ಮಂಗಳೂರು : ಎತ್ತಿನಹೊಳೆ ಯೋಜನೆ ವಿರುದ್ಧ ಮೇ 16 ರಂದು ಮಧ್ಯಾಹ್ನ 3 ಗಂಟೆಗೆ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಜಾಥಾವನ್ನು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಹಮ್ಮಿಕೊಂಡಿತ್ತು.
‘ನೇತ್ರಾವತಿ ಉಳಿಸಿ – ಎತ್ತಿನಹೊಳೆ ವಿರೋಧಿಸಿ’ ಪ್ರತಿಭಟನಾ ಜಾಥಾ ಮತ್ತು ಸಭೆಯಲ್ಲಿ ಮಠಾಧೀಶರು, ಮಸೀದಿಯ ಮೌಲ್ವಿಗಳು, ಚರ್ಚ್ ನ ಧರ್ಮಗುರುಗಳು, ಜಿಲ್ಲೆಯ ಹಲವಾರು ಸಂಘಟನೆಗಳು, ರಾಜಕೀಯ ಪಕ್ಷಗಳ ಧುರೀಣರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಪ್ರತಿಭಟನಾ ಜಾಥಾದಲ್ಲಿ ಪಾಲ್ಗೊಂಡು ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಜಿಲ್ಲೆಯ ಏಕೈಕ ಕುಡಿಯುವ ನೀರಿನ ಭಾಗ್ಯ ಒದಗಿಸುವ ನೇತ್ರಾವತಿ ನದಿ ಕರಾವಳಿ ಜನತೆಯ ಆಧಾರ. ಈ ಯೋಜನೆಗೆ ಕರಾವಳಿಗರ ಸ್ಪಷ್ಟ ವಿರೋಧವಿದ್ದು, ಯೋಜನೆಯನ್ನು ವಿರೋಧಿಸಿ ಕಳೆದ 3 ವರ್ಷಗಳಿಂದ ಪಾದಯಾತ್ರೆ, ಪ್ರತಿಭಟನೆ, ಬಂದ್ ಸಹಿತ ಹಲವು ಸ್ತರದ ಹೋರಾಟ ನಡೆದಿದೆ. ಆದರೆ ರಾಜ್ಯ ಸರ್ಕಾರ ಜನರ ಭಾವನೆಗಳಿಗೆ ಯಾವುದೇ ಮನ್ನಣೆ ನೀಡದೆ ತನ್ನದೇ ಆದ ಧೋರಣೆ ನಡೆಸುತ್ತಿದೆ. ಎತ್ತಿನಹೊಳೆ ಯೋಜನೆಯಿಂದ ಬರ ಪೀಡಿತ ಜಿಲ್ಲೆಗಳಿಗೆ ನೀರು ಸಿಗಲು ಸಾಧ್ಯವಿಲ್ಲ. ಈಗಾಗಲೇ ತಜ್ಞರು ವರದಿಯನ್ನು ನೀಡಿದ್ದರೂ ಅದನ್ನು ಪರಿಗಣಿಸದೆ ಕೇವಲ ಹಣ ಮಾಡುವ ಯೋಜನೆ ಕಾಂಗ್ರೆಸ್ ಸರ್ಕಾರಕ್ಕಿದೆ. ಈಗಾಗಲೇ ದ. ಕ. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎದುರಾಗಿದೆ.
ಸರ್ಕಾರ ಇನ್ನೂ ಎಚ್ಚೆತ್ತುಕೊಳ್ಳದೆ ಹೋದರೆ ದ. ಕ. ಜಿಲ್ಲೆಯ ಜನತೆ ಮತ್ತೆ ಹೋರಾಟವನ್ನು ತೀವ್ರಗೊಳಿಸಲಿದ್ದಾರೆ. ಮತ್ತು ಮೇ 19 ರಂದು ಬಂದ್ ಗೆ ಸಂಪೂರ್ಣ ಬೆಂಬಲವನ್ನು ನಾನು ನೀಡುತ್ತೇನೆ ಎಂದರು.