿಯನ್ನು ಮುಚ್ಚುವ ಪ್ರಸ್ತಾಪವನ್ನು ಕೈಬಿಡುವಂತೆ ಕೇಂದ್ರ ಸರಕಾರಕ್ಕೆ ಸಂಸದನ ನೆಲೆಯಲ್ಲಿ ನಾನು ಮನವಿ ಮಾಡಿದ್ದು, ಅದನ್ನು ಪರಿಗಣಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಅನಂತಕುಮಾರ್ ಎಂಸಿಎಫ್‌ನ್ನು ಯಥಾ ಪ್ರಕಾರ ಮುಂದುವರಿಸುವಂತೆ ನಿರ್ಧರಿಸಿದ್ದಾರೆ. ಇದು ರೈತಪರ ಹಾಗೂ ದುಡಿಯುವ ಸಿಬ್ಬಂದಿ ಪರ ನಿರ್ಧಾರವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ರಾಜ್ಯದಲ್ಲಿ ಯೂರಿಯಾ ಉತ್ಪಾದನೆ ಮಾಡಿ ರೈತರಿಗೆ ಪೂರೈಕೆ ಮಾಡುವ ಈ ಸಂಸ್ಥೆಯನ್ನು ಮುಂದುವರಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಲಾಗಿದ್ದು, ಅದನ್ನು ಒಪ್ಪಿರುವ ಸರಕಾರ ಈ ನಿರ್ಧಾರವನ್ನು ಪ್ರಕಟಿಸಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಅನಂತ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾ, ಇದರಿಂದ ರೈತರಿಗೆ ಅಗತ್ಯ ಯೂರಿಯಾ ಪೂರೈಕೆಯಾಗಲಿದೆ. ಅತಂತ್ರ ಸ್ಥಿತಿಯಲ್ಲಿದ್ದ ಇಲ್ಲಿನ ನೌಕರರಿಗೆ ಅನುಕೂಲವಾಗಲಿದೆ. ಗ್ಯಾಸ್‌ಲೈನ್ ಪೂರ್ತಿಯಾಗುವ ತನಕ ನಾಫ್ತಾ ಆಧಾರಿತವಾಗಿಯೇ ಎಂಸಿಎಫ್ ತನ್ನ ಉತ್ಪಾದನೆಯನ್ನು ಮುಂದುವರಿಸಲಿದೆ. ಇದಕ್ಕೆ ಕೇಂಧ್ರ ನೀಡುವ ನೆರವನ್ನು ಮುಂದುವರಿಸಲಿದೆ ಎಂದು ನಳಿನ್ ಕುಮಾರ್ ಕಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.