Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ರಾಜ್ಯ ಸರ್ಕಾರವು ರಬ್ಬರ್‌ಗೆ ಬೆಂಬಲ ಬೆಲೆ ಘೋಷಿಸಲಿ – ನಳಿನ್

ಪುತ್ತೂರು: ಲೋಕಸಭಾ ಅಧಿವೇಶನಕ್ಕೂ ಮುನ್ನ ಕೇಂದ್ರ ವಾಣಿಜ್ಯ ಸಚಿವೆ ಬಳಿ ನಿಯೋಗ ತೆರಳಿ ಸರ್ಕಾರಕ್ಕೆ ರಬ್ಬರ್ ಬೆಳೆಗಾರರ ಸಮಸ್ಯೆಯನ್ನು ಹೇಳಿಕೊಳ್ಳಲಾಗುತ್ತದೆ. ಅದರ ಜೊತೆಗೆ ರಾಜ್ಯ ಸರ್ಕಾರವು ರಬ್ಬರ್‌ಗೆ ಬೆಂಬಲ ಬೆಲೆ ಘೋಷಿಸಲಿ ಎಂದು ಸಾಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಅವರು ಸೋಮವಾರ ಪುತ್ತೂರು ಜೈನ ಭವನದಲ್ಲಿ ನಡೆದ ರಬ್ಬರ್ ಬೆಳೆಗಾರರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಬಾರಿ ರಬ್ಬರ್ ಧಾರಣೆ ಇಳಿಕೆಯಾದ ಸಂದರ್ಭದಲ್ಲಿ ಕೇರಳದ ಸಾಂಸದರು ರಬ್ಬರ್ ಬೆಳೆಗಾರರ ಸಮಸ್ಯೆಯನ್ನು ಹೇಳೀದ್ದರು. ಬಳಿಕ ಕ್ರಮ ಕೈಗೊಳ್ಳಲಾಗಿತ್ತು. ಈಗ ಕರ್ನಾಟಕದ ರಬ್ಬರ್ ಬೆಳೆಗಾರರ ಸಮಸ್ಯೆಯ ಬಗ್ಗೆಯೂ ನಿಯೋಗ ಕೊಂಡೊಯ್ದು ವಿವರಿಸುವ ಕೆಲಸ ಆಗಬೇಕಾಗಿದೆ ಎಂದರು.

Rubber-(1)

ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ಶಕುಂತಳಾ ಶೆಟ್ಟಿ ಕೇಂದ್ರ ಸರ್ಕಾರ ರಬ್ಬರ್ ಬೆಳೆಗೆ ಪ್ರತ್ಯೇಕ `ರಾಷ್ಟ್ರೀಯ ರಬ್ಬರ್ ನೀತಿ’ ಜಾರಿಗೆ ತರಬೇಕು. ದೇಶದಲ್ಲಿ ರಬ್ಬರ್‌ಗೆ ಮಾರುಕಟ್ಟೆ ಸೃಷ್ಟಿಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀಧರ ಭಿಡೆ,ಈಗ ರಬ್ಬರ್ ಬೇಡಿಕೆ ಹೆಚ್ಚಿದೆ, ಉತ್ಪಾದನೆ ಕಡಿಮೆ ಇದ್ದರೂ ಧಾರಣೆ ಏರಿಕೆ ಆಗುತ್ತಿಲ್ಲ, ಇದಕ್ಕೆ ಸಾರ್ಕ್ ಒಪ್ಪಂದವೂ ಕಾರಣವಾಗಿದೆ. ಒಪ್ಪಂದದಂತೆ 2019 ರವರೆಗೆ ರಬ್ಬರ್ ಧಾರಣೆ ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ. ಒಂದು ವೇಳೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಆಮದಾಗುತ್ತಿರುವ ರಬ್ಬರ್‌ಗೆ ಕಡಿವಾಣ ಹೇರಿದರೆ, ದೇಶೀಯ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಲಿದೆ. ಇದೀಗ ತೆರಿಗೆ ವಿನಾಯಿತಿ ನೀಡಿರುವುದರಿಂದ ಭಾರತದಲ್ಲಿ ಉತ್ಪಾದನೆ ಆಗುತ್ತಿರುವುದಕ್ಕಿಂತ ಕಡಿಮೆ ವೆಚ್ಚಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ, ರಬ್ಬರ್ ಆಮದು ಮಾಡಿಕೊಳ್ಳದಂತೆ ಕೈಗಾರಿಕೆಗಳಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ಗುತ್ತಿಗಾರು ರಬ್ಬರ್ ಬೆಳೆಗಾರರ ಸಂಘ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ, ಕೇರಳ ಸರ್ಕಾರ ರಬ್ಬರ್‌ಗೆ 5 ರೂ. ಬೆಂಬಲ ಬೆಲೆ ಘೋಷಿಸಿದೆ. ಕರ್ನಾಟಕ ಸರ್ಕಾರವೂ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿದರು.

ತಾಪಂ ಅಧ್ಯಕ್ಷೆ ಪುಲಸ್ತ್ಯಾ ರೈ, ಕರ್ನಾಟಕ ರಬ್ಬರ್ ಬೆಳೆಗಾರರ ಸಂಘ ಉಪಾಧ್ಯಕ್ಷ ಸೀತಾರಾಮ ರೈ ಸವಣೂರು, ರಬ್ಬರ್ ಉತ್ಪಾದನಾ ಬೆಳೆಯ ಪುತ್ತೂರು ಪ್ರಾದೇಶಿಕ ಕಚೇರಿ ಉಪ ಆಯುಕ್ತ ಕೃಷ್ಣ ಕುಮಾರ್, ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಪದ್ಮನಾಭ ಅಮೀನ್ ಉಪಸ್ಥಿತರಿದ್ದರು. ರಬ್ಬರ್ ಬೆಳೆಗಾರರಾದ ಗೋಪಾಲಕೃಷ್ಣ ಕುಂಟಿನಿ, ನನ್ಯ ಅಚ್ಚುತ ಮೂಡೆತ್ತಾಯ ಅನಿಸಿಕೆ ವ್ಯಕ್ತಪಡಿಸಿದರು.

ತಾಲೂಕು ರಬ್ಬರ್ ಬೆಳೆಗಾರರ ಸಂಘ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಸ್ವಾಗತಿಸಿ, ರಮೇಶ್ ಕಲ್ಕುರೆ ವಂದಿಸಿದರು. ಪ್ರೊ.ಬಿ.ಜೆ.ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin