ಬೆಳ್ತಂಗಡಿ: ನಾಡಿನ ಪಾರಂಪಾರಿಕ ಕಟ್ಟಡಗಳನ್ನು, ಶಿಲ್ಪಕಲಾಕೃತಿಗಳನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದ್ದು ಸ್ವಾಭಿಮಾನದ ಸಂಕೇತವಾಗಿ ಜನರ ಸಹಭಾಗಿತ್ವದಿಂದ ಅವು ಪುನರುಜ್ಜೀವನಗೊಳ್ಳಬೇಕು. ಹೊಸ ದೇವಸ್ಥಾನಗಳನ್ನು ಕಟ್ಟುವುದರ ಬದಲು ಹಳೆಯ ದೇವಸ್ಥಾನಗಳನ್ನು ಉಳಿಸಿ ಬೆಳೆಸುವ ಕಾರ್ಯ ಹೆಚ್ಚಾಗಿ ಆಗಬೇಕಾಗಿದೆ ಎಂದು ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ರಾಜ್ಯ ಸಚಿವೆ ಉಮಾಶ್ರೀ ಹೇಳಿದರು.
ಅವರು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜನಾಥ ಸ್ವಾಮಿಯ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಧರ್ಮೋತ್ಥಾನ ಟ್ರಸ್ಟ್‌ನ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ರಜತೋತ್ಸವ ಸಂಭ್ರಮದಲ್ಲಿ ಟ್ರಸ್ಟ್ ಹೊರತಂದಿರುವ ಧರ್ಮೋತ್ಥಾನ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಸಂಸದ ನಳೀನ್ ಕುಮಾರ್ ಕಟೀಲು ಅವರು ಹಿಂದೆ ದೇವಾಲಯಗಳು ರಾಜಾಶ್ರಯದಿಂದ ನಡೆಯುತ್ತಿದ್ದವು. ದ.ಕ.ದೇಗುಲಗಳ ಜಿಲ್ಲೆ. ಹಿರಿತನದ ಪರಂಪರೆ ಉಳಿಸುವ ಕಾಯಕ ಶ್ರದ್ಧಾ ಕೇಂದ್ರಗಳಿಂದ ನಡೆಯಬೇಕು. ಭವಿಷ್ಯತ್ತಿನ ಕತ್ತಲನ್ನು ಬೆಳಕು ಮಾಡುವ ಕೆಲಸ ನಿರಂತರ ನಡೆಯಬೇಕು ಎಂದರು. ಡಾ| ಹೆಗ್ಗಡೆಯವರಿಗೆ ವಾಜಪೇಯಿ ಸರಕಾರವಿದ್ದಾಗ ಪದ್ಮಭೂಷಣ ಬಂದರೆ ಮೋದಿ ಸರಕಾರದಲ್ಲಿ ಪದ್ಮವಿಭೂಷಣ ಪ್ರಾಪ್ತವಾಗಿರುವುದು ಸಂತೋಷದ ವಿಚಾರ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸ್ಮಾರಕ, ಕೋಟೆಗಳನ್ನು ಆಪತ್ತಿನಿಂದ ರಕ್ಷಿಸಿ, ಅಲ್ಲಿ ನಡೆಯುತ್ತಿರುವ ಒತ್ತುವರಿಗಳನ್ನು ತಡೆಯಬೇಕು. ಬಜೆಟ್‌ನಲ್ಲಿ ಸ್ವಾರಕಗಳ ಪುನರುಜ್ಜೀವನಕ್ಕೆ ಹೆಚ್ಚಿನ ಹಣ ಇಡಬೇಕು. ಜನರಲ್ಲಿ ಸ್ಮಾರಕಗಳು ಅಮೂಲ್ಯ ಸಂಪತ್ತೆಂಬ ಮತ್ತು ಎಲ್ಲರಿಗೂ ಸೇರಿದ್ದಾಗಿದೆ ಎಂಬ ಪ್ರಜ್ಞೆ ಬರಬೇಕು ಎಂದ ಅವರು ವರ್ಷಕ್ಕೆ 20 ದೇವಾಲಯಗಳನ್ನು ನವೀಕರಿಸುವ ಕೆಲಸ ಮುಂದುವರಿಯಲಿದೆ. ಜೊತೆಗೆ ಕಳೆದ ವರ್ಷದಲ್ಲಿ 1,700 ಕ್ಕೂ ಹೆಚ್ಚು ದೇವಾಲಯಗಳಿಗೆ ಕ್ಷೇತ್ರದಿಂದ ನೆರವು ನೀಡಲಾಗಿದೆ. ಅದರಂತೆ ವಿವಿಧ ಸೇವಾ ಕಾರ್ಯಗಳೂ ಮುಂದುವರಿಯಲಿದೆ ಎಂದರು.
ವೇದಿಕೆಯಲ್ಲಿ ಶಾಸಕ ಕೆ.ವಸಂತ ಬಂಗೇರ, ಟ್ರಸ್ಟ್ ಸಲಹಾ ಸಮಿತಿ ಸದಸ್ಯರಾದ ಚೂಡಾಮಣಿ ನಂದಗೋಪಾಲ್, ಡಾ.ಜಿ.ಅಶ್ವಥ ನಾರಾಯಣ, ಡಾ.ಎನ್.ಎಸ್. ರಂಗರಾಜು, ಮಾಜಿ ಸಚಿವ ಬಚ್ಛೇ ಗೌಡ, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಶ್ರೀನಿವಾಸ ಮೂರ್ತಿ, ಶ್ರೀನಿವಾಸ ಶೆಟ್ಟಿ ಇದ್ದರು. ಟ್ರಸ್ಟಿ ಡಿ. ಸುರೇಂದ್ರಕುಮಾರ್ ಸ್ವಾಗತಿಸಿದರು. ನಿರ್ದೇಶಕ ಹರಿರಾಮ ಶೆಟ್ಟಿ ಪ್ರಸ್ತಾವಿಸಿದರು. ಕಾರ್ಯದರ್ಶಿ ಎ.ವಿ.ಶೆಟ್ಟಿ ವಂದಿಸಿದರು. ಉಪನ್ಯಾಸಕ ಸುನಿಲ್ ಪಂಡಿತ್ ಕಾರ್ಯಕ್ರಮ ನಿರ್ವಹಿಸಿದರು.