ಮಂಗಳೂರು: ದೇಶದ ಪ್ರತಿಷ್ಠಿತ ಆಯಿಲ್ ಕಂಪೆನಿಯಿಂದ ‘ಹೆಚ್‌ಪಿಸಿಎಲ್’ ನಿಂದ ಗ್ರಾಹಕರಲ್ಲಿ ನಗದು ರಹಿತ ವ್ಯವಹಾರ ನಡೆಸುವ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕಂಪೆನಿಯ ಮಾರಾಟ ಮಳಿಗೆ (ಪೆಟ್ರೋಲ್ ಪಂಪ್)ಯಾದ ಪಿ.ಜಿ.ಪೆಟ್ರೋಲ್ ಕೇರ್ ಬಾಳದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ನಳಿನ್‌ಕುಮಾರ್ ಕಟೀಲರು ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರು ನಾಗರಿಕರಲ್ಲಿ ನಗದು ರಹಿತ ವ್ಯವಹಾರ ಅಂದರೆ ಕ್ರೆಡಿಟ್, ಡೆಬಿಟ್, ಲೊಯಲ್ಟಿ ಕಾರ್ಡುಗಳನ್ನು ಪೆಟ್ರೋಲ್ ಪಂಪುಗಳಲ್ಲಿ ಉಪಯೋಗಿಸಿ ಇಂಧನದ ಮೇಲೆ 0.75% ಕಡಿತವನ್ನು ಪಡೆದುಕೊಳ್ಳಬೇಕು ಹಾಗೂ ಎಲ್ಲಾ ವ್ಯವಹಾರಗಳನ್ನು ಕಾರ್ಡುಗಳ ಮೂಲಕವೇ ಮಾಡಿದರೆ ಪಾರದರ್ಶಕತೆ ಮತ್ತು ದೇಶದ ಅಭಿವೃದ್ಧಿ ಕಂಡುಬರುತ್ತದೆ. ಈಗ ಇರುವ 25% ನಗದು ರಹಿತ ವ್ಯವಹಾರವನ್ನು ಈ ತಿಂಗಳ ಕೊನೆಗೆ 50%ಗೆ ಹೆಚ್ಚಿಸುವ ಗುರಿ ನಮ್ಮೆಲ್ಲರ ಮೇಲೆ ಇದೆ ಎಂದು ಅವರು ಹೇಳಿದರು.
ಹೆಚ್‌ಪಿಸಿಎಲ್‌ನ ದಕ್ಷಿಣ ಕೇಂದ್ರ ವಲಯದ ಉಪ ಮಹಾ ಪ್ರಭಂಧಕರಾದ ನರಸಿಂಹ ಕೆ.ಛಾರಿಯವರು ಸಭೆಯನ್ನುದ್ದೇಶಿಸಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೇಡಿಟ್, ಡೆಬಿಟ್, ಲೊಯಲ್ಟಿ ಕಾರ್ಡ್‌ಗಳನ್ನು ಹೆಚ್‌ಪಿಸಿಎಲ್ ಪೆಟ್ರೋಲ್ ಪಂಪುಗಳಲ್ಲಿ ಹಾಗೂ ಗ್ಯಾಸ್ ವಿತರಣಾಕಾರರಲ್ಲಿ ಉಪಯೋಗಿಸಿ ನಗದು ರಹಿತ ವ್ಯವಹಾರದಲ್ಲಿ ಸಹಕರಿಸಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ಟಿ.ರಮಣಬಾಬು ಉಪ ಮಹಾಪ್ರಬಂಧಕರು ದಕ್ಷಿಣ ಕೇಂದ್ರ ವಲಯ ಮತ್ತು ಎಮ್ ವಸಂತರಾವ್ ಮುಖ್ಯ ಪ್ರಾದೇಶಿಕ ಪ್ರಬಂಧಕರು ಮಂಗಳೂರು ಪ್ರಾದೇಶಿಕ ಕಛೇರಿ ಹಾಗೂ ಕಂಪನಿಯ ಅಧಿಕಾರಿಗಳು ಉಪಸ್ಥಿತರಿದ್ದರು.