ಎರಡನೇ ಬಾರಿ ಸಾಂಸದನಾದ ನನಗೆ ಯಾವುದು ಸಂವಿಧಾನ ಬಾಹಿರ, ಸಾರ್ವಜನಿಕರ ಹಿತದೃಷ್ಟಿಂದ ಏನು ಮಾತನಾಡಬೇಕು ಮತ್ತು ಹೇಗೆ ವ್ಯವಹರಿಸಬೇಕೆಂಬ ಅರಿವಿದೆ. ನಿರ್ದಿಷ್ಟ ರಾಜಕೀಯ ಪಕ್ಷಗಳು ಮತ್ತು ಸಮಾಜ ಹಿತ ಭಂಜಕರು ನನ್ನ ಹೇಳಿಕೆಯನ್ನು ತಿರಿಚಿ ಮಂಗಳೂರಿನಲ್ಲಿ ಅಶಾಂತಿಯನ್ನು ಹುಟ್ಟಿಸಲು ನಿರ್ಧರಿಸಿದಂತಿದೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಖಂಡಿತಾ ವಿಷಾದಿಸುತ್ತೇನೆ ಎಂದು ಹಿಂದೆಯೇ ಪತ್ರಿಕಾ ಪ್ರಕಟಣೆ ನೀಡಿದ್ದೆ. ಹಾಗೆಂದ ಮಾತ್ರಕ್ಕೆ ನಾನು ಹೇಳಿದ್ದು ತಪ್ಪು ಎಂದಲ್ಲ. ನನ್ನ ಹೇಳಿಕೆಗೆ ವಿವಿಧ ಅರ್ಥವನ್ನು ಕೊಡುವ ಮುನ್ನ ನಾನು ಮಾತನಾಡಿದ ಸನ್ನಿವೇಶ ಮತ್ತು ಸ್ಥಳವನ್ನು ಗಮನಿಸಬೇಕು.
ಮಂಗಳೂರಿನಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಲ್ಲೆಗಳು ಮತ್ತು ಸಾಲು ಕೊಲೆಗಳಿಂದ ಮನಸ್ಸು ಘಾಸಿಗೊಂಡಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರೇ ಬಂದು ಪ್ರತಿಭಟನೆ ಮಾಡಿದ್ದರೂ ಆರೋಪಿಗಳನ್ನು ಈವರೆಗೆ ಬಂಧಿಸಲಾಗಿಲ್ಲ. ಹಿಂದುಗಳ ಮೇಲಾಗುತ್ತಿರುವ ಹಲ್ಲೆಯಿಂದ ಶೋಕತಪ್ತರಾಗಿದ್ದ ನಮಗೆ ಮಾತನಾಡುವ ವೇದಿಕೆಯಾಗಿ ಸಿಕ್ಕಿದ್ದು ಪ್ರತಿಭಟನಾ ಸಭೆ. ಹಿಂದು ಯುವಕರ ಹತ್ಯೆಯ ಹಿಂದಿರುವ ಮತೀಯ ಮೂಲಭೂತವಾದಿಗಳನ್ನು ಸರ್ಕಾರ ಬಂಧಿಸುತ್ತಿಲ್ಲ. ಮೂಲಭೂತವಾದಿಗಳ ತುಷ್ಟೀಕರಣವನ್ನು ಹೀಗೆಯೇ ಮುಂದುವರೆಸಿದರೆ ಮಂಗಳೂರಿಗೆ ಬೆಂಕಿ ಹಚ್ಚುವುದಾಗಿ ಹೇಳಿದ್ದೆ. ಅದರ ಅರ್ಥ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಪ್ರತಿಭಟನೆಯನ್ನು ಇನ್ನಷ್ಟು ಚುರುಕುಗೊಳಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂಬುದು ಮಾತಿನ ಭಾವವಾಗಿತ್ತು. ರೂಪಕಗಳನ್ನು (ಮೆಟಾಫರ್) ಅರಿಯದವರೂ ನನ್ನ ಲೋಕಸಭಾ ಕ್ಷೇತ್ರದಲ್ಲಿದ್ದಾರೆ ಎಂಬುದು ಆಶ್ಚರ್ಯ ತಂದಿದೆ. ದಕ್ಷಿಣಕನ್ನಡ ಕ್ಷೇತ್ರದ ಸಂಸತ್ ಸದಸ್ಯನಾದ ನಾನು ನನ್ನದೇ ಕ್ಷೇತ್ರಕ್ಕೆ ಬೆಂಕಿ ಇಡುತ್ತೇನೆ ಎಂದು ಹೇಳುವುದು ಸಾಧ್ಯವೇ? ಅಂತಹ ಘಟನೆಯೇನಾದರೂ ನಡೆದರೆ ಹಾನಿಗೇಡಾಗುವವರು ನನ್ನ ಜನರೇ ಅಲ್ಲವೇ? ಇರಲಿ, ಮಂಗಳೂರನ್ನು ಮತಗಳ ಆಧಾರದಲ್ಲಿ ಒಡೆದು ಬೆಂಕಿಹೊತ್ತಿಸಿರುವ ಮತೀಯ ಓಲೈಕೆ ಪಕ್ಷದಿಂದ ಇಂತಹ ಆರೋಪಕ್ಕಿಂತ ಹೆಚ್ಚಿನದೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.
ಈ ಲೇಖನದಲ್ಲಿ ಹೇಳಬೇಕಿರುವ ಮತ್ತು ಓದುಗರ ಗಮನ ಸೆಳೆಯಬೇಕಿರುವ ಕೆಲವು ಪ್ರಮುಖ ಅಂಶಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದಕ ದ್ರವ್ಯ ಮಾರಾಟ, ಅಕ್ರಮ ಗೋ ಕಳ್ಳಸಾಗಾಟ ಹಾಗೂ ಇತ್ಯಾದಿ ಕಾನೂನು ಬಾಹಿರ ಮತ್ತು ಸಮಾಜ ಘಾತುಕ ಕಾರ್ಯಗಳು ಅವ್ಯಾಹತವಾಗಿ ನಡೆದುಬರುತ್ತಿದೆ. ಇವನ್ನೆಲ್ಲ ಪ್ರಶ್ನಿಸಿದ್ದ ಪ್ರಶಾಂತ್ ಪೂಜಾರಿ, ಮೂಡುಶೆಡ್ಡೆ ಚರಣ್ ಹೆಣವಾದರು. ಸೋಮೇಶ್ವರದ ಉಚ್ಚಿಲದ ಗಣೇಶ್ ಎಂಬುವರ ಮನೆಯಲ್ಲಿ ಕತ್ತರಿಸಿದ ದನದ ಕಾಲನ್ನಿಟ್ಟರು. ಕಳೆದ ಒಂದೆರಡು ವರ್ಷದಲ್ಲಿ ಅಭಿಷೇಕ್, ಸತೀಶ್ ಪಜೀರು, ಧನು ತೊಕ್ಕಟ್ಟು, ತಲಪಾಡಿ ಪ್ರದೀಪ್, ಸೂರಜ್ ತೊಕ್ಕಟ್ಟು ಹೇಮಂತ್ ಮೊಗವೀರರ ಮೇಲೆ ಮಾರಣಾಂತಿಕ ದಾಳಿಗಳಾಗಿವೆ. ದೇರಳಕಟ್ಟೆಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಅಪಹರಣ-ಅತ್ಯಾಚಾರ, ರಾಮ್ಮೋಹನ್ ಹತ್ಯೆ ಯತ್ನ, ತಾರಾನಾಥ್ ಉಳ್ಳಾಲರ ಮನೆ ಬಾಗಿಲಿಗೆ ಬೆಂಕಿ ಹಚ್ಚುವ ಯತ್ನ ನಡೆದಿದೆ. ಕೊಣಾಜೆ ಸಮೀಪ ಕಾರ್ತಿಕ್ ರಾಜ್ ಹತ್ಯೆ ಮತ್ತು ಕೊಲ್ಯದ ಸತೀಶರ ಹತ್ಯೆ ನಡೆದಿದೆ.
ಈಗ ನೀವೇ ಹೇಳಿ; ಇಂತಹ ಪ್ರಕ್ಷುಬ್ಧ ವಾತಾವರಣದಲ್ಲಿ ಬದುಕುತ್ತಿರುವ ದಕ್ಷಿಣ ಕನ್ನಡದ ಜನರು ತಮ್ಮ ಧ್ವನಿಯನ್ನು ಪ್ರತಿಭಟನೆಯ ಮೂಲಕವಲ್ಲದೆ ಇನ್ನು ಹೇಗೆ ವ್ಯಕ್ತಪಡಿಸಬೇಕು? ಹಿಂದುಗಳ ಹತ್ಯೆಯ ಹಿಂದಿರುವ ಸಮಾಜಘಾತುಕರನ್ನು ಹಿಡಿಯುವಂತೆ ಪ್ರತಿಭಟನೆಯ ಕಾವು ಹೆಚ್ಚಿಸಿ ಒತ್ತಾಯಿಸುವುದು ಸಂವಿಧಾನ ನೀಡುವ ಹಕ್ಕಲ್ಲವೇನು?
ಓಲೈಕೆ ಪಕ್ಷಗಳು ಮತ್ತು ಕಾಮ್ರೇಡ್ಗಳು ಸೇರಿ ಸುಳ್ಳು ಆರೋಪ ಹೊರಿಸಲು ಯತ್ನಿಸುತ್ತಿದ್ದಾರೆ. ಅವರ ಸುಳ್ಳು ಆರೋಪದಲ್ಲೂ ನನಗೊಂದು ಸಮಾಧಾನವಿದೆ. ಆ ಸಮಾಧಾನವೇನೆಂದರೆ, ಕಳೆದ ಹಲವು ವರ್ಷಗಳಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ಹಿಂದು ವಿರೋಧಿ ಚಟುವಟಿಕೆಗಳು ಹಾಗೂ ಹತ್ಯೆಗಳ ಸುದ್ದಿ ಜಿಲ್ಲೆಯನ್ನು ಬಿಟ್ಟು ಹೊರ ಹೋಗುತ್ತಿರಲಿಲ್ಲ. ಬೆಂಗಳೂರಿನಂತಹ ಜನಸಾಗರದ ನಗರದವರು ಇತ್ತ ತಿರುಗಿಯೂ ನೋಡುತ್ತಿರಲಿಲ್ಲ. ಇಂದು ನನ್ನ ಹೇಳಿಕೆಯನ್ನು ವಿರೋಧಿಗಳು ತಿರುಚಿದ ಪರಿಣಾಮ, ನಳಿನ್ ಕುಮಾರ್ ಕಟೀಲ್ ಹೀಗೆ ಏಕೆ ಮಾತನಾಡಿದರು? ಅವರ ಮಾತಿನ ಉದ್ದೇಶವೇನು? ಭಾವವೇನು? ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ನನ್ನ ಜನರ ನೋವು, ಸಾವಿನ ಆಕ್ರಂದನ ರಾಜ್ಯದ ಜನತೆಗೆ ತಲುಪಿದೆ.
ಹಿಂದುಗಳು ಇನ್ನಾದರೂ ಮಂಗಳೂರಿನಲ್ಲಿ ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಬಹುದು ಎಂಬ ನಂಬಿಕೆ ಹುಟ್ಟಿದೆ.
By : ನಳಿನ್ ಕುಮಾರ್ ಕಟೀಲ್, ಸಾಂಸದ