ಬೆಳ್ತಂಗಡಿ: ಬ್ರಹ್ಮಕಲಶ ಮೊದಲಾದ ಉತ್ಸವಗಳ ಮಹತ್ವವನ್ನು ತಿಳಿದುಕೊಂಡಲ್ಲಿ ಅದರಲ್ಲಿ ಭಾಗವಹಿಸಲು ಇನ್ನಷ್ಟು ಉತ್ಸಾಹ ಮೂಡುತ್ತದೆ ಎಂದು ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ನುಡಿದರು.
ಅವರು ನಿಟ್ಟಡೆ ಎಂಬಲ್ಲಿನ ಬೆರ್ಕಜೆ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಬ್ರಹ್ಮಕಲಶೋತ್ಸವದ ನಾಲ್ಕನೇ ದಿನವಾದ ಬುಧವಾರ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ನ್ಯಾಯದ ಬದುಕಿಗೆ ಧರ್ಮದ ಅನುಸರಣೆ ಅಗತ್ಯ. ದೇವರೆ ನಂಬಿಕೆಯೇ ಬದುಕಿಗೆ ಮೂಲ. ಕರ್ಮಸಿದ್ಧಾಂತದ ಮೇಲೆ ನಾವು ನಮ್ಮ ಜೀವನವನ್ನು ರೂಪಿಸಿಕೊಂಡಿದ್ದೇವೆ. ದೈವ-ದೇವರುಗಳ ಕಾರಣಿಕದಿಂದಾಗಿಯೇ ಧರ್ಮ ಮುಂದುವರಿಯುತ್ತಿದೆ ಎಂದರು.
ಸಾಂಸದ ನಳೀನ್ ಕುಮಾರ್ಕಟೀಲು, ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ, ಪರಪ್ಪು ಬಂಗೇರಕಟ್ಟೆ ಜುಮ್ಮಾ ಮಸೀದಿ ಖತೀಬ ಕೆ.ಎಂ.ಹನೀಫ್ ಸಖಾಫಿ, ಪಿಲ್ಯ ಮಸೀದಿಯ ಕೆ.ಪಿ.ದಾವೂದ್ ಮದನಿ, ಬೆಂಗಳೂರು ಹೆಗ್ಗಡೆ ಸಮಾಜ ಅಧ್ಯಕ್ಷ ದೇವೇಂದ್ರ ಹೆಗ್ಡೆ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ, ಮೂಡಬಿದ್ರೆಯುವ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎನ್.ಎ.ಗೋಪಾಲ ಶೆಟ್ಟಿ, ಅಳದಂಗಡಿಯ ಉದ್ಯಮಿ ವೆಂಕಟೇಶ್, ಅಳದಂಗಡಿ ಗ್ರಾಪಂ ಸದಸ್ಯ ಸದಾನಂದ ಪೂಜಾರಿ ಉಂಗಿಲಬೈಲು, ಕುಕ್ಕೇಡಿ ಗ್ರಾ.ಪಂ.ಉಪಾಧ್ಯಕ್ಷೆ ಗೌರಿ, ಕ್ಷೇತ್ರದ ಧರ್ಮದರ್ಶಿ ರಮೇಶ್ ಬರ್ಕಜೆ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪಿ. ಧರಣೇಂದ್ರಕುಮಾರ್ ಸ್ವಾಗತಿಸಿದರು. ಅಧ್ಯಕ್ಷ ಕೆ. ಸದಾಶಿವ ಹೆಗ್ಡೆ ಪ್ರಸ್ತಾವಿಸಿದರು. ಕೊಕ್ರಾಡಿ ಅಜಿತ್ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.