ನವದೆಹಲಿ : ಕಾರ್ಮಿಕ ವಿಮಾ ನಿಗಮ (ಇಎಸ್ಐ) ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯ ಕೊರತೆಯ ಕುರಿತು ಸಂಸದ ನಳಿನ್ ಕುಮಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಲೋಕಸಭೆಯಲ್ಲಿ ಉತ್ತರಿಸಿದ ಮಾನ್ಯ ಕೇಂದ್ರ ಕಾರ್ಮಿಕ ಸಚಿವರು “ಇಎಸ್ಐ ಆಸ್ಪತ್ರೆಗಳಲ್ಲಿ ಸಾಮಾನ್ಯ ವೈದ್ಯರು, ವಿಶೇಷ ತಜ್ಞರು, ನರ್ಸಿಂಗ್ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯ ಕೊರತೆ ಇದೆ” ಎಂದು ಸ್ಪಷ್ಟಪಡಿಸಿದ್ದಾರೆ.
ವಿಶೇಷ ಪರಿಣತಿ ಗಳಿಸಿದ ವೈದ್ಯರ ಕೊರತೆಗೆ ಮುಖ್ಯ ಕಾರಣ ದೇಶಾದ್ಯಂತ ಇಂಥ ವೈದ್ಯರ ಲಭ್ಯತೆ ಕಡಿಮೆ ಇರುವುದು. ಇಎಸ್ಐ ಕಾರ್ಪೊರೇಷನ್ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಖಾಸಗಿಯಾಗಿ ಪ್ರಾಕ್ಟೀಸ್ ಮಾಡಬಾರದು ಎಂಬ ನಿಯಮಾವಳಿ ಹಿನ್ನೆಲೆಯಲ್ಲಿ ಹಲವರು ಈ ಹುದ್ದೆಗಳಿಗೆ ಅರ್ಜಿಯನ್ನೇ ಸಲ್ಲಿಸುವುದಿಲ್ಲ. ಉದ್ಯೋಗಕ್ಕೆ ಸೇರಿದ ಯುವಕರು ಕೂಡಾ ಒಳ್ಳೆಯ ಉದ್ಯೋಗ ದೊರಕಿದ ತಕ್ಷಣ ಬೇರೆ ಕಡೆಗೆ ವಲಸೆ ಹೋಗುವುದು ಸಮಸ್ಯೆಗೆ ಮೂಲ ಕಾರಣ ಎಂದು ಅವರು ವಿಶ್ಲೇಷಿಸಿದ್ದಾರೆ.
ಈ ಕೊರತೆ ನೀಗಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಮಂಜೂರಾದ ಹುದ್ದೆಗಳ ಪೈಕಿ ಶೇಕಡ 40 ರಷ್ಟು ಮಂದಿಯನ್ನು ವೈದ್ಯಕೀಯ ಅಧೀಕ್ಷಕರು ಸ್ಥಳೀಯ ಮಟ್ಟದಲ್ಲೇ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. 100 ಹಾಸಿಗೆಗಳಿರುವ ಆಸ್ಪತ್ರೆಗಳಿಗೆ 100 ಹಿರಿಯ ಸನಿವಾಸಿ ವೈದ್ಯರ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಇವುಗಳನ್ನು ಕೂಡಾ ವೈದ್ಯರು ಸ್ಥಳೀಯ ಮಟ್ಟದಲ್ಲೇ ನೇಮಕ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಹೊಸದಾಗಿ ವೈದ್ಯರು ನೇಮಕಗೊಳ್ಳುವವರೆಗೆ ಗುತ್ತಿಗೆ ಆಧಾರದಲ್ಲಿ ಸೂಪರ್ ಸ್ಪೆಷಲಿಸ್ಟ್ ಹಾಗೂ ಸ್ಪೆಷಲಿಸ್ಟ್ ವೈದ್ಯರನ್ನು ನೇಮಕ ಮಾಡಿಕೊಳ್ಳಲೂ ಅವಕಾಶ ನೀಡಲಾಗಿದೆ ಎಂದು ವಿವರಿಸಿದ್ದಾರೆ.
ಕೆಲ ನಿರ್ದಿಷ್ಟ ಪ್ರಕರಣಗಳಲ್ಲಿ ನಿವೃತ್ತ ದಾದಿಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಅಧೀಕ್ಷಕರಗೆ ಅವಕಾಶ ನೀಡಲಾಗಿದೆ. ನರ್ಸಿಂಗ್ ಹಾಗೂ ಅರೆವೈದ್ಯಕೀಯ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ ಎಂದು ಹೇಳಿದ್ದಾರೆ. ಅಂತೆಯೇ 450 ಮಂದಿ ವೈದ್ಯರು ಹಾಗೂ 304 ಮಂದಿ ಸ್ಪೆಷಲಿಸ್ಟ್ಗಳನ್ನು ನೇಮಕ ಮಾಡಿಕೊಳ್ಳಲು ಪ್ರಕ್ರಿಯೆ ಆರಂಭಿಸಲಾಗಿದೆ. 91 ವೈದ್ಯರಿಗೆ ಹಾಗೂ 41 ಸ್ಪೆಷಲಿಸ್ಟ್ ವೈದ್ಯರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
2488 ಮಂದಿ ನರ್ಸಿಂಗ್ ಹಾಗೂ ಅರೆವೈದ್ಯಕೀಯ ಸಿಬ್ಬಂದಿಯ ನೇಮಕಾತಿಗೆ ಪರೀಕ್ಷೆಯೂ ಮುಗಿದಿದೆ. ವೈದ್ಯಕೀಯ ಸೇವೆ ಉತ್ತಮಪಡಿಸುವ ಸಲುವಾಗಿ ಕೆಲ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಇಎಸ್ಐ ನಿಗಮದ 167 ನೇ ಸಭೆಯಲ್ಲಿ ಇಎಸ್ಐ ಆಸ್ಪತ್ರೆಗಳ ಹಾಸಿಗೆ ಸಂಖ್ಯೆಯನ್ನು ಶೇಕಡ 50 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಅಂತೆಯೇ ಇಎಸ್ಐ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳ ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲೆಕ್ಟ್ರಾನಿಕ್ ಆರೋಗ್ಯ ದಾಖಲೆ, ಚಿಕಿತ್ಸಾಲಯಗಳನ್ನು 6 ಹಾಸಿಗೆಗಳ ಬದಲಾಗಿ 30 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ತುರ್ತು ಸಂದರ್ಭದಲ್ಲಿ ವೈದ್ಯರ ನೆರವು ಪಡೆಯುವ ನಿಟ್ಟಿನಲ್ಲಿ ವೈದ್ಯಕೀಯ ಸಹಾಯವಾಣಿ ಆರಂಭಿಸಲಾಗಿದೆ. ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗಾಗಿ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಹೊಸ ಒಪಿಡಿ ಸೇವೆ ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ತಪಾಸಣೆ ಮತ್ತು ಚಿಕಿತ್ಸಾ ವ್ಯವಸ್ಥೆ, ಹೃದ್ರೋಗ ಚಿಕಿತ್ಸಾ ಸೌಲಭ್ಯ, ಎಲ್ಲ ವೈದ್ಯಕೀಯ ಪರೀಕ್ಷೆಗಳಿಗೆ ಅವಕಾಶ, ಡಯಾಲಿಸಿಸ್ ಸೇವೆ, ಸರದಿ ನಿರ್ವಹಣಾ ವ್ಯವಸ್ಥೆ, ಗರ್ಭಿಣಿಯರ ಮೇಲೆ ವಿಶೇಷ ನಿಗಾ, ಯೋಗಾಭ್ಯಾಸಕ್ಕೆ ಅವಕಾಶ ಹಾಗೂ ಆಯುಷ್ ಸೌಲಭ್ಯ ವಿಸ್ತರಿಸಿರುವುದು ಇತರ ಅಭಿವೃದ್ಧಿ ಕಾರ್ಯಗಳು ಎಂದು ಹೇಳಿದ್ದಾರೆ.