ಮಂಗಳೂರು, ಮಾ. 23: ಕರ್ನಾಟಕದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯ ಅಧಿಸೂಚನೆಯನ್ನು ಹಿಂಪಡೆಯಬೇಕೆಂದು ಲೋಕಸಭೆಯಲ್ಲಿ ಮಾನ್ಯ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.
ಕರ್ನಾಟಕದ ಜನತೆ ವರದಿಯ ಪರಿಸರ ಸೂಕ್ಷ್ಮ ವಲಯ ಅಧಿಸೂಚನೆಯನ್ನು ವಿರೋಧಿಸುತ್ತಿದ್ದಾರೆ. ರಾಜ್ಯ ಸರಕಾರವೂ ಕೂಡ ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿದೆ. ಅಧಿಸೂಚನೆ ಪ್ರಕಾರ 10 ಜಿಲ್ಲೆಗಳ 1,576 ಗ್ರಾಮಗಳೂ ಸೇರಿದಂತೆ 20,668 ಚದರ ಕಿ.ಮೀ ಪರಿಸರ ಸೂಕ್ಷ್ಮ ವಲಯ ಪ್ರದೇಶದ ವ್ಯಾಪ್ತಿ ಹೊಂದಿದೆ. ಈ ಅಧಿಸೂಚನೆ ಜಾರಿಗೊಳಿಸಿದರೆ, ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕೈಕೊಳ್ಳುವಂತಿಲ್ಲ. ಈ ವಲಯದ ವ್ಯಾಪ್ತಿಯ ಗ್ರಾಮಗಳಲ್ಲಿ ಶಾಲೆ, ಆಸ್ಪತ್ರೆ ಮತ್ತು ರಸ್ತೆಗಳ ನಿರ್ಮಾಣ ನಿಷೇದಿಸಲ್ಪಡುತ್ತದೆ. ಭೂಮಂಜೂರಾತಿ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸುವಂತಿಲ್ಲ. ಇದರಿಂದ ಸದ್ಯ ಅಸ್ತಿತ್ವದಲ್ಲಿರುವ ಸಸ್ಯಕಾಶಿಯ ಮೇಲೆ ಮತ್ತು ಕಾಫಿ ಮತ್ತು ಟೀ ತೋಟಗಳ ಮೇಲೂ ಪರಿಣಾಮ ಬೀರುವುದರಿಂದ ಪ್ರಮುಖವಾಗಿ ಆರ್ಥಿಕ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ಈ ವರದಿ ಜಾರಿಗೊಳಿಸದೇ ಹಿಂಪಡೆಯಬೇಕೆಂದು ಮಾನ್ಯ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಸರಕಾರಕ್ಕೆ ಆಗ್ರಹಿಸಿದರು.