ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ವಸತಿ ಸಚಿವ ವಿ.ಸೋಮಣ್ಣ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು.
ವಿಜಯನಗರದಲ್ಲಿರುವ ಸೋಮಣ್ಣ ನಿವಾಸಕ್ಕೆ ತೆರಳಿದ ಕಟೀಲ್ ಅವರು ಅಲ್ಲಿಯೇ ಉಪಾಹಾರ ಸೇವಿಸಿ ಪಕ್ಷ ಸಂಘಟನೆ ಕುರಿತಂತೆ ಸಮಾಲೋಚಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು,” ಸೋಮಣ್ಣ ಪಕ್ಷದ ಹಿರಿಯ ನಾಯಕರು, ಅವರ ಜತೆ ಸಂಘಟನೆ ಕುರಿತು ಚರ್ಚಿಸಲಾಗಿದೆ. ಸೋಮಣ್ಣ ಮಾರ್ಗದರ್ಶನ ಪಡೆದು ಸಲಹೆ ಸೂಚನೆಗಳನ್ನು ಕೇಳಿದ್ದೇನೆ,” ಎಂದರು.
ಸೋಮಣ್ಣ ಮಾತನಾಡಿ,” ಬಿಬಿಎಂಪಿಯಲ್ಲಿ ಈ ಬಾರಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಪಾಲಿಕೆಯಲ್ಲಿ ನಮಗೆ ಅಧಿಕಾರ ದೊರೆತರೆ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಸಹಕಾರಿಯಾಗಲಿದೆ,” ಎಂದರು.