ಮಂಗಳೂರು : ಕಾಂಗ್ರೆಸ್ ಸರ್ಕಾರದ ತಾರತಮ್ಯ ನೀತಿ ಮೈತ್ರಿ ಸರ್ಕಾರದ ಬಜೆಟ್ನಲ್ಲಿಯೂ ಮುಂದುವರಿದಿದೆ. ಕರಾವಳಿ ಭಾಗವನ್ನು ಬಜೆಟ್ನಲ್ಲಿ ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಕೇವಲ ಎರಡು ಜಿಲ್ಲೆಗೆ ಮಾತ್ರ ಸೀಮಿತವಾದ ಬಜೆಟ್ ಮಂಡಿಸುವ ಮೂಲಕ ಕುಮಾರಸ್ವಾಮಿ ಅವರು ರಾಜ್ಯದ ಜನತೆಗೆ ದ್ರೋಹ ಎಸಗಿದ್ದಾರೆ. ರಾಜ್ಯದ ಹಿತದೃಷ್ಟಿ ಇಲ್ಲದ ಈ ಬಜೆಟ್ ಬಗ್ಗೆ ಜನತೆಗೆ ಯಾವುದೇ ಭರವಸೆ ಇಲ್ಲ ಎಂದು ದ.ಕ.ಸಂಸದ ನಳಿನ್ಕುಮಾರ್ ಕಟೀಲು ತಿಳಿಸಿದ್ದಾರೆ.
ಕರಾವಳಿ ಜಿಲ್ಲೆಗೆ ಕಳೆದ 4 ಬಜೆಟ್ನಲ್ಲಿ ಪ್ರಕಟಿಸಿದ ಯೋಜನೆಗಳು ಕೇವಲ ಘೋಷಣೆಗೆ ಸೀಮಿತವಾಗಿದೆ. ಇದೀಗ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಯಾವುದೇ ಯೋಜನೆ ಪ್ರಕಟಿಸದೆ ಅನ್ಯಾಯ ಎಸಗಿದೆ. ಮೀನುಗಾರರು ಮತ್ತು ಅಡಕೆ ಬೆಳೆಗಾರರನ್ನು ರಾಜ್ಯ ಸರ್ಕಾರ ಸಂಪೂರ್ಣ ಮರೆತಿದೆ. ದಕ್ಷಿಣ ಕನ್ನಡವನ್ನು ಸಂಪೂರ್ಣ ಕಡೆಗಣಿಸಿರುವ ಕಾರಣ ಇದನ್ನು ಬಜೆಟ್ ಅಂತ ಪರಿಗಣಿಸಲು ಸಾಧ್ಯವಿಲ್ಲ ಎಂದು ಸಂಸದರು ತಿಳಿಸಿದ್ದಾರೆ.