ಮಂಗಳೂರು: ಸಹಕಾರ ಕ್ಷೇತ್ರದ ಬ್ಯಾಂಕ್‌ಗಳು, ಸಂಸ್ಥೆಗಳು ತಳಮಟ್ಟದಲ್ಲಿ ಜನಸಾಮಾನ್ಯರೊಂದಿಗೆ ಬೆರೆತು ಅವರ ಅವಶ್ಯಕತೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವ ಕಾರ್ಯ ಮಾಡುತ್ತಿವೆ. ಸಹಕಾರ ಕ್ಷೇತ್ರ ಬೆಳೆದಾಗ ಜನಸಾಮಾನ್ಯರು ಅರ್ಥಿಕವಾಗಿ ಉನ್ನತಿ ಸಾಧಿಸಲು ಸಾಧ್ಯ. ಗ್ರಾಹಕ ಸಂತೃಪ್ತಿ ಬದ್ದತೆಯೊಂದಿಗೆ ವಿಶ್ವಕರ್ಮ ಸಹಕಾರ ಬ್ಯಾಂಕ್ ಯಶಸ್ವಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ನಗರದ ರಥಬೀದಿಯಲ್ಲಿರುವ ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ನವೀಕೃತ ಪ್ರಧಾನ ಕಚೆೇರಿ ಮತ್ತು ಪ್ರಧಾನ ಕಚೇರಿ ಶಾಖೆಯನ್ನು ಅವರು ಸೋಮವಾರ ಉದ್ಘಾಟಿಸಿದರು.
ಗ್ರಾಹಕರು ದೇವರು. ಗುಣಮಟ್ಟದ, ದಕ್ಷ ಸೇವೆ ದೊರೆತಾಗ ಗ್ರಾಹಕರ ಪ್ರೀತಿ, ವಿಶ್ವಾಸ ಗಳಿಸಲು ಸಾಧ್ಯ ಎಂದ ಅವರು, 40 ವರ್ಷಗಳ ಇತಿಹಾಸವಿರುವ ವಿಶ್ವಕರ್ಮ ಸಹಕಾರ ಬ್ಯಾಂಕ್ ಹರೀಶ್ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ, ಸಿಬಂದಿಗಳ ಶ್ರಮ, ಅರ್ಪಣಾ ಮನೋಭಾವ, ಸದಸ್ಯರ ನಿರಂತರ ಬೆಂಬಲದೊಂದಿಗೆ ಇಂದು ಪ್ರಮುಖ ಪಟ್ಟಣ ಸಹಕಾರಿ ಬ್ಯಾಂಕ್ ಆಗಿ ಮೂಡಿಬಂದಿದೆ ಎಂದರು.
ಪ್ರಧಾನ ಕಚೇರಿ ಶಾಖೆ ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಕಟೀಲು, ವಿಶ್ವಕರ್ಮ ಸಹಕಾರ ಬ್ಯಾಂಕ್ ಅತ್ಯುತ್ತಮ ಸಾಧನೆಯೊಂದಿಗೆ ಮುನ್ನಡೆಯುತ್ತಿದೆ ಎಂದು ಅಭಿನಂದಿಸಿ ಶುಭ ಹಾರೈಸಿದರು.
ಹರಿಶ್ಚಂದ್ರ ಆಚಾರ್ಯ ತರಬೇತಿ ಕೇಂದ್ರ ಉದ್ಘಾಟಿಸಿದ ಎ.ಜೆ. ವೈದ್ಯಕೀಯ ಕಾಲೇಜು ಮತ್ತು ಸಂಶೋದನ ಕೇಂದ್ರದ ಅಧ್ಯಕ್ಷ ಡಾ| ಎ.ಜೆ. ಶೆಟ್ಟಿ ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಪ್ರಧಾನ ಕಚೇರಿ ಸುಂದರವಾಗಿ ನಿರ್ಮಾಣಗೊಂಡಿದೆ. ಬ್ಯಾಂಕ್ ಉತ್ತಮ ಸಾಧನೆಯೊಂದಿಗೆ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ ಎಂದು ಶ್ಲಾಘಿಸಿದರು.
ಮೂಡಬಿದಿರೆ ಎಸ್‌ಕೆಎಫ್ ಉದ್ಯಮ ಸಮೂಹದ ಆಡಳಿತ ನಿರ್ದೇಶಕ ಜಿ. ರಾಮಕೃಷ್ಣ ಆಚಾರ್, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಸಹಕಾರ ಭಾರತಿ ರಾಷ್ಟ್ರೀಯ ಉಪಾಧ್ಯಕ್ಷ ಕೊಂಕೋಡಿ ಪದ್ಮನಾಭ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ, ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ, ಮನಪಾ ಉಪ ಆಯುಕ್ತ ಗೋಕುಲ್‌ದಾಸ್ ನಾಯಕ್, ಶ್ರೀಮತ್ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನದ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ, ದ.ಕ. ಮತ್ತು ಉಡುಪಿ ವಿಶ್ವಕರ್ಮ ಒಕ್ಕೂಟದ ಗೌರವಾಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ, ಮಂಗಳೂರು ಶ್ರೀಕಾಳಿಕಾಂಬ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗರಾಜ ಆಚಾರ್ಯ, ವಿಧಾನ ಪರಿಷತ್ ಸದಸ್ಯ ಕ್ಯಾ| ಗಣೇಶ್ ಕಾರ್ನಿಕ್, ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮುಖ್ಯ ಅತಿಥಿಗಳಾಗಿದ್ದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ನ ಅಧ್ಯಕ್ಷ ಹರೀಶ್ ಆಚಾರ್ಯ ಸ್ವಾಗತಿಸಿ ಪ್ರಸ್ತಾವನೆಗೈದರು. ಸದಸ್ಯರು ಇಟ್ಟಿರುವ ಅಚಲ ನಂಬಿಕೆಯಿಂದ ಬ್ಯಾಂಕ್ ಇಂದು ಪ್ರಮುಖ ಪಟ್ಟಣ ಸಹಕಾರಿ ಬ್ಯಾಂಕ್ ಆಗಿ ಮೂಡಿಬರಲು ಸಾಧ್ಯವಾಗಿದ್ದು, ಅವರಿಗೆ ಕೃತಜ್ಞತಾ ಪೂರ್ವಕ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು.
ಉಪಾಧ್ಯಕ್ಷ ಡಿ. ಭಾಸ್ಕರ ಆಚಾರ್ಯ, ನಿರ್ದೇಶಕರಾದ ಕೆ. ಲೋಕೇಶ್ ಆಚಾರ್ಯ, ಪಿ. ಜಗದೀಶ ಆಚಾರ್ಯ, ಸೀತಾರಾಮ ಆಚಾರ್ಯ, ರಾಜೇಶ್ ನೆತ್ತರ, ಜಗದೀಶ್ ಜೆ., ಎಸ್. ಜಯಶ್ರೀ ವಿ. ಆಚಾರ್, ಶಕುಂತಾಳ ಬಿ. ರಾವ್, ಎನ್. ಗೋಪಾಲಕೃಷ್ಣ ಆಚಾರ್, ರಾಜೇಶ್, ಗುರುಪ್ರಸಾದ್ ಶೆಟ್ಟಿ ಬಿ., ಪ್ರಧಾನ ವ್ಯವಸ್ಥಾಪಕ ಸುರೇಶ್ ಕುಮಾರ್ ಪಿ. ಉಪಸ್ಥಿತರಿದ್ದರು. ಸೀತಾರಾಮ ಆಚಾರ್ಯ ನಿರೂಪಿಸಿದರು.
ಸಾಧನೆಯ ಹಾದಿಯಲ್ಲಿ
ವಿಶ್ವಕರ್ಮ ಸಹಕಾರ ಬ್ಯಾಂಕ್ 2012ರ ಬಳಿಕ ನಿರಂತರ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ. ಪ್ರಸ್ತುತ 84 ಕೋ. ರೂ. ದುಡಿಯುವ ಬಂಡವಾಳ, 57 ಕೋ. ರೂ. ಮುಂಗಡದೊಂದಿಗೆ ಸದೃಡ ಪಟ್ಟಣ ಸಹಕಾರಿ ಬ್ಯಾಂಕ್ ಆಗಿ ಮೂಡಿಬಂದಿದ್ದು, 5 ಶಾಖೆಗಳನ್ನು ಹೊಂದಿದೆ. ಅಧುನಿಕ ತಂತ್ರಜ್ಞಾನಗಳ ಬಳಕೆಯಲ್ಲೂ ಮುಂಚೂಣಿಯಲ್ಲಿದ್ದು ಕೋರ್ ಬ್ಯಾಂಕಿಂಗ್ ಸೌಲಭ್ಯ, ಸಿಟಿಎಸ್ ಚೆಕ್ ಸೌಲಭ್ಯ, ಆರ್‌ಟಿಜಿಎಸ್/ಎನ್‌ಇಎಫ್‌ಟಿ, ಎಸ್‌ಎಂಎಸ್ ಧೃಡೀಕರಣ, ಇ-ಸ್ಟಾಂಪಿಂಗ್ ಸೌಲಭ್ಯ, ಪಾನ್ ಕಾರ್ಡ್ ಸೌಲಭ್ಯ ಮುಂತಾದ ಸೇವಾ ಸೌಲಭ್ಯಗಳಿವೆ. ಮುಂದಿನ ವರ್ಷ ಎಟಿಎಂ, ಆನ್‌ಲೈನ್ ಬ್ಯಾಂಕಿಂಗ್ ಸೇವೆ ಆರಂಭಿಸಲು ಸಿದ್ಧತೆಗಳು ನಡೆಯುತ್ತಿವೆ . ಪ್ರಧಾನ ಕಚೇರಿ ಶಾಖೆ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ತೆರೆದಿರುತ್ತದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಹರೀಶ್ ಆಚಾರ್ಯ ವಿವರಿಸಿದರು.
Source : www.udayavani.com