ಮಂಗಳೂರು: ಜ್ಞಾನ ದೇಶದ ಅಭಿವೃದ್ಧಿಯ ಸಂಪತ್ತು. ದರೋಡೆಕೋರರಿಗೆ, ಆಕ್ರಮಣಕಾರರಿಗೆ ಆಕ್ರಮಿಸಲಾಗದ ಸಂಪತ್ತು ಇದ್ದರೆ ಅದು ಜ್ಞಾನ ಮಾತ್ರ. ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸಂಪತ್ತಿದೆ. ಆದರೆ ಕೇವಲ ಸಂಪತ್ತಿನಿಂದ ಬದುಕಲು ಆಗುವುದಿಲ್ಲ. ಬದುಕಿಗೆ ಪ್ರಕೃತಿಯ ಆರಾಧನೆ ಕೂಡಾ ಬೇಕಾಗಿದೆ. ಯಾಕೆಂದರೆ ಪ್ರಕೃತಿಗೆ ದೊಡ್ಡ ಶಕ್ತಿಯಿದೆ. ಜನರ ಜೀವನದ ಮೇಲೆ ಪರಿಣಾಮ ಪಕೃತಿಯಿಂದ ಬೀರುವುದು ಸಹಜ. ಇದನ್ನು ನಿಯಂತ್ರಿಸಲಿಕ್ಕಾಗಿ ಪ್ರಕೃತಿ ಆರಾಧನೆ ಮಾಡುತ್ತೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿಯ ಹಾಗೇ ಪ್ರಾಣಿಗಳಲ್ಲಿರುವ ಶಕ್ತಿಗಳನ್ನು ಗುರುತಿಸಿದ್ದೇವೆ. ಅದೇ ರೀತಿ ನಾಗನಲ್ಲಿರುವ ಶಕ್ತಿಯನ್ನು ನಾವು ಮನಗಂಡಿದ್ದೇವೆ. ವ್ಯವಹಾರಿಕವಾದ ಶಕ್ತಿ ಇದ್ದರೆ ಅದು ನಾಗನಲ್ಲಿ ಮಾತ್ರ ಕಾಣಲು ಸಾಧ್ಯ. ನಾಗನಿಗೆ ವಿಶೇಷ ಗೌರವ ಕೊಡಲಾಗುತ್ತದೆ. ಎಲ್ಲಾ ಭೂಮಿಗಳಲ್ಲಿ ನಾಗಾರಾಧನೆ ಇದೆ. ಅದೇ ರೀತಿ ನಾಗನ ಶಕ್ತಿ ಇದೆ. ನಾಗದೇವರು ಇಲ್ಲದ ಭೂಮಿ, ಮನೆ, ಕುಟುಂಬ ಇಲ್ಲ. ಪ್ರಕೃತಿಯಲ್ಲಿ ಆಗುವ ಬದಲಾವಣೆ ಸಾಮಾನ್ಯ. ಪ್ರಕೃತಿ ಬದಲಾವಣೆಯಿಂದ ರೋಗಗಳು ಬರುತ್ತವೆ. ಎಲ್ಲಾ ರೋಗಗಳಿಗೆ ಪರಿಹಾರ ಕೂಡಾ ಇದೆ. ನಾವು ಪ್ರಾಚೀನ ಕಾಲದಿಂದ ನಾಗಾರಾಧನೆ ಮಾಡುತ್ತಾ ಬಂದವರು. ಅದರಲ್ಲಿ ನಂಬಿಕೆ , ವಿಶ್ವಾಸ ಇರಬೇಕು. ನಮ್ಮ ಏಕತೆಗೆ, ನಮ್ಮ ಸಾಧನೆಗೆ, ನಮ್ಮ ರಕ್ಷಣೆಗೆ ನಾಗಾರಾಧನೆ ಅತೀ ಮುಖ್ಯ ಎಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ಧಾರ್ಮಿಕ ಉಪನ್ಯಾಸ ನೀಡಿದ ವಿದ್ವಾನ್ ಪಂಜ ಭಾಸ್ಕರ ಭಟ್ ಅವರು ನಾಗಾರಾಧನೆಯ ಮೂಲ ತತ್ವ ತಿಳಿಯಬೇಕಾದರೆ ಕೃತಯುಗದ ವಿಚಾರವನ್ನು ತಿಳಿಯಬೇಕು. ಈ ಭೂಮಿಯಲ್ಲಿ ನಾಗರಾಧನೆಯ ಸಾನಿಧ್ಯವಿದೆ. ಇಲ್ಲಿ ನಾವು ನಾಗರಾಧನೆ ಮಾಡದಿದ್ದರೆ ಕೃತಘ್ನರಾಗುತ್ತೇವೆ. ಶಾಸ್ತ್ರೀಯವಾಗಿ ಜೀರ್ಣೋದ್ದಾರಗೊಂಡ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನವು ದೇವರ ರಹಸ್ಯ ಹೊಂದಿರುವ ಕ್ಷೇತ್ರವಾಗಿದೆ. ಇದು ಪರಶುರಾಮನ ಕ್ಷೇತ್ರ. ಕೃಷಿ ಕಾರ್ಯಕ್ಕೆ ಈ ಭೂಮಿಯನ್ನು ಬಳಸದಿದ್ದರೆ ನಾಗಭೂಮಿಯನ್ನಾಗಿ ಪರಿವರ್ತನೆಯಾಗುತ್ತದೆ. ಈ ಭೂಮಿಯಲ್ಲಿ ನಾಗದೇವರ ಸಾನಿಧ್ಯವಿದೆ. ಹಾಗಾಗಿ ನಾಗದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಕೆಲಸ ಆಗಬೇಕಾಗಿದೆ. ನಾಗಾರಾಧನೆ ಮಾಡದಿದ್ದರೆ ನಾವು ಕೃತಘ್ನರಾಗುತ್ತೇವೆ. ಆರೋಗ್ಯ ಪ್ರಾಪ್ತಿ ಆಗಬೇಕಾದರೆ ನಾಗಾರಾಧನೆ ಮಾಡಬೇಕು ಎಂದವರು ತಿಳಿಸಿದರು.
ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಭಯಚಂದ್ರ ಜೈನ್, ಶಾಸಕಿ ಶಕುಂತಳ ಶೆಟ್ಟಿ, ಕರ್ನಾಟಕ ಬ್ಯಾಂಕ್‌ನ ಅಧ್ಯಕ್ಷ ಪಿ. ಜಯರಾಂ ಭಟ್, ಉದ್ಯಮಿ ಸೀತಾರಾಮ ಜಾಣು ಶೆಟ್ಟಿ, ಕುಡ್ಪಿ ಜಗದೀಶ್ ಶೆಣೈ, ಆಡಳಿತಾಧಿಕಾರಿ ಅರವಿಂದ ಎ ಸುತಗುಂಡಿ, ಮುಕ್ತೇಸರ ಭಾಸ್ಕರ ಕೆ. ಕೆ. ಸುದರ್ಶನ ಕುಡುಪು, ನರಸಿಂಹತಂತ್ರಿ, ಕೃಷ್ಣರಾಜ ತಂತ್ರಿ, ಚಂದ್ರಹಾಸ್ ರೈ, ಶರಣ್ ಪಂಪ್‌ವೆಲ್ ಮೊದಲಾದವರು ಉಪಸ್ಥಿತರಿದ್ದರು.
ವಾಸುದೇವರಾವ್ ಕುಡುಪು ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರ್ವಹಿಸಿದರು.