ಮಂಗಳೂರು: ಮಂಗಳೂರು-ಶಾರ್ಜಾ ನಡುವಣ ಜೆಟ್ ಜೆಟ್ ಏರ್‌ವೇಸ್‌ನ ನೇರ ವಿಮಾನಯಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರವಿವಾರ ಆರಂಭವಾಯಿತು.
ಮುಖ್ಯ ಅತಿಥಿಯಾಗಿದ್ದ ನಿಟ್ಟೆ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಎನ್. ವಿನಯ ಹೆಗ್ಡೆ ಅವರು ಮಂಗಳೂರು-ಶಾರ್ಜಾ ನೇರವಿಮಾನ ಯಾನದ ದೀರ್ಘಕಾಲದ ಕನಸು ನನಸಾಗಿದೆ ಎಂದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಪ್ರಯಾಣಿಕರಿಗೆ ವಿಶೇಷ ಸೌಲಭ್ಯ ಒದಗಿಸುವ ಮೂಲಕ ಜೆಟ್ ಏರ್‌ವೇಸ್ ಯಶಸ್ಸು ಸಾಧಿಸಿದೆ ಎಂದು ಶ್ಲಾಘಿಸಿದರು.
ಮಂಗಳೂರು ಅಂ.ವಿ. ನಿಲ್ದಾಣದ ಸಮಗ್ರ ಬೆಳವಣಿಗೆ ಗಮನಾರ್ಹವೆಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಜೆಟ್ ಏರ್‌ವೇಸ್ ಸಂಸ್ಥೆಯು ಮತ್ತಷ್ಟು ಹೊಸ ಯಾನಗಳನ್ನು ಆರಂಭಿಸಲೆಂದು ಸಚಿವ ಯು.ಟಿ. ಖಾದರ್ ಹಾರೈಸಿದರು.
3 ವರ್ಷಕ್ಕೆ 300 ಕೋ.ರೂ.
ಮಂಗಳೂರು ಅಂ.ವಿ. ನಿಲ್ದಾಣ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಾ ಮಾದರಿ ನಿಲ್ದಾಣವಾಗಿ ರೂಪುಗೊಂಡಿದೆ. ಮುಂದಿನ ಮೂರು ವರ್ಷಗಳ ವಿಸ್ತರಣಾ ಕಾರ್ಯಕ್ಕೆ 300 ಕೋ.ರೂ. ಮಂಜೂರಾಗಿದೆ ಎಂದು ನಿಲ್ದಾಣದ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ತಿಳಿಸಿದರು.
ಜೆಟ್ ಏರ್‌ವೇಸ್‌ನ ಈ ನೂತನ ವಿಮಾನದ ಎಕ್ಸಿಕ್ಯೂಟಿವ್ ಶ್ರೇಣಿಯ ಪ್ರಥಮ ಪ್ರಯಾಣಿಕ ಹಿದಾಯತುಲ್ಲಾ ಅಬ್ಟಾಸ್ ಶುಭಾಶಂಸನೆಗೈದರು. ಜನರಲ್ ಮೆನೇಜರ್ ಹರೀಶ್ ಶೆಣೈ ಸ್ವಾಗತಿಸಿದರು. ಏರಿಯಾ ಮೆನೇಜರ್ ಕೆ. ಗಂಗಾಧರ ಹೆಗ್ಡೆ ವಂದಿಸಿದರು. ಅರ್ಚನಾ ನಿರೂಪಿಸಿದರು.
ಮಂಗಳೂರಿನಿಂದ ಪ್ರತಿದಿನ ಬೆಳಗ್ಗೆ 9.30ಕ್ಕೆ ಹೊರಡುವ ಈ ವಿಮಾನ ಶಾರ್ಜಾಕ್ಕೆ 11.45ಕ್ಕೆ ತಲುಪಲಿದೆ. ಅಲ್ಲಿಂದ 12.45ಕ್ಕೆ ಹೊರಟು ಸಂಜೆ 5.55ಕ್ಕೆ ಮಂಗಳೂರು ತಲುಪುತ್ತದೆ.
Source : Udayavani