Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಕರ್ನಾಟಕದ ಜನತೆ ಬದಲಾವಣೆ ಬಯಸುತ್ತಿದ್ದಾರೆ: ಸಚಿವ ಬಿರೇಂದರ್‌

ಮಂಗಳೂರು: ಕರ್ನಾಟಕದ ಜನತೆ ಮುಂದಿನ ಚುನಾವಣೆಯಲ್ಲಿ ರಾಜಕೀಯ ಬದಲಾವಣೆಯೊಂದನ್ನು ಬಯಸುತ್ತಿದ್ದು ಬಿಜೆಪಿಯತ್ತ ಒಲವು ವ್ಯಕ್ತವಾಗುತ್ತಿದೆ. ಇದನ್ನು ಸಾಕಾರಗೊಳಿಸುವಲ್ಲಿ ಬಿಜೆಪಿ ಕಾರ್ಯಕರ್ತರು ಹೆಚ್ಚು ಶ್ರಮವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಕೇಂದ್ರ ಉಕ್ಕು ಖಾತೆ ಸಚಿವ ಬಿರೇಂದರ್‌ ಸಿಂಗ್‌ ಕರೆ ನೀಡಿದರು.

ದ.ಕ. ಜಿಲ್ಲಾ ಬಿಜೆಪಿ ಕಚೇರಿಗೆ ಸೋಮವಾರ ಭೇಟಿ ನೀಡಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ದೇಶದಲ್ಲಿ 19 ರಾಜ್ಯಗಳಲ್ಲಿ ಬಿಜೆಪಿ ಸರಕಾರವಿದೆ. ಶೇ. 68ರಷ್ಟು ಜನರು ಬಿಜೆಪಿ ಆಡಳಿತದಲ್ಲಿದ್ದಾರೆ. ಬಿಜೆಪಿ ಆಡಳಿತದ 20ನೇ ರಾಜ್ಯ ಕರ್ನಾಟಕವಾಗಲಿದೆ. ಪ್ರಸ್ತುತ ಕರ್ನಾಟಕದಲ್ಲಿ ಜನರ ಮನಃಸ್ಥಿತಿಯನ್ನು ಅವಲೋಕಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಹಾಗಾಗಿ ಕಾರ್ಯಕರ್ತರು ಹೆಚ್ಚು ಹೊಣೆಗಾರಿಕೆ ವಹಿಸಿಕೊಂಡು ಪಕ್ಷ ಸಂಘಟನೆಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದರು.

bjp-office

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿದೆ. ಅವರ ಮೂರು ಕ್ರಾಂತಿಕಾರಿ ಯೋಜನೆಗಳಾದ ಜನಧನ್‌, ರೂಪಾಯಿ ಅಪನಗದೀಕರಣ, ಜಿಎಸ್‌ಟಿ ದೇಶದ ಅರ್ಥಿಕ ಕ್ಷೇತ್ರವನ್ನು ಮಹತ್ತರ ಪರಿವರ್ತನೆಗಳೊಂದಿಗೆ ಉನ್ನತಿಯೆಡೆಗೆ ಕೊಂಡೊಯ್ಯುತ್ತಿದೆ. ಶ್ರೀಮಂತರ ಬಳಿ ಕೇಂದ್ರೀಕೃತಗೊಳ್ಳುತ್ತಿದ್ದ ಅರ್ಥಿಕ ಶಕ್ತಿ ಇದೀಗ ಬಡವರತ್ತ ಹರಿದು ಬರುತ್ತಿದೆ. ಜಿಡಿಪಿ ಪ್ರಗತಿಯಲ್ಲಿ ಭಾರತ ಇಡೀ ವಿಶ್ವವನ್ನೇ ಹಿಂದಿಕ್ಕಿ ಮುನ್ನಡೆಯುತ್ತಿದೆ. ಜಿಎಸ್‌ಟಿ ಅನುಷ್ಠಾನದ ಧನಾತ್ಮಕ ಫಲಿತಾಂಶ ಕೇಂದ್ರ ಸರಕಾರದ ಮುಂದಿನ ಬಜೆಟ್‌ಗಳಲ್ಲಿ ಪ್ರತಿಫಲನಗೊಳ್ಳಲಿದೆ. ಈ ಬಾರಿಯ ಕೇಂದ್ರ ಸರಕಾರದ ಬಜೆಟ್‌ ಪ್ರಮಾಣ ಶೇ. 20ರಷ್ಟು ಹಾಗೂ 2019ರ ಬಜೆಟ್‌ ಶೇ. 62ರಷ್ಟು ಹೆಚ್ಚಳವಾಗಿದೆ ಎಂದವರು ಹೇಳಿದರು.

ಕಾಂಗ್ರೆಸ್‌ ಪಕ್ಷ ಈ ದೇಶವನ್ನು ಹಿಂದಕ್ಕೆ ಕೊಂಡೊಯ್ಯಲು ಬಯಸುತ್ತದೆ. ಮಹಿಳಾ ಸಶಕ್ತೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್‌ ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್‌ ನಿಷೇಧ ಮಸೂದೆಯನ್ನು ತಡೆಹಿಡಿಯುವ ಮೂಲಕ ತನ್ನ ನಿಜರೂಪವನ್ನು ತೋರ್ಪಡಿಸಿದೆ ಎಂದು ಬಿರೇಂದರ್‌ ಅವರು ಟೀಕಿಸಿದರು.

ಸಂಸದ ನಳಿನ್‌ ಕುಮಾರ್‌ ಕಟೀಲು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ವಿಧಾನಪರಿಷತ್‌ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಸಚಿವ ಕೃಷ್ಣ ಪಾಲೆಮಾರ್‌, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಎನ್‌. ಯೋಗೀಶ್‌ ಭಟ್‌, ಪದ್ಮನಾಭ ಕೊಟ್ಟಾರಿ, ಮುಖಂಡರಾದ ವೇದವ್ಯಾಸ ಕಾಮತ್‌, ಕಿಶೋರ್‌ ರೈ, ರವಿಶಂಕರ್‌ ಮಿಜಾರು, ಡಾ| ಭರತ್‌ ಶೆಟ್ಟಿ, ಕ್ಯಾ| ಬೃಜೇಶ್‌ ಚೌಟ, ಜೀತೆಂದ್ರ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.

Source : www.udayavani.com

Highslide for Wordpress Plugin