ಸುಳ್ಯ: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಈ ಹಿಂದೆ ಜಾರಿಗೊಳಿಸಿದ್ದ ಹಲವಾರು ಜನಪರ ಯೊಜನೆಗಳನ್ನು ಕಾಂಗ್ರೆಸ್ ಸರಕಾರ ತೆಗೆದು ಹಾಕಿದ್ದು ಜನರಿಗೆ ದ್ರೋಹ ಮಾಡಿದೆ. ರಾಜ್ಯ ಸರ್ಕಾರ ನಿರಂತರ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಸಂಸದ ನಳಿನ್ಕುಮಾರ್ ಕಟೀಲ್ ಆರೋಪಿಸಿದರು.
ಅವರು ಬೆಳ್ಳಾರೆ ಬಿಜೆಪಿ ಶಕ್ತಿಕೇಂದ್ರದ ವ್ಯಾಪ್ತಿಯಲ್ಲಿ ನಡೆದ ಬಿ.ಜೆ.ಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಗತ್ತು ಭಾರತದತ್ತ ನೋಡುವಂತೆ ಮಾಡಿದ ಮೋದಿ ಸರ್ಕಾರ ಸ್ವಚ್ಚ ಭಾರತ, ಜನಧನ, ಬೆಲೆ ನಿಯಂತ್ರಣದಂತಹ ಕಾರ್ಯಕ್ರಮಗಳು ಸೇರಿ ಉತ್ತಮ ಯೋಜನೆಗಳನ್ನು ಜಾರಿಗೆ ತಂದರೂ ಕಾಂಗ್ರೆಸ್ ತನ್ನ ಹಳೇ ಚಾಳಿಯನ್ನು ಬಿಡದೇ ರಾಜಕಾರಣ ಮಾಡುತ್ತಿದೆ ಎಂದು ಅವರು ಹೇಳಿದರು.
ಧನಾತ್ಮಕ ರಾಜಕೀಯ ಮಾಡಿ: ತೇಜಸ್ವಿನಿ
ಕಾಂಗ್ರೆಸ್ ಧನಾತ್ಮಕ ರಾಜಕಾರಣ ಮಾಡುವುದನ್ನು ಇನ್ನಾದರೂ ಕಲಿಯಬೇಕು ಎಂದು ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಹೇಳಿದರು. ವಿಚಾರಧಾರೆಗಳ ಮೂಲಕ ಹೇಳಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದರು.
ಎಪಿಎಂಸಿ ಅಧ್ಯಕ್ಷ ಶ್ರೀರಾಮ ಪಾಟಾಜೆ ಬಿಜೆಪಿಗೆ:
ಸುಳ್ಯ ಎ.ಪಿ.ಎಂ.ಸಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಶ್ರೀರಾಮ ಪಾಟಾಜೆ ಭಾನುವಾರ ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಪಕ್ಷದ ಧ್ಯಜವನ್ನು ಹಸ್ತಾಂತರಿಸುವುದರ ಮೂಲಕ ಶ್ರೀರಾಮ ಪಾಟಾಜೆಯವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡರು. ಇತ್ತೀಚೆಗೆ ನಡೆದ ಎಪಿಎಂಸಿ ಅಧ್ಯಕ್ಷ ಚುನಾವಣೆಯಲ್ಲಿ ಶ್ರೀರಾಮ ಪಾಟಾಜೆ ಬಿಜೆಪಿ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ವೇದಿಕೆಯಿಂದಲೇ ತನ್ನ ಮೊಬೈಲ್ ಮೂಲಕ ಬಿಜೆಪಿ ಸದಸ್ಯತ್ವ ಪಡೆದ ಶ್ರೀರಾಮ ಪಾಟಾಜೆ ಮಾತನಾಡಿ ‘ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ಬೆಳ್ಳಾರೆಯನ್ನಾಗಿ ಮಾಡಲು ಪಣತೊಟ್ಟಿರುವುದಾಗಿ ಹೇಳಿದರು.
ಮರ್ಕಂಜದ ಕಾಂಗ್ರೆಸ್ ಮುಖಂಡ ಮಾಧವ ಗೌಡ ದೊಡ್ಡಿಹಿತ್ಲು, ಜೆಡಿಎಸ್ ಮುಖಂಡ ಮಹಾಲಿಂಗೇಶ್ವರ ಭಟ್, ಎ.ವಿ.ಭಟ್, ಆಶ್ರಫ್, ಕುಶಲ ಪಾಟಾಜೆ, ಐತ್ತಪ್ಪ ನಾಕ ಕುಂಡಡ್ಕ, ಕೆ.ಕೆ. ನಾಕ ಕೊಡಿಯಾಲ, ಪ್ರಕಾಶ್, ಚಂದ್ರಶೇಖರ, ಜತ್ತಪ್ಪ ಪೂಜಾರಿ, ಕೆ.ಎಸ್ ಪೂಜಾರಿ ಇದೇ ಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಮಾತನಾಡಿದರು. ವೇದಿಕೆಯಲ್ಲಿ ಬೆಳ್ಳಾರೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಲಿಗೋಧರ ಆಚಾರ್ಯ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ವಿನಯ್ ಮುಳುಗಾಡು, ಎ.ಪಿ.ಎಂ.ಸಿ ಸದಸ್ಯ ರಾಧಾಕೃಷ್ಣ ಬೊಳ್ಳೂರು, ಪಿ.ಜಿ.ಎಸ್.ಎನ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ವಂದಿಸಿದರು. ಮುರಳೀಕೃಷ್ಣ ಚಳ್ಳಂಗಾರು ನಿರೂಪಿಸಿದರು.