ಕೇಂದ್ರ ಸರಕಾರದ ನಾಲ್ಕೂವರೆ ವರ್ಷಗಳ ಸಾಧನೆಯನ್ನು ಗಣ್ಯರೊಂದಿಗೆ ಹಂಚಿಕೊಳ್ಳುವ ಸಂಪರ್ಕ್ ಫಾರ್ ಸಮರ್ಥನ್ ಅಭಿಯಾನದ ಅಂಗವಾಗಿ ಶನಿವಾರ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಡಿ ವೇದವ್ಯಾಸ ಕಾಮತ್ ಖ್ಯಾತ ಕಲಾವಿದರಾದ ನವೀನ್ ಡಿ ಪಡೀಲ್ ಹಾಗೂ ದೇವದಾಸ್ ಕಾಪಿಕಾಡ್ ಅವರ ನಿವಾಸಗಳಿಗೆ ತೆರಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಯೋಜನೆಗಳ ಯಶಸ್ಸನ್ನು ಹಂಚಿಕೊಂಡರು.
ತುಳುನಾಡಿನ ಖ್ಯಾತ ಕಲಾವಿದರಾದ ನವೀನ್ ಡಿ. ಪಡೀಲ್ ಹಾಗೂ ದೇವದಾಸ್ ಕಾಪಿಕಾಡ್ ಅವರ ನಿವಾಸಗಳಿಗೆ ತೆರಳಿದ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಡಿ ವೇದವ್ಯಾಸ ಕಾಮತ್ ಹಾಗೂ ಬಿಜೆಪಿ ಮುಖಂಡರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ನಂತರ ಸಂಸದರು ಕೇಂದ್ರ ಸರಕಾರದ ಸಾಧನೆಗಳನ್ನು ವಿವರಿಸುವ ಪುಸ್ತಕವನ್ನು ತಾರೆಯರಿಗೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ನರೇಂದ್ರ ಮೋದಿಯವರು ವಿಶ್ವಗುರು ಭಾರತ ಮಾಡುವ ತಮ್ಮ ಗುರಿಯನ್ನು ಈಡೇರಿಸುವ ನಿಟ್ಟಿನಲ್ಲಿ ಇಟ್ಟಿರುವ ಹೆಜ್ಜೆಗಳನ್ನು ನೋಡಿ ಇಡೀ ರಾಷ್ಟ್ರವೇ ಮೆಚ್ಚುಗೆ ಸೂಚಿಸಿದೆ. ಒಂದೇ ಒಂದು ಭ್ರಷ್ಟಾಚಾರವಿಲ್ಲದೆ ಐದು ವರ್ಷ ಪೂರೈಸುವ ಸಾಧನೆ ನಮ್ಮ ಹೆಗ್ಗಳಿಕೆ ಮತ್ತು ಕಪ್ಪುಹಣ, ಆಂತರಿಕ ಭಯೋತ್ಪಾದನೆ ಸಂಪೂರ್ಣವಾಗಿ ಕಡಿಮೆಯಾಗಿದೆ. ಮೋದಿಯವರ ಯೋಜನೆಗಳಿಂದ ವಿಪಕ್ಷಗಳಿಗೆ ಆರೋಪ ಮಾಡಲು ಯಾವುದೇ ವಿಷಯವೇ ಇಲ್ಲವಾಗಿದೆ. ಮೋದಿಯವರ ದಿಗ್ವಿಜಯ ಯಾತ್ರೆ ಮುಂದಿನ ಚುನಾವಣೆಯಲ್ಲಿಯೂ ಮುನ್ನುಗ್ಗಲಿದೆ ಎಂದು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹಿಂದಿಗಿಂತಲೂ ಈ ಬಾರಿ ದೊಡ್ಡ ಅಂತರದಿಂದ ಬಿಜೆಪಿ ಗೆಲ್ಲಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಧಾನಸಭೆಯ ನಮ್ಮ ಜೈತ್ರಯಾತ್ರೆ ಲೋಕಸಭೆಯಲ್ಲಿಯೂ ಮುಂದುವರೆಯಲಿದೆ ಎಂದರು.
ಮನಪಾ ಸದಸ್ಯರುಗಳಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ವಿಜಯಕುಮಾರ್ ಶೆಟ್ಟಿ, ರಾಜೇಂದ್ರ, ಸುರೇಂದ್ರ ಬಿಜೆಪಿ ಮುಖಂಡರುಗಳಾದ ರವಿಶಂಕರ್ ಮಿಜಾರ್, ಭಾಸ್ಕರ ಚಂದ್ರ ಶೆಟ್ಟಿ, ವಸಂತ ಜೆ ಪೂಜಾರಿ, ಶ್ರೀನಿವಾಸ ಶೇಟ್, ರಮೇಶ್ ಕಂಡೆಟ್ಟು, ಕಿಶೋರ್ ಕೊಟ್ಟಾರಿ, ವಚನ್ ಮಣೈ, ರಮೇಶ್ ಹೆಗ್ಡೆ ಮತ್ತಿತ್ತರರು ಉಪಸ್ಥಿತರಿದ್ದರು .