ಗೇರು ಸಂಶೋಧನಾ ನಿರ್ದೇಶನಾಲಯ, ಕೆಮ್ಮಿಂಜೆ, ಮೊಟ್ಟೆತ್ತಡ್ಕ, ಪುತ್ತೂರು ಇಲ್ಲಿ ದಿನಾಂಕ 20-02-2015 ರಂದು ಗೇರು ದಿನೋತ್ಸವ ಹಾಗೂ ಗಿರಿಜನ ಕೃಷಿಕರೊಡನೆ ಸಂವಾದ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ೨೨ ಫಲಾನುಭವಿ ಗಿರಿಜನ ಕೃಷಿಕರಿಗೆ ಆರ್ಥಿಕ ಸಹಾಯವನ್ನು ಚೆಕ್ ಮೂಲಕ ವಿತರಿಸಿದರು. ದಕ್ಷಿಣ ಜಿಲ್ಲೆಯ ಕೃಷಿಕರು ಪ್ರಯೋಗಶೀಲರು ಹಾಗೂ ಮಾನಸಿಕವಾಗಿ ದೃಢತೆ ಹೊಂದಿರುವವರು. ಹಾಗಾಗಿ ಆತ್ಮಹತ್ಯೆಗೆ ಇಲ್ಲಿನ ಕೃಷಿಕರು ಮುಂದಾಗಿಲ್ಲ ಎಂದರು. ಗೇರು ಬೆಳೆಯನ್ನು ವಾಣಿಜ್ಯ ಬೆಳೆಯನ್ನಾಗಿ ಬೆಳೆದರೆ ಕೃಷಿಕರಿಗೆ ಅನುಕೂಲ ಎಂದರು. ಇದಕ್ಕೆ ವಿಜ್ಞಾನಿಗಳು ಹಾಗೂ ತೋಟಗಾರಿಕಾ ಇಲಾಖೆಯವರು ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಸಿ. ವಾಸುದೇವಪ್ಪ ಅವರು ಗೇರು ಸಂಶೋಧನಾ ನಿರ್ದೇಶನಾಲಯದ ವಾರ್ತಾಪತ್ರವನ್ನು ಬಿಡುಗಡೆ ಮಾಡಿ ‘ಗೇರು ಕೃಷಿಗೆ ಸಾಕಷ್ಟು ಭವಿಷ್ಯವಿದೆ. ಮೈದಾನ ಪ್ರದೇಶದಲ್ಲಿಯೂ ಗೇರು ವಿಸ್ತರಣೆಯಾಗುತ್ತಿದೆ. ಎಂದು ಅಭಿಪ್ರಾಯಪಟ್ಟರು.
ತದನಂತರ ಪ್ರಗತಿಪರ ಕೃಷಿಕರಾದ ಕಡಮಜಲು ಸುಭಾಸ್ ರೈ ಮಾತನಾಡಿ ಗೇರು ಬೆಳೆಯಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡರು. ಗೇರಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ನೀಡಿದರೆ ಹೆಚ್ಚು ಫಸಲನ್ನು ಪಡೆಯಬಹುದು. ಗೇರನ್ನು ಲಾಭದಾಯಕವಾಗಿ ಬೆಳೆಯಲು ಸಾಧ್ಯ ಎಂದರು. ಇನ್ನೋರ್ವ ಕೃಷಿಕ ಹರಿಶ್ಚಂದ್ರ ಶೆಟ್ಟಿ ಮಾತನಾಡಿ ಗೇರು ಬೆಳೆಯನ್ನು ಕೀಟನಾಶಕವಿಲ್ಲದೆ ಬೆಳೆಯಲು ಸಾಧ್ಯ ಎಂದರು. ಪ್ರಗತಿಪರ ಕೃಷಿಕ ಡಾ. ಪಿಕೆ ಎಸ್ ಭಟ್ ಮಾತನಾಡಿ ಗೇರು ಕೃಷಿಕರೊಡನೆ ಹೆಚ್ಚೆಚ್ಚು ಸಂವಾದಗಳಾಗಬೇಕು. ಇದಕ್ಕಾಗಿ ಗೇರು ಪತ್ರಿಕೆಯೊಂದರ ಅಗತ್ಯವಿದೆ ಎಂದರು. ಮಂಚಿಯ ರಾಮ್ ಕಿಶೋರ್ ಮಾತನಾಡಿ ಗೇರು ಬೆಳೆಯನ್ನು ಬಾಧಿಸುವ ಟಿ ಸೊಳ್ಳೆಗೆ ಮಂಗಳೂರು ಮೂಲದ ಡಾ. ಮನೋಹರ ಉಪಾಧ್ಯರು ತಯಾರಿಸಿರುವ ಅಗ್ರಿಫಿಟ್ ಸಸ್ಯಮೂಲ ದ್ರಾವಣವನ್ನು ಬಳಸಿ ಸಂಶೋಧನೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು. ಇನ್ನೂ ಹಲವಾರು ಕೃಷಿಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅಧ್ಯಕ್ಷೀಯ ಭಾಷಣ ಮಾಡಿದ ಗೇರು ಸಂಶೋಧನಾಲಯದ ನಿರ್ದೇಶಕ ಪ್ರೊಫೆಸರ್ ಪಿ. ಎಲ್ ಸರೋಜ್ ‘ಗೇರು ಕೃಷಿಯನ್ನು ಸರಿಯಾಗಿ ಮಾಡಿದರೆ ಇಳುವರಿ ಹೆಚ್ಚಿಸಲು ಸಾಧ್ಯ. ಅದಕ್ಕಾಗಿ ಕೃಷಿಕರು ನಿರ್ದೇಶನಾಲಯದ ಸಹಾಯ ಪಡೆಯಬೇಕೆಂದರು
ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಗಂಗಾಧರ ನಾಯಕ್ ಸ್ವಾಗತಿಸಿದರೆ, ಇನ್ನೋರ್ವ ಪ್ರಧಾನ ವಿಜ್ಞಾನಿ ಡಾ. ಪಿ ಎಸ್ ಭಟ್ ವಂದಿಸಿದರು. ಹಿರಿಯ ವಿಜ್ಞಾನಿ ಡಾ. ಮೋಹನ್ ಕಾರ್ಯಕ್ರಮ ನಿರೂಪಿಸಿದರು.