ಮಂಗಳೂರು: ಬಿ.ಸಿ. ರೋಡ್ ಸೇರಿದಂತೆ ಜಿಲ್ಲೆಯ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿಗಳಿಗೆ ತೊಂದರೆಯಾಗುವ ಕಟ್ಟಡಗಳನ್ನು ತೆರವುಗೊಳಿಸುವುದಕ್ಕೆ ಮೀನಾಮೇಷ ಎಣಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕೇಂದ್ರ ಭೂಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ವರದಿ ನೀಡುವುದಾಗಿ ಸಂಸದ ನಳಿನ್ಕುಮಾರ್ ಕಟೀಲು ಎಚ್ಚರಿಸಿದ್ದಾರೆ.
ಅವರು ಬುಧವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನ ಕುರಿತ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿದ್ದರು.
ಹೆದ್ದಾರಿ ಇಕ್ಕೆಲಗಳ ಕಟ್ಟಡದ ತೆರವಿಗೆ ಸರಕಾರದಿಂದ ಹಣ ಸಂದಾಯ ಮಾಡಿ ವರ್ಷಗಳೇ ಕಳೆದಿವೆ. ಪ್ರಾಧಿಕಾರದ ಯೋಜನಾ ನಿರ್ದೇಶಕರು ಪ್ರತಿ ಬಾರಿ ಸಭೆಗೆ ಗೈರಾಗುತ್ತಿದ್ದಾರೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಂಸದರು, ಸಭೆಗೆ ಗೈರಾದ ಯೋಜನಾ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡುವಂತೆ ಜಿ.ಪಂ. ಸಿಇಒ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಡಿ. 26ರಂದು ತೆರವು
ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ಮಾತನಾಡಿ, ಕಳೆದ ಕೆಲವು ದಿನಗಳ ಹಿಂದೆ ತಾನು ಬಂಟ್ವಾಳದಲ್ಲಿ ಸಭೆ ನಡೆಸಿ ಬಿ.ಸಿ. ರೋಡ್ನಲ್ಲಿ ಕಟ್ಟಡಗಳನ್ನು ತೆರವುಗೊಳಿಸಲು ಸೂಚಿಸಿದಾಗ ಒಂದು ವಾರದೊಳಗೆ ತೆರವುಗೊಳಿಸುವುದಾಗಿ ತಿಳಿಸಿದ್ದರು. ಆದರೆ ಈ ತನಕ ತೆರವುಗೊಳಿಸಿಲ್ಲ. ತಮಗೆ ರಕ್ಷಣೆ ನೀಡಿದರೆ ತೆರವುಗೊಳಿಸುವುದಾಗಿ ಅಧಿಕಾರಿ ತಿಳಿಸಿದಾಗ, ಡಿ. 26ಧಿರಂದು ಸಹಾಯಕ ಕಮಿಷನರ್, ಪುರಸಭಾ ಅಧಿಕಾರಿಗಳು ಹಾಗೂ ಪೊಲೀಸರನ್ನು ಕಳುಹಿಸುತ್ತೇನೆ, ತೆರವುಗೊಳಿಸಿ ಎಂದು ಸೂಚಿಸಿದರು.
ಶೇ. 50 ಮಾತ್ರ ಎಟಿಎಂ ಕಾರ್ಯ
ನೋಟು ರದ್ದತಿಯಿಂದ ಜಿಲ್ಲೆಯಲ್ಲಿ ಇನ್ನೂ ಆರ್ಥಿಕ ವ್ಯವಹಾರ ಸಹಜ ಸ್ಥಿತಿಗೆ ಬರದಿರುವ ಕುರಿತು ಲೀಡ್ ಬ್ಯಾಂಕ್ ಮ್ಯಾನೇಜರ್ ಅವರಲ್ಲಿ ಸಂಸದರು ಮಾಹಿತಿ ಕೇಳಿದರು. ಜಿಲ್ಲೆಯಲ್ಲಿ ಎಟಿಎಂ ವ್ಯವಹಾರ ಕೇವಲ ಶೇ. 50 ಮಾತ್ರ ನಡೆಯುತ್ತಿದೆ. ರೂ. 500 ನೋಟುಗಳ ಪೂರೈಕೆ ಇಲ್ಲದಿರುವುದರಿಂದ 2,000 ರೂ.ಗಳ ನೋಟುಗಳು ಮಾತ್ರ ಬರುತ್ತಿವೆ. ಕರೆನ್ಸಿ ಚೆಸ್ಟ್ನಿಂದ ಎಲ್ಲ ಬ್ಯಾಂಕ್ಗಳಿಗೆ ಹಣ ಪೂರೈಕೆಯಾಗುತ್ತಿಲ್ಲ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ತಿಳಿಸಿದರು.
ನಗದು ರಹಿತ ವ್ಯವಹಾರದ ಕುರಿತು ಜಿಲ್ಲೆಯ ಪ್ರತಿ ಗ್ರಾಮಗಳಿಗೂ ಮಾಹಿತಿ ತಲುಪಬೇಕು. ತರಬೇತಿ ನೀಡಲು ಈಗಾಗಲೇ ಹಲವು ಶಿಕ್ಷಣ ಸಂಸ್ಥೆಗಳು ಮುಂದೆ ಬಂದಿದ್ದು, ಆರಂಭದಲ್ಲಿ 200 ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಮುಂದೆ ಅವರು ಪ್ರತಿ ಗ್ರಾಮಗಳಿಗೆ ತೆರಳಿ ತರಬೇತಿ ನೀಡುತ್ತಾರೆ. ಈ ಕಾರ್ಯ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಬೇಕು ಎಂದು ಸಂಸದರು ಸೂಚಿಸಿದರು.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸಿಇಒ ಡಾ| ಎಂ.ಆರ್. ರವಿ, ವಿವಿಧ ಇಲಾಖೆಗಳ ಅಧಿಕಾರಿಗಳು, ತಾ.ಪಂ, ನಗರಸಭೆಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ವಾರದೊಳಗೆ ನಗದು ರಹಿತ ವ್ಯವಹಾರ
ಆದರ್ಶ ಗ್ರಾಮ ಬಳ್ಪದಲ್ಲಿ ನಗದುರಹಿತ ವ್ಯವಹಾರಕ್ಕೆ ಪೂರಕವಾಗುವಂತೆ ಈಗಾಗಲೇ ಗ್ರಾಮಸ್ಥರಿಗೆ ತರಬೇತಿ ನೀಡಲಾಗಿದೆ. ಮುಂದಿನ ಒಂದು ವಾರದೊಳಗೆ ಬಳ್ಪದಲ್ಲಿ ನಗದು ರಹಿತ ವ್ಯವಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸಂಸದರ ಪ್ರಶ್ನೆಗೆ ಉತ್ತರಿಸಿದರು.
ಎಲ್ಲ ಸರಕಾರಿ ಕಚೇರಿಗಳು ಒಂದೇ ಸೂರಿನಡಿ ಬರುವಂತೆ ನಿರ್ಮಾಣವಾಗುತ್ತಿರುವ ಬಳ್ಪ ಗ್ರಾ.ಪಂ.ನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಎಣ್ಣೆಮಜಲು ಶಾಲೆಯ ಕಾಮಗಾರಿ ಹಾಗೂ ಮೊಬೈಲ್ ಟವರ್ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ವಿವರಿಸಿದರು. ಗ್ರಾ.ಪಂ. ಕಟ್ಟಡ ಹಾಗೂ ಬಸ್ಸು ನಿಲ್ದಾಣದ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸಂಸದರು ಸೂಚನೆ ನೀಡಿದರು.
Media Report : http://www.udayavani.com