ಮಂಗಳೂರು ಎಸ್ಎಸ್ಎ (ದಕ್ಷಿಣ ಕನ್ನಡ ಟೆಲಿಕಾಂ ಡಿಸ್ಟ್ರಿಕ್ಟ್) ಅಡಿಯಲ್ಲಿ ಕಳೆದ 10-12 ವರ್ಷಗಳಿಂದ ಹಲವಾರು ಸಿಬ್ಬಂದಿಗಳು ಏಜೆನ್ಸಿಗಳ ಮೂಲಕ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇದೀಗ ಅನುದಾನದ ಕೊರತೆಯಿಂದಾಗಿ ಈ ಸಿಬ್ಬಂದಿಗಳಿಗೆ ಕಳೆದ 3-4 ತಿಂಗಳುಗಳಿಂದ ವೇತನ ಪಾವತಿಸಲಾಗುತ್ತಿಲ್ಲ ಅಲ್ಲದೇ ಈಗ ಅವರು ಕರ್ತವ್ಯದ ಅವಧಿಯನ್ನು ತಿಂಗಳಲ್ಲಿ ಕೇವಲ 13 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಇದರಿಂದ ಈ ದಿನಗೂಲಿ ಸಿಬ್ಬಂದಿಗಳು ಸಂಕಷ್ಟಕ್ಕೀಡಾಗಿರುತ್ತಾರೆ. ಈ ಸಿಬ್ಬಂದಿಗಳ ಸೇವೆಗಳನ್ನು ಮುಂದುವರೆಸುವಂತೆ ಹಾಗೂ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ಸಚಿವ ಶ್ರೀ.ಮನೋಜ್ ಸಿನಃ ಇವರಿಗೆ ಮನವಿ ಮಾಡಿದರು, ಸಂಸದರ ಮನವಿಗೆ ಸ್ಪಂಧಿಸಿದ ಸಚಿವರು ಗುತ್ತಿಗೆ ನೌಕರರ ಸೇವೆಯನ್ನು ಮುಂದುವರೆಸುವ ಹಾಗೂ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಿ ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸುವ ಭರವಸೆ ನೀಡಿರುವುದಾಗಿ ಸಂಸದರ ಕಚೇರಿ ಪ್ರಕಟಣೆಯು ತಿಳಿಸಿರುತ್ತದೆ.
ಇದಲ್ಲದೇ ಸಂಸದರು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 3ಜಿ ಸೇವೆಗಳನ್ನು ಬಲಪಡಿಸುವಂತೆ, ಹೆಚ್ಚುವರಿ ಮೊಬೈಲ್ ಟವರ್ ನಿರ್ಮಿಸುವಂತೆ, ಸ್ಥಿರ ದೂರವಾಣಿ, ಬ್ರಾಡ್ ಬ್ಯಾಂಡ್ ಹಾಗೂ ಇತರ ಸೇವೆಗಳನ್ನು ಅಭಿವೃದ್ಧಿಪಡಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.