ನವದೆಹಲಿ : ಕಳೆದ ಮೂರು ವರ್ಷಗಳಲ್ಲಿ, ವಿವಿಧ ರಾಜ್ಯಗಳ ಹಿಂದುಳಿದ ವರ್ಗಗಳ ಪಟ್ಟಿಯ ಉಪಜಾತಿಗಳಲ್ಲಿ ಸೇರ್ಪಡೆ ಮಾಡುವಂತೆ ಕೋರಿ 290 ಕ್ಕೂ ಹೆಚ್ಚು ಜಾತಿಯವರು ಮನವಿ ಸಲ್ಲಿಸಿರುತ್ತಾರೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ತಾವರ್ಚಂದ್ ಗೆಹ್ಲೋಟ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, “ಕೇಂದ್ರ ಸರ್ಕಾರದ ಒಬಿಸಿ ಪಟ್ಟಿ ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಕರ್ನಾಟಕದಿಂದ ಒಟ್ಟು 22 ಮನವಿಗಳು ಸಲ್ಲಿಕೆಯಾಗಿವೆ” ಎಂದು ಅವರು ವಿವರಿಸಿದ್ದಾರೆ.
ಈಗಾಗಲೇ 103 ಜಾತಿ ಹಾಗೂ ಉಪಜಾತಿಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಅಂತೆಯೇ ಕೇಂದ್ರ ಪಟ್ಟಿಯಲ್ಲಿ ಸೇರಿಸಲು ಎನ್ಸಿಬಿಸಿ ಕೆಲ ಹೆಸರುಗಳನ್ನು ತಿರಸ್ಕರಿಸಿದೆ ಎಂದು ಹೇಳಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಿಂದ ಶಿಫಾರಸ್ಸು ಮಾಡಿರುವ 11 ಹೆಸರುಗಳನ್ನು ಈಗಾಗಲೇ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಾಗಿದೆ. 52 ಹೆಸರುಗಳನ್ನು ತಿರಸ್ಕರಿಸಲು ಆಯೋಗ ಶಿಫಾರಸ್ಸು ಮಾಡಿದ್ದರೂ, ಕೇಂದ್ರ ಸರಕಾರ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎನ್ಸಿಬಿಸಿ ಕಾಯ್ದೆ-1993 ರ ಅನ್ವಯ, ಸಲ್ಲಿಕೆಯಾದ ಮನವಿಗಳನ್ನು ಆಯೋಗ ಪರಿಶೀಲಿಸಲಿದೆ ಅಥವಾ ಹೀಗೆ ಪಟ್ಟಿಯಲ್ಲಿ ಸೇರಿರುವ ಅಥವಾ ಬಿಟ್ಟಿರುವ ಜಾತಿಗಳ ಪ್ರಕರಣಗಳನ್ನು ವಿಚಾರಣೆಗೆ ಗುರಿಪಡಿಸುತ್ತದೆ. ಆ ಬಳಿಕ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರಕಾರ ಸಲಹೆ ಮಾಡುತ್ತದೆ ಎಂದು ವಿವರ ನೀಡಿದ್ದಾರೆ.