ಬಂಟ್ವಾಳ: ಕೆ.ರಮೇಶ್ ನಾಯಕ್ ರಾಯಿ ಅಭಿನಂದನಾ ಸಮಿತಿ ವತಿಯಿಂದ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಕೆದ್ದಳಿಕೆ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕೆ.ರಮೇಶ್ ನಾಯಕ್ ರಾಯಿ ಅವರಿಗೆ ಶನಿವಾರ ಬಂಟ್ವಾಳ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ವಿದ್ಯಾರತ್ನ ಬಿರುದು ಪ್ರದಾನ ಹಾಗೂ ವಿದ್ಯಾರತ್ನ ಅಭಿನಂದನಾ ಗ್ರಂಥ ಸಮರ್ಪಣೆಯೊಂದಿಗೆ ಸಾರ್ವಜನಿಕ ಅಭಿನಂದನೆ ನಡೆಯಿತು. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಬಿರುದು ನೀಡಿ, ಗ್ರಂಥ ಸಮರ್ಪಿಸಿ ಅಭಿನಂಧಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಜಿಲರು ಮಾತನಾಡಿ, ಶ್ರೇಷ್ಠವಾದ ಶಿಕ್ಷಕ ವೃತ್ತಿಯಲ್ಲಿ ಪ್ರಾಮಾಣಿಕವಾದ ಸೇವೆ ಸಲ್ಲಿಸಿ ವೃತ್ತಿ ಪವಿತ್ರತೆಯನ್ನು ಮೆರೆದ ನಾಯಕ್‌ರ ಕಾರ್ಯವೈಖರಿ, ಸಾಧನೆ ಹಾಗೂ ಹೊಸತನದ ಪ್ರಯೋಗಗಳು ನಾಡಿಗೆ ಮಾದರಿಯಾಗಿದೆ. ಅವರು ಎಲ್ಲಾ ಕಾಲಕ್ಕೂ ಅಭಿನಂದನಾರ್ಹರು, ಅನುಕರಣೀಯರು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಮಾರಂಭ ಉದ್ಘಾಟಿಸಿ ಮಾತನಾಡಿ ರಮೇಶ್ ನಾಯಕ್ರು ಹೋದಲ್ಲೆಲ್ಲಾ ತನ್ನ ಛಾಪನ್ನು ಮೂಡಿಸಿದ್ದಾರೆ. ಎಲ್ಲಾ ಶಾಲೆಗಳನ್ನು ಮಾದರಿಯಾಗಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಅಭಿನಂದನಾ ಸಮಿತಿ ರಚಿಸಿ ನಡೆಸಿದ ಅಭಿನಂದನಾ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ಅವರು ಪತ್ರಕರ್ತ ಗೋಪಾಲ ಅಂಚನ್ ಸಂಪಾದಕತ್ವದ ವಿದ್ಯಾರತ್ನ ರಮೇಶ ನಾಯಕ್ ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿ ಶಿಕ್ಷಕರ ಬದುಕು, ಸಾಧನೆಯನ್ನು ದಾಖಲಿಸುವ ಮೂಲಕ ಶಿಕ್ಷಕ ಹಾಗೂ ವಿದ್ಯಾರ್ಥಿ ವಲಯಕ್ಕೆ ಗ್ರಂಥದ ಮೂಲಕ ಹೊಸ ದಾರಿಯನ್ನು ತೋರಿಸಲಾಗಿದೆ. ಈ ರೀತಿಯ ಸಾಧನೆಗೆ ಪಾತ್ರರಾಗುವ ಮೂಲಕ ನಾಯಕ್‌ರು ಶಿಕ್ಷಕ ಕ್ಷೇತ್ರವನ್ನು ಎತ್ತರಕ್ಕೆ ಬೆಳೆಸಿದ್ದಾರೆ ಎಂದರು.
ಅಂಕಣಗಾರ ನರೇಂದ್ರ ರೈ ದೇರ್ಲ ಅಭಿನಂದನಾ ಭಾಷಣ ಮಾಡಿದರು. ಮಕ್ಕಳಿಗೆ ಆತ್ಮೀಯ ಗುರುವಾಗಿ, ಮಿತ್ರನಾಗಿ ಈ ನೆಲದ ಮಣ್ಣಿನ ಸುವಾಸನೆಯ ಶಿಕ್ಷಣವನ್ನು ಒದಗಿಸಿರುವ ಜತೆಯಲ್ಲಿ ಶಾಲೆಯನ್ನು ಮಗು ಸ್ನೇಹಿ, ಪರಿಸರ ಸ್ನೇಹಿಯಾಗಿಸುವ ಮೂಲಕ ನಾಯಕ್‌ರು ಎಲ್ಲರ ಹೃದಯವನ್ನು ಗೆದ್ದಿದ್ದಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ಶಿಕ್ಷಣ ಪ್ರೇಮಿ ಹರೇಕಳ ಹಾಜಬ್ಬ ಶುಭ ಹಾರೈಸಿದರು. ಹರೇಕಳ ಹಾಜಬ್ಬ ಅವರ ಶಾಲಾ ಪ್ರಗತಿಗೆ ಅಭಿನಂದನಾ ಸಮಿತಿ ವತಿಯಿಂದ ಶೈಕ್ಷಣಿಕ ನಿಧಿ ನೀಡಲಾಯಿತು.
ಸಮಿತಿ ಕೋಶಾಧಿಖಾರಿ ದಿವಾಕರ ದಾಸ್, ನಾಯಕ್‌ರ ತಾಯಿ ಭವಾನಿ, ಪುತ್ರ ಕಾರ್ತಿಕ್ ಕೆ. ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ಉಮಾನಾಥ ರೈ ಮೇರಾವು ಸ್ವಾಗತಿಸಿದರು. ಗೌರವಾಧ್ಯಕ್ಷ ಶೇಷಪ್ಪ ಮೂಲ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಗೋಪಾಲ ಅಂಚನ್ ವಂದಿಸಿದರು. ಸಮಿತಿ ಸಲಹೆಗಾರ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.