Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ

ದೇಸೀ ಕೇಂದ್ರಿತ ವಿಚಾರಗಳು ಭಾರತದಲ್ಲಿ ಬೆಳೆಯಲಾರಂಭಿಸಿವೆ:  ನಾಗಾಲ್ಯಾಂಡ್ ರಾಜ್ಯಪಾಲ ಪದ್ಮನಾಭ ಆಚಾರ್ಯ

ಪುತ್ತೂರು: ನಮ್ಮ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಂದ ಹೊರಬರುವಾಗ ಉದ್ಯೋಗ ಹುಡುಕುವವರಾಗಿರಬಾರದು. ಬದಲಾಗಿ ಉದ್ಯೋಗದಾತರಾಗಿ ಕಾಣಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ಒದಗಿಸುತ್ತಿವೆಯಾದರೂ ನಮ್ಮಲ್ಲಿನ ಉತ್ಕೃಷ್ಟತೆಯನ್ನು ಅರಿಯುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಸಾಧ್ಯವಾಗುತ್ತಿಲ್ಲ. ಆದರೆ ಇತ್ತೀಚೆಗಿನ ದಿನಗಳಲ್ಲಿ ಭಾರತ ಕೇಂದ್ರಿತವಾದ ವಿಚಾರಧಾರೆಗಳು ಬೆಳೆಯಲಾರಂಭಿಸಿವೆ. ಮೇಕ್ ಇನ್ ಇಂಡಿಯ ಕಲ್ಪನೆಗಳು ಭಾರತವನ್ನು ಬಲಿಷ್ಟಗೊಳಿಸಲಾರಂಭಿಸಿವೆ. ನಮ್ಮ ಸ್ಥಳೀಯ ಪ್ರದೇಶಗಳ ಅಭಿವೃದ್ಧಿಗಾಗಿ ಶ್ರಮಿಸುವುದರ ಮುಖೇನ ಅಂತಿಮವಾಗಿ ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ತೊಡಗಬೇಕು ಎಂದು ನಾಗಾಲ್ಯಾಂಡ್‌ನ ರಾಜ್ಯಪಾಲ ಪಿ.ಬಿ.ಆಚಾರ್ಯ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾದ ವಿವೇಕಾನಂದ ಜಯಂತಿ ಆಚರಣೆ, ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ಉಚಿತ ತಾಂತ್ರಿಕ ತರಬೇತಿ ಹಾಗೂ ಗ್ರಾಮವಿಕಾಸ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

News-Photo---Padmanabha-Acharya

ಸಂಘದ ಪ್ರೇರಣೆ, ಅನೇಕ ಗಣ್ಯರ ಪ್ರೇರಣೆಯಿಂದ ಭಾರತ ಪ್ರಪಂಚಮುಖದಲ್ಲಿ ಸದೃಢವಾಗಿ ಮುನ್ನುಗ್ಗಲಾರಂಭಿಸಿದೆ. ಇದಕ್ಕೆ ಪೂರಕವಾದ ಗ್ರಾಮ ವಿಕಾಸದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ತೊಡಗಿರುವುದು ಶ್ಲಾಘನೀಯ. ಪ್ರತಿಯೊಬ್ಬ ಮನುಷ್ಯನೂ ಒಂದು ಅದ್ಭುತ ಕೃತಿ. ಹಾಗಾಗಿ ವ್ಯಕ್ತಿಯನ್ನು ಅಧ್ಯಯನ ಮಾಡುವುದು, ಆತನ ಬಗೆಗೆ ತಿಳಿದುಕೊಳ್ಳುವುದು ಅತ್ಯಂತ ಮಹತ್ವದ ಸಂಗತಿ. ಈ ಬಗೆಗಿನ ಜ್ಞಾನವನ್ನು ನೀಡುವಂತಹ ಶಿಕ್ಷಣ ನಮ್ಮ ದೇಶದಲ್ಲಿತ್ತು. ಆದರೆ ಬ್ರಿಟಿಷರ ಕಾರಣದಿಂದಾಗಿ ನಮಗೆ ನಮ್ಮ ವಿಚಾರಗಳನ್ನು ಅರಿಯುವ, ನಮ್ಮಲ್ಲಿನ ಪ್ರಕೃತಿ, ಸಮುದ್ರಗಳ ಆಳ ಅಗಲವನ್ನು ಅರಿತುಕೊಳ್ಳುವ ಶಕ್ತಿ ಕಳೆದುಹೋಯಿತು ಎಂದು ನುಡಿದರು.

ತಾನು ರಾಜ್ಯಪಾಲನಾದಾಗ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಸಭೆ ಕರೆದಿದ್ದರು. ಆ ಸಭೆಯಲ್ಲಿ ಪ್ರತಿ ರಾಜ್ಯದಲ್ಲೂ ತಳಮಟ್ಟದ ಜನರಿಗೆ ಮುದ್ರಾ ಯೋಜನೆಯನ್ನು ತಲಪುವಂತೆ ಮಾಡಿ ನಿಗದಿತ ಸಂಖ್ಯೆಯ ಉದ್ಯಮಿಕಗಳನ್ನು ಹುಟ್ಟುಹಾಕುವಂತೆ ಸಲಹೆ ನೀಡಿದರು. ಹೀಗೆ ಪ್ರತಿ ರಾಜ್ಯದಲ್ಲೂ ಆರ್ಥಿಕ ಶಕ್ತಿಗಳು ಅನಾವರಣಗೊಂಡಾಗ ದೇಶ ಸುಭದ್ರವಾಗುತ್ತದೆ. ದೇಶವನ್ನು ಪ್ರಾಪಂಚಿಕವಾದ ಶಕ್ತಿಯನ್ನಾಗಿಸುವ ಅಪೇಕ್ಷೆ ಹೊತ್ತವರು ಅನೇಕರು ಇಲ್ಲಿದ್ದಾರೆ. ಅವರನ್ನೆಲ್ಲ ಒಂದುಗೂಡಿಸುವ ಕಾರ್ಯ ಆಗಬೇಕಿದೆ. ಎಲ್ಲರಲ್ಲೂ ಅಮೋಘವಾದ ಚಿಂತನೆ, ಯೋಚನೆಗಳಿವೆ. ಅವುಗಳೆಲ್ಲವೂ ಜಾರಿಗೆ ಬಂದಾಗ ಉದ್ದೇಶಿತ ವಿಚಾರ ಸಾಕಾರಗೊಳ್ಳುತ್ತದೆ. ಅಷ್ಟಕ್ಕೂ ನಮ್ಮ ರಾಷ್ಟ್ರವನ್ನು ನಾವೇ ಸಶಕ್ತಗೊಳಿಸಬೇಕಲ್ಲದೆ ಮತ್ತೊಬ್ಬರಲ್ಲ ಎಂದರು.

ದಿಕ್ಸೂಚಿ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಸೀತಾರಾಮ ಕೆದಿಲಾಯ ಮಾತನಾಡಿ ಯಾರು ಎಲ್ಲರಿಗಾಗಿ ಬದುಕುತ್ತಾರೋ ಅವರು ನಿಜವಾಗಿ ಬದುಕುತ್ತಾರೆ. ಯಾರು ತನಗಾಗಿ ಬದುಕುತ್ತಾರೋ ಅವರು ಸಾಯುತ್ತಾರೆ. ಈ ಬಗೆಗಿನ ವಿವೇಕವನ್ನು ತುಂಬುವ ವಿಚಾರಗಳಿಗೆ ಶಿಕ್ಷಣ ಎಂದು ಹೆಸರು. ನಾನು ನಿನಗಾಗಿ ಬದುಕುತ್ತೇನೆಂಬ ಕಲ್ಪನೆಯಲ್ಲಿ ಬದುಕುವುದಕ್ಕೆ ಮಾನವನ ಬದುಕು ಎಂದು ಕರೆಯುತ್ತೇವೆ. ಆದರೆ ಸುತ್ತಮುತ್ತಲಿನವರಿಂದ ದೇವರಂಥ ಮನುಷ್ಯ ಎಂದು ಕರೆಸಿಕೊಂಡು ಬದುವುದು ಬದುಕಿನ ಸಾರ್ಥ್ಯಕ್ಯ ಎಂದು ಅಭಿಪ್ರಾಯಪಟ್ಟರು.

ಪಶುವಿನಂತೆ ಬದುಕುವುದಕ್ಕೆ ಅಥವ ದಾನವರಂತೆ ಬದುಕುವುದಕ್ಕೆ ಯಾವ ಶಿಕ್ಷಣವೂ ಬೇಕಿಲ್ಲ. ಆದರೆ ಮಾನವರಂತೆ ಹಾಗೂ ದೇವಮಾನವರಂತೆ ಬದುಕಲು ಉತ್ಕೃಷ್ಟವಾದ ಶಿಕ್ಷಣ ಬೇಕು. ಅಂತಹ ಶಿಕ್ಷಣ ಜಾರಿಯಾದಾಗ ಭಾರತ ಮತ್ತೊಮ್ಮೆ ದೈವಭೂಮಿಯಾಗುತ್ತದೆ. ಭಾರತದ ಕಸುವಿರುವುದು ಗ್ರಾಮಗಳಲ್ಲಿ. ಅಂತಹ ಗ್ರಾಮೀಣ ಭಾರತವನ್ನು ಎತ್ತರಿಸುವ ಮಂದಿ ಇಂದು ನಮಗೆ ಬೇಕಾಗಿದ್ದಾರೆ. ಆ ಬಗೆಗಿನ ಸಂಕಲ್ಪ ಮಾಡುವ ಯುವಜನತೆಯ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ಸ್ವಾಮಿ ವಿವೇಕಾನಂದರು ಜಗತ್ತಿನ ಜನಕ್ಕೆ ಭಾರತದ ಆಧ್ಯಾತ್ಮಿಕತೆಯನ್ನು ಹಂಚುವುದಕ್ಕೆ ಹಾಗೂ ಜಗತ್ತಿನ ನಾನಾ ಒಳ್ಳೆಯ ಸಂಗತಿಗಳನ್ನು ಭಾರತಕ್ಕೆ ತರುವುದಕ್ಕೆ ಸೀಮೋಲ್ಲಂಘನ ಮಾಡಿ ಅಮೇರಿಕೆಗೆ ಹೋದರು. ಆದರೆ ಪುನಃ ಭಾರತಕ್ಕೆ ಮರಳಿ ಇಲ್ಲಿನ ದೇವಭೂಮಿಗೆ ಮರಳಿ ಸಂಕಲ್ಪ ಸಾಧಿಸಿದರು. ಆದರೆ ಇಂದಿನ ಯುವಜನತೆ ವಿದೇಶಕ್ಕೆ ತೆರಳುತ್ತಾರೆಯೇ ವಿನಃ ಮರಳುವುದಕ್ಕೆ ಆಸಕ್ತಿ ತೋರುವುದಿಲ್ಲ. ಇದಕ್ಕೆ ಕಾರಣ ಹಣದ ವಾಂಛೆ. ಇದನ್ನು ಮೀರಿ ಬೆಳೆಯುವ ಸಂಸ್ಕಾರ ನಮ್ಮ ಮಕ್ಕಳಲ್ಲಿ ಬೆಳೆಯಬೇಕು ಎಂದರು.

ಇಂದು ಮನುಷ್ಯ ಬದುಕುವುದು ಗ್ರಾಮೀಣ ಪ್ರದೇಶದ ರೈತಾಪಿ ವರ್ಗದಿಂದ. ಹಸಿವಾದಾಗ ಹಣ ತಿನ್ನಲಾಗದು, ಬದಲಾಗಿ ಸಂಬಳದ ಹಣವನ್ನಲ್ಲ. ಹಾಗಾಗಿ ಗ್ರಾಮೀಣ ಭಾರತದ ಜನರನ್ನು ಗೌರವಿಸುವ ಬುದ್ಧಿ ಬೆಳೆಯಬೇಕು. ಯಾವುದೋ ನಾಲ್ಕು ಸಿಮೆಂಟ್ ಕಂಬದ ಮಧ್ಯೆ ಬದುಕುವ ಬದುಕಷ್ಟೇ ಬದುಕು ಎಂದುಕೊಂಡಿರುವ ಭ್ರಮೆಯಿಂದ ಹೊರಬಂದು ಗ್ರಾಮ ಭಾರತದ ಸೊಗಸನ್ನು ಅನುಭವಿಸುವ ಯೋಗ್ಯತೆ ನಮ್ಮಲ್ಲಿ ಬೆಳೆಯಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್, ವಿವೇಕಾನಂದ ಕಾಲೇಜಿನ ಸ್ಥಾಪಕ ಸಂಚಾಲಕ ಉರಿಮಜಲು ಕೆ ರಾಮ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಉಪಸ್ಥಿತರಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ನ.ಸೀತಾರಾಮ ಸ್ವಾಗತಿಸಿ ಪ್ರಸ್ತಾವನೆಗೈದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಡಾ.ಸುಧಾರಾವ್ ಎಸ್ ವಂದಿಸಿದರು. ಪ್ರಾಧ್ಯಾಪಕರುಗಳಾದ ಉಷಾಕಿರಣ್ ಹಾಗೂ ಗುರುಪ್ರಸನ್ನ ಕಾರ್ಯಕ್ರಮ ನಿರ್ವಹಿಸಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ನಾಗಾಲ್ಯಾಂಡ್ ನಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಲು ಮುಂದೆ ಬರಬೇಕು. ಒಳ್ಳೆಯ ಶಿಕ್ಷಣ ಸಂಸ್ಥೆಯನ್ನು ಅಲ್ಲಿ ರೂಪಿಸಬೇಕು.

– ಪದ್ಮನಾಭ ಆಚಾರ್ಯ, ನಾಗಾಲ್ಯಾಂಡ್ ರಾಜ್ಯಪಾಲ

Highslide for Wordpress Plugin