ಕರ್ನಾಟಕ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳವಾರ ಅಧಿಕೃತವಾಗಿ ಅಧಿಕಾರವನ್ನು ಸ್ವೀಕಾರ ಮಾಡಿದ್ದಾರೆ. ಪದವಿ ಸ್ವೀಕಾರ ಸಮಾರಂಭ ಬೆಂಗಳೂರಿನ ಮಲ್ಲೇಶ್ವರಂನಲ್ಲಿನ ಭಾರತೀಯ ಜನತಾ ಪಕ್ಷದ ಪ್ರಧಾನ ಕಛೇರಿಯಲ್ಲಿ ಜರುಗಿತು.
ಬೆಳಗ್ಗೆ 9 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದ ನೂತನ ಅಧ್ಯಕ್ಷರನ್ನು ಭವ್ಯ ಸ್ವಾಗತದೊಂದಿಗೆ ಬರ ಮಾಡಿಕೊಳ್ಳಲಾಗಿತ್ತು. ಬಳಿಕ ಅವರು ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ಅವರನ್ನು ಮಂಗಳವಾದ್ಯಗಳೊಂದಿಗೆ ಅದ್ಧೂರಿಯಾಗಿ ಬಿಜೆಪಿ ರಾಜ್ಯ ಕಚೇರಿಗೆ ಕರೆ ತರಲಾಗಿದೆ. ಅಲ್ಲಿ ಜರುಗಿದ ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ಸ್ಥಾನವನ್ನು ಅವರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹಸ್ತಾಂತರ ಮಾಡಿದರು. ಈ ಸಂದರ್ಭ ಬಿಜೆಪಿ ಮುಖಂಡರು, ಗಣ್ಯರು ಉಪಸ್ಥಿತರಿದ್ದರು.
ಈ ವೇಳೆ ನೂತನವಾಗಿ ರಾಜ್ಯಾಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ನಳಿನ್ ಕುಮಾರ್ ಕಟೀಲ್ ಅವರನ್ನು ಸಿಎಂ ಯಡಿಯೂರಪ್ಪ ಸನ್ಮಾನಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕಟೀಲ್, “ನಮ್ಮ ವಿಚಾರಧಾರೆಗೆ ಯಾವತ್ತೂ ಸಾವಿಲ್ಲ. ಅಂತಹ ವಿಚಾರಧಾರೆಯನ್ನು ಹೊಂದಿರುವ ಇಲ್ಲಿ ನೆರೆದಿರುವ ಸಹಸ್ರ ಸಂಖ್ಯೆಯ ಕಾರ್ಯಕರ್ತ ದೇವರಿಗೆ ಪ್ರಣಾಮಗಳು. ಯಡಿಯೂರಪ್ಪ ಅವರ ಕೈಯಲ್ಲಿ ಪದವಿಯನ್ನು ಸ್ವೀಕರಿಸುವುದಕ್ಕಿಂತ ಶ್ರೇಷ್ಠವಾದುದು ನನಗೆ ಯಾವುದೂ ಅಲ್ಲ. ನಾನು ಸಾಧಕ, ಜ್ಞಾನಿಯಲ್ಲ. ಸಂಘದ ಶಾಖೆಯಲ್ಲಿ ಬೆಳೆದೆ. ನಾನು ಇಷ್ಟು ಎತ್ತರಕ್ಕೆ ಏರುವುದಕ್ಕೆ ಸಂಘದ ಶಾಖೆಯೇ ಕಾರಣ. ಮನೆ ಮನೆಗೆ ಮತ ಕೇಳಲು ಹೋಗುವ ಸಾಮಾನ್ಯ ಕಾರ್ಯಕರ್ತ ರಾಜ್ಯಾಧ್ಯಕ್ಷನಾಗುತ್ತಾನೆ ಎಂಬುದು ಬಿಜೆಪಿಯ ಹಿರಿಮೆ” ಎಂದರು.
“ಬಹಳ ಎಚ್ಚರಿಕೆಯಿಂದ ಹುದ್ದೆಯನ್ನು ನಿಭಾಯಿಸುತ್ತೇನೆ. ಭಯವಿದೆ ಆದರೆ ಭಯದೊಂದಿಗೆ ಆತ್ಮವಿಶ್ವಾಸವೂ ಇದೆ. ಯಡಿಯೂರಪ್ಪ ಇದ್ದಾರೆ, ಸಹಸ್ರಾರು ಕಾರ್ಯಕರ್ತರು ನಮ್ಮೊಂದಿಗೆ ಇದ್ದು ಮಾರ್ಗದರ್ಶನ ಮಾಡುತ್ತಾರೆ ಎಂಬ ಆತ್ಮವಿಶ್ವಾಸ ನನಗಿದೆ. ರಾಜ್ಯವ್ಯಾಪಿಯಾಗಿ ಪಕ್ಷವನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ನಾನು ಶ್ರಮಿಸುತ್ತೇನೆ” ಎಂದಿದ್ದಾರೆ.