Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

5 ವರ್ಷಗಳಿಂದ ನನ್ನ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳಿಗೆ ನನ್ನ ಸಾಧನೆಯೇ ಉತ್ತರ – ನಳಿನ್

ನಳಿನ್ ಸಾಧನೆಯೇ ಕಾಂಗ್ರೆಸ್ಸಿಗರ ಪ್ರಶ್ನೆಗೆ ಉತ್ತರ: ತೇಜಸ್ವಿನಿ ಗೌಡ

ಮಂಗಳೂರು: ಸೆಕ್ಯೂಲರ್ ಮುಖವಾಡ ಹಾಕಿಕೊಂಡಿರುವ ಸಚಿವ ಯು.ಟಿ.ಖಾದರ್ ಅವರು ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಜಾಗವನ್ನು ತಮ್ಮ ತಾಯಿಯ ಹೆಸರಲ್ಲಿ ಪಡೆದುಕೊಳ್ಳಲು ಮುಂದಾಗಿದ್ದಾರೆ. ಈ ಮೂಲಕ ಜನರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರೆ ತೇಜಸ್ವಿನಿ ಗೌಡ ತಿಳಿಸಿದ್ದಾರೆ.

ಶನಿವಾರ ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ನಳಿನ್ ಕುಮಾರ್ ಕಟೀಲ್ ಅವರ ಸಾಧನೆ ಏನೆಂದು ಕೇಳುತ್ತಿದೆ. ನಳಿನ್ ಸಾಧನೆಗಳನ್ನು ಪತ್ರಿಕೆಗಳು ಬಿಂಬಿಸುತ್ತಿವೆ. ಉತ್ತಮ ಸಂಸದರಲ್ಲಿ ನಳಿನ್ ಅವರಿಗೆ 24ನೇ ಸ್ಥಾನ ದೊರಕಿದೆ. ಕಾಂಗ್ರೆಸ್‌ನ ಪ್ರಶ್ನೆಗಳಿಗೆ ಅವರು ಉತ್ತರಿಸುವ ಅಗತ್ಯವಿಲ್ಲ.  ಅವರ ಕಾರ್ಯಗಳೇ ಅವರಿಗೆ ಉತ್ತರ ನೀಡುತ್ತವೆ ಎಂದರು.

ಪೂಜನೀಯ ಸ್ಥಾನದಲ್ಲಿರುವ ಗೋವುಗಳನ್ನು ಹತ್ಯೆ ಮಾಡುವುದನ್ನು ತಡೆಗಟ್ಟದ ಸರ್ಕಾರ ಆ ಮೂಲಕ ಹಿಂದೂಗಳ ಭಾವನೆಯನ್ನು ಘಾಸಿಗೊಳಿಸಿದೆ ಎಂದರು.

ಯೋಧನಿಗೆ, ರೈತನಿಗೆ ಜನ್ಮ ನೀಡುವವಳು ತಾಯಿ, ತಾಯಂದಿರ ರಕ್ಷಣೆಗಾಗಿ ಸಧೃಢ ನಾಯಕನ ಅಗತ್ಯವಿದೆ. ಅದಕ್ಕಾಗಿ ಮೋದಿಯನ್ನು ಬೆಂಬಲಿಸಬೇಕಾಗಿದೆ ಎಂದರು.

ಚೀನಾ ಪದೇ ಪದೇ ನಮ್ಮ ದೇಶದ ಮೇಲೆ ಅತಿಕ್ರಮಣ ಮಾಡುತ್ತಿದೆ, ಇನ್ರ್ನೆಂದೆಡೆ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲು ಸಜ್ಜಾಗಿದೆ. ಇಷ್ಟಿದ್ದರು ಭಾರತ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಬ್ರಹ್ಮಪುತ್ರ ನದಿಯ ಹರಿವು ತೀವ್ರವಾದರೆ ಭಾರತಕ್ಕೆ ಅಪಾಯ ಎಂಬ ಸತ್ಯ ಸರ್ಕಾರಕ್ಕೆ ತಿಳಿದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿಯವರು ಮೋದಿ ಬಗ್ಗೆ ವೈಯಕ್ತಿಕ ಟೀಕೆಗಳನ್ನು ಮಾಡುವುದನ್ನು ನಿಲ್ಲಿಸಿ, ವಿಚಾರದ ಆಧಾರದಲ್ಲಿ ಚುನಾವಣೆ ಎದುರಿಸಲಿ ಎಂದು ಅವರು ಕಿವಿ ಮಾತು ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ಜನರಿಂದ ಆಯ್ಕೆಯಾದ ಮೋದಿಗೆ ವೀಸಾ ನೀಡಬೇಡಿ ಎಂದು ಕಾಂಗ್ರೆಸ್ಸಿಗರು ಅಮೆರಿಕಾಗೆ ಹೇಳುತ್ತಿದ್ದಾರೆ. ಅವರು ಮೊದಲು ಸಾಂವಿಧಾನಿಕ ಸ್ಥಾನಕ್ಕೆ ಗೌರವ ಕೊಡುವುದನ್ನು ಕಲಿಯಲಿ ಎಂದಿದ್ದಾರೆ.

ಮೋದಿಯನ್ನು ಉಗ್ರ ಯಾಸೀನ್ ಸಹಚರರು ಸೇರಿದಂತೆ ಹಲವರು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕೇಂದ್ರ ತುಷ್ಟೀಕರಣದ ರಾಜಕೀಯದಲ್ಲಿ ನಿರತವಾಗಿದೆ ಎಂದರು. ಅಲ್ಲದೇ ಬೆಲೆಯೇರಿಕೆ, ಭ್ರಷ್ಟಾಚಾರ, ರೈತರಿಗೆ ವಂಚನೆ ಮುಂತಾದ ಪಾಪ ಕೃತ್ಯಗಳನ್ನು ಮಾಡುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್  ‘ಕಳೆದ ಬಾರಿ ಚುನಾವಣೆ ಎದುರಿಸುವಾಗ ನಾನು ಕೇವಲ ಕಾರ್ಯಕರ್ತರಿಗೆ ಮಾತ್ರ ಪರಿಚಯವಿದ್ದೆ. ಆದರೂ ನನ್ನನ್ನು ಬಹುಮತದಿಂದ ಆಯ್ಕೆ ಮಾಡಿ ಗೆಲ್ಲಿಸಿದರು. ಆದರೀಗ ಇಡೀ ಕ್ಷೇತ್ರದ ಜನರಿಗೆ ನಾನು ಏನೆಂದು ತಿಳಿದಿದೆ. ನಾನು ಮಾತುಗಳಿಂದ ನನ್ನ ಸಾಧನೆಯನ್ನು ಬಿಂಬಿಸುವುದಿಲ್ಲ, ಕೇಂದ್ರದ ಸಂಸತ್ತು ನನ್ನನ್ನು 24ನೇಯ ಸ್ಥಾನದಲ್ಲಿ ನಿಲ್ಲಿಸಿರುವುದು ನನ್ನ ಕೃತಿಗೆ ಸಾಕ್ಷಿ’ ಎಂದರು.

’5 ವರ್ಷಗಳಿಂದ ನನ್ನ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳಿಗೆ ನನ್ನ ಸಾಧನೆಯೇ ಉತ್ತರ. ಅನುಭವವಿಲ್ಲದ ನಾನು 24ನೇಯ ಸ್ಥಾನದಲ್ಲಿದ್ದೇನೆ, ಆದರೆ ಅನುಭವ ಇರುವ ರಾಹುಲ್ ಗಾಂಧಿ 250ನೇ ಸ್ಥಾನದಲ್ಲಿದ್ದಾರೆ. ಇದಕ್ಕೆ ಕಾರಣ ಏನು’ ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ಹಾಗೂ ನಾನು ಇದುವರೆಗೆ ಕಳಂಕ ರಹಿತ ಕಾರ್ಯ ಮಾಡಿದ್ದೇವೆ. ಮಾತು ಬಾರದ ನಾನು ಸಂಸತ್ತಿನಲ್ಲಿ 283 ಪ್ರಶ್ನೆಗಳನ್ನು ಕೇಳಿದ್ದೇನೆ, 20 ಚರ್ಚೆಗಳಲ್ಲಿ ಭಾಗವಹಿಸಿದ್ದೇನೆ. ಬಹುತೇಕ ಎಲ್ಲಾ ಅನುದಾನಗಳಲ್ಲಿಯೂ ಸಂಪೂರ್ಣ ಭಾಗವಹಿಸಿದ್ದೇನೆ. ಇದು ನನ್ನ ಕಾರ್ಯಕ್ಕೆ ಹಿಡಿದ ಕೈಗನ್ನಡಿ ಎಂದರು.

ಈ ಬಾರಿಯೂ ನನ್ನನ್ನು ಆರಿಸಿ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಿ. ದೇಶದಾದ್ಯಂತ ಮೋದಿ ಅಲೆಯಿದ್ದು ಈ ಬಾರಿ ಅವರು ಪ್ರಧಾನಿಯಾಗುವುದು ಖಚಿತ’ ಎಂದರು.

ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪ್ರಶಾಂತ್ ಪೈ, ಭಾಸ್ಕರ ಸಾಲಿಯಾನ್, ಶಶಿಕಲಾ ಶೆಟ್ಟಿ, ರಾಜೇಶ್ ಕೋಟ್ಯಾನ್, ಪ್ರಸನ್ನ  ಕುಮಾರ್, ನರೇಶ್ ಕುಮಾರ್  ಉಪಸ್ಥಿತರಿದ್ದರು

Highslide for Wordpress Plugin