Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಕಾರ್ಮಿಕರ ಬೇಡಿಕೆ ಈಡೇರಿಸಲು ಕೇಂದ್ರ ಸರಕಾರ ಬದ್ಧ: ನಳಿನ್‌

nalin-at-ashakaryakarta-program

ಮಂಗಳೂರು: ಕಾರ್ಮಿಕ ಸಮುದಾಯದ ಹಲವು ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಭಾರತೀಯ ಮಜ್ದೂರ್‌ ಸಂಘ (ಬಿಎಂಎಸ್‌) ನೀಡಿರುವ 12 ಬೇಡಿಕೆಗಳ ಈಡೇರಿಕೆಗೆ ವಿಶೇಷ ಒತ್ತು ನೀಡಲಾಗುವುದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ನಗರದ ಮಣ್ಣಗುಡ್ಡೆಯಲ್ಲಿರುವ ಸಂಘನಿಕೇತನದಲ್ಲಿ ರವಿವಾರ ಆಯೋಜಿಸಿದ್ದ ಭಾರತೀಯ ಮಜ್ದೂರ್‌ ಸಂಘದ 60ರ ಸಂಭ್ರಮದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಶಾ ಕಾರ್ಯಕರ್ತೆಯರ, ಬೀಡಿ ಕಾರ್ಮಿಕರ, ಕಟ್ಟಡ ಕಾರ್ಮಿಕರ ಸಮಸ್ಯೆ ಸೇರಿದಂತೆ ಕಾರ್ಮಿಕ ವರ್ಗದ ಹಲವು ಸಮಸ್ಯೆಗಳಿದ್ದು, ಇವುಗಳನ್ನು ಸರಕಾರದ ಗಮನಕ್ಕೆ ತರುವ ಪ್ರಯತ್ನ ನಡೆದಿವೆ. ಆಶಾ ಕಾರ್ಯಕತೆಯರ ಹಾಗೂ ಕಟ್ಟಡ ಕಾರ್ಮಿಕರ ಸಮಸ್ಯೆಗೆ ಸೂಕ್ತ ಸ್ಪಂದನೆ ನೀಡಲಾಗಿದ್ದು, ಬೀಡಿ ಉದ್ಯಮದ ಸಮಸ್ಯೆ ಕೋರ್ಟ್‌ನಲ್ಲಿರುವುದರಿಂದ ಅದು ಇತ್ಯರ್ಥವಾಗಬೇಕಿದೆ ಎಂದರು.

ಅಸಂಘಟಿತ ಹಾಗೂ ಇತರ ಕಾರ್ಮಿಕ ವರ್ಗಕ್ಕೆ ಸೌಲಭ್ಯ ಒದಗಿಸುವ ಯೋಜನೆಯ ದೃಷ್ಟಿಕೋನವಿಟ್ಟುಕೊಂಡೇ ಅಟಲ್‌ ಪಿಂಚಣಿ ಯೋಜನೆ ಜಾರಿಗೆ ತರಲಾಗಿದೆ. ಬಿಎಂಎಸ್‌ ಸಲ್ಲಿಸಿರುವ ಎಲ್ಲ ಬೇಡಿಕೆಗಳನ್ನು ಕೇಂದ್ರ ಸರಕಾರ ಈಡೇರಿಸಲಿದೆ. 60 ವರ್ಷಗಳ ಹಿಂದೆ ಭಾರತ್‌ ಕಿಸಾನ್‌ ಸಂಘ ಮತ್ತು ಭಾರತ್‌ ಮಜ್ದೂರ್‌ ಸಂಘ ಸ್ಥಾಪನೆಯಾಗಿ ಕಾರ್ಮಿಕ ವಲಯವನ್ನು ಸಂಘಟಿತಗೊಳಿಸಲು ಸಹಕಾರಿಯಾಯಿತು. ಪ್ರಸ್ತುತ ಬಿಎಂಎಸ್‌ ಬಲಿಷ್ಠ ಸಂಘಟನೆಯಾಗಿ ಬೆಳೆದಿದ್ದು, ಕಾರ್ಮಿಕರಿಗೆ ಅರ್ಹ ಸವಲತ್ತು ಒದಗಿಸುವಲ್ಲಿ ಶ್ರಮಿಸುತ್ತಿದೆ. ತಾನೂ ಕೂಡ ಲೋಕಸಭೆಯಲ್ಲಿ ಬಿಎಂಎಸ್‌ನ ಧ್ವನಿಯಾಗಿ ನಿಲ್ಲುವುದಾಗಿ ತಿಳಿಸಿದರು.

ದೇಶದಲ್ಲಿ ಕಾರ್ಮಿಕ ಸಂಘಟನೆಗಳ ಪೈಕಿ ಬಿಎಂಎಸ್‌ ಮುಂಚೂಣಿಯಲ್ಲಿದ್ದು, ದ.ಕ. ಜಿಲ್ಲೆಯಲ್ಲೂ ಎಲ್ಲ ಕ್ಷೇತ್ರದಲ್ಲಿ ಬಿಎಂಎಸ್‌ ಸಂಘಟನೆ ಬಲಿಷ್ಠಗೊಂಡಿದೆ. ರಾಷ್ಟ್ರೀಯ ವಿಚಾರಧಾರೆಯೊಂದಿಗೆ ಕಾರ್ಮಿಕರು ಬೆಳೆದಲ್ಲಿ ಅವರ ಜೀವನ ಬೆಳಗುತ್ತದೆ. ದ.ಕ. ಜಿಲ್ಲೆಯಲ್ಲಿ ಕೆಲವು ಕಾರ್ಮಿಕ ಸಂಘಟನೆಗಳ ಅವೈಜ್ಞಾನಿಕ ಹೋರಾಟದಿಂದ ಹೊಟೇಲ್‌, ಹಂಚಿನ ಕಾರ್ಖಾನೆ ಮುಚ್ಚಿದವು. ಇದೀಗ ಕೇರಳದಂತಹ ರಾಜ್ಯಗಳಲ್ಲಿ ಕೆಲವು ಕಾರ್ಮಿಕ ಸಂಘಟನೆಗಳ ಹೋರಾಟದಿಂದ ಉದ್ಯಮಗಳಿಗೆ ಹೊಡೆತ ಬಿದ್ದಿದೆ. ಇಲ್ಲಿ ಉತ್ತಮ ಪರಿಸರವಿದ್ದರೂ ಸರಿಯಾಗಿ ಆರ್ಥಿಕ ಕ್ರೋಢೀಕರಣವಾಗದಿರಲು ಎಡಪಂಥೀಯ ವಿಚಾರಧಾರೆಯೇ ಕಾರಣ. ಕೈಗಾರಿಕೆಗಳು ಸೃಷ್ಟಿಯಾಗದೆ ಉದ್ಯೋಗ, ಆರ್ಥಿಕ ಪ್ರಗತಿಗೆ ಹಿನ್ನಡೆಯಾಗಿದೆ. ಆದರೆ, ಭಾರತೀಯ ಮಜ್ದೂರ್‌ ಸಂಘ ಕಾರ್ಮಿಕರ ಬೆಳವಣಿಗೆಯೊಂದಿಗೆ ಉದ್ಯಮ ಬೆಳೆಯಲು ಕೂಡ ಆದ್ಯತೆ ನೀಡುತ್ತದೆ. ಉದ್ಯಮ ಬೆಳೆದಾಗ ರಾಷ್ಟ್ರ ಬೆಳೆಯುತ್ತದೆ, ಇದರೊಂದಿಗೆ ಕಾರ್ಮಿಕರು ಕೂಡ ತನ್ನಿಂದ ತಾನಾಗಿಯೇ ಬೆಳೆಯುತ್ತಾರೆ ಎಂದರು.

ಬಿಎಂಸ್‌ ಆರ್ಥಿಕ ಕ್ಷೇತ್ರ ಸಹಪ್ರಭಾರಿ ಕೆ. ರಾಮಕೃಷ್ಣ ಪೂಂಜ ಮಾತನಾಡಿ, ಬಿಎಂಎಸ್‌ 1.75 ಕೋಟಿ ಸದಸ್ಯರನ್ನು ಹೊಂದುವ ಮೂಲಕ ವಿಶ್ವದಲ್ಲಿಯೇ ದ್ವಿತೀಯ ಸ್ಥಾನದಲ್ಲಿದೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಅನುಕಂಪ ಆಧಾರದಲ್ಲಿ ನೀಡುತ್ತಿದ್ದ ಹುದ್ದೆಯನ್ನು ಕೇಂದ್ರ ಸರಕಾರ ಮತ್ತೆ ಜಾರಿಗೆ ತಂದಿರುವುದು ಸಂತಸದ ಸಂಗತಿ. ಕೇಂದ್ರ ಬೋನಸ್‌ ಕಾಯ್ದೆ ತಿದ್ದುಪಡಿ ಮಾಡಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಎಂಎಸ್‌ ರಾಜ್ಯಾಧ್ಯಕ್ಷ ಕೆ. ವಿಶ್ವನಾಥ ಶೆಟ್ಟಿ ಮಾತನಾಡಿ, ನಮ್ಮವರನ್ನೇ ಬಿಎಂಎಸ್‌ನತ್ತ ಕರೆತರುವ ಮೂಲಕ ಈ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವತ್ತ ಹೆಚ್ಚಿನ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೂ ಅನುಮಾನದಿಂದ ನೋಡುವವರಿದ್ದಾರೆ. ಎದೆಗುಂದದೆ ಮುನ್ನಡೆಯೋಣ ಎಂದರು.

ಬಿಎಂಎಸ್‌ ದಕ್ಷಿಣ ಪ್ರಾಂತೀಯ ಸಹಪ್ರಭಾರಿ ಸೂರ್ಯನಾರಾಯಣ ರಾವ್‌, ಬಿಎಂಎಸ್‌ ರಾಷ್ಟ್ರೀಯ ಉಪಾಧ್ಯಕ್ಷೆ ಮಂಗಳಾಂಬ ರಾವ್‌, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ರೀಟಾ ಎಸ್‌., ಉಪಾಧ್ಯಕ್ಷೆ ಕಮಲಮ್ಮ, ಉಡುಪಿ ಜಿಲ್ಲಾ ಬಿಎಂಎಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಗುಲ್ವಾಡಿ, ಪದಾಕಾರಿಗಳಾದ ಎನ್‌.ಕೆ. ಪ್ರಕಾಶ್‌, ಮಧುಸೂದನ್‌, ಶಂಕರ್‌ ಸುಲೇಗಾ, ಅನಿತಾ ಸೇಟ್‌, ಇಂದಿರೇಶ್‌, ಪುರುಷೋತ್ತಮ ಮೊದಲಾದವರು ಉಪಸ್ಥಿತರಿದ್ದರು.

ಬಿಎಂಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ವಿ. ಲೋಕೇಶ್‌ ಸ್ವಾಗತಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ವಂದಿಸಿದರು. ಸಿಡಬ್ಲೂಸಿ ಸಹ ಕಾರ್ಯದರ್ಶಿ ಸಿ. ರಮೇಶ್‌ ಕಾರ್ಯಕ್ರಮ ನಿರೂಪಿಸಿದರು.

Courtesy : Udayavani

Highslide for Wordpress Plugin