ಬಂಟ್ವಾಳ: ಬಿ.ಸಿರೋಡಿನ ಹಳೇ ತಾ.ಪಂ ಕಟ್ಟಡದಲ್ಲಿ ಕಾರ್ಯಾಚರಿಸುವ ಆಧಾರ್ ನೋಂದಾಣಿ ಕೇಂದ್ರಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ರವರು ಮಂಗಳವಾರ ಹಠಾತ್ ಭೇಟಿ ನೀಡಿ ಇಲ್ಲಿನ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪುಸ್ತಕ ಮೇಳ- ಸಾಹಿತ್ಯ ಸಂವಾದ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕಾಗಮಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ರವರು ಕೇಂದ್ರದಲ್ಲಿ ಆಧಾರ್ ನೋಂದಾಣಿಗಾಗಿ ಆಗಮಿಸಿದ್ದ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಧಾರ್ ನೋಂದಾಣಿಗಾಗಿ ಜನಸಾಮಾನ್ಯರ ಸರತಿಯ ಸಾಲು, ಆಗುತ್ತಿರುವ ವಿಳಂಬ ಟೋಕನ್ ವ್ಯವಸ್ಥೆಯ ಬಗ್ಗೆ ಕೇಂದ್ರದ ಅಧಿಕಾರಿಗಳಿಂದ ಮಾಹಿತಿ ಪಡೆದ ಸಂಸದರು ತಕ್ಷಣ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ರವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೇಂದ್ರದಲ್ಲಿ ಜನರಿಗಾಗುವ ತೊಂದರೆಯನ್ನು ವಿವರಿಸಿದರು.
ಹೋಬಳಿ ಮಟ್ಟದಲ್ಲಿ ಕೇಂದ್ರ
ಆಧಾರ್ ನೋಂದಾಣಿ ಕೇಂದ್ರದ ಅವ್ಯವಸ್ಥೆ ಜನಸಾಮಾನ್ಯರಿಗಾಗುವ ಸಮಸ್ಯೆ ಗಮನಕ್ಕೆ ಬಂದಿರುವುದನ್ನು ಸಂಸದರಲ್ಲಿ ಒಪ್ಪಿಕೊಂಡ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂರವರು ಈಗಾಗಲೇ ಜಿಲ್ಲೆಯ ಪ್ರತಿ ಹೋಬಳಿ ಮಟ್ಟದಲ್ಲಿ ಆಧಾರ್ ನೋಂದಾಣಿ ಕೇಂದ್ರವನ್ನು ತೆರೆಯಲಾಗುವುದು ಮುಂದಿನ ೧೫ ದಿನಗಳೊಳಗಾಗಿ ಆಧಾರ್ ನೋಂದಾಣಿ ಕುರಿತಾದ ಜನಸಾಮಾನ್ಯರ ಸಮಸ್ಯೆ ಪರಿಹಾರವಾಗಲಿದೆ ಎಂದು ಜಿಲ್ಲಾಧಿಕಾರಿ ಸಂಸದರಿಗೆ ಭರವಸೆ ನೀಡಿದರು. ಸಂಸದರ ಭೇಟಿಯ ವೇಳೆ ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ.ಆನಂದ, ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ತಾ.ಪಂ ಸದಸ್ಯರಾದ ಆನಂದ ಎ ಶಂಭೂರು, ದಿನೇಶ್ ಅಮ್ಟೂರ್, ಬಿಜೆಪಿ ಮುಖಂಡ ಜಿ.ಮೊಹಮ್ಮದ್ ಕಲ್ಲಡ್ಕ ಮೊದಲಾದವರಿದ್ದರು.