ಪುತ್ತೂರು, ಜೂ. 17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯು ಸಂಪೂರ್ಣ ಹದಗೆಟ್ಟು ಹೋಗಿದೆ, ಮಾತ್ರವಲ್ಲದೆ ಪೋಲಿಸ್ ಇಲಾಖೆಯಿಂದ ಹಿಂದೂ ಭಾವನೆಗಳಿಗೆ ದಕ್ಕೆಯುಂಟಾಗುತ್ತದೆ, ಅಮಾನವೀಯವಾಗಿ ವರ್ತಿಸುತ್ತಿದೆ , ಎಂದು ಸಂಸದ ನಳೀನ್ ಕುಮಾರ್ ಕಟೀಲು ಆರೋಪಿಸಿದ್ದಾರೆ.
ಪುತ್ತೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪೊಲೀಸರು ದಕ್ಷತೆ, ನಿಷ್ಠೆ, ಪ್ರಾಮಾಣಿಕವಾಗಿ ಕೆಲಸ ಮಾಡಲು ವಿಫಲರಾಗಿದ್ದಾರೆ, ಮತ್ತು ಪೋಲಿಸ್ ಇಲಾಖೆಯು ಆಡಳಿತದ ರಾಜಕಾರಣಿಗಳ ಕೈಗೊಂಬೆಯಾಗಿದೆ, ಮತ್ತು ಪೊಲೀಸರು ಒತ್ತಡದ ಮೇಲೆ ಕೆಲಸ ಮಾಡುತ್ತಿದ್ದು, ಅಮಾಯಕರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಪೋಲಿಸ್ ಇಲಾಖೆ ಕೈಕಟ್ಟಿ ಕುಳಿತಿದೆ:
ಇತ್ತೀಚಿನ ದಿನಗಳಲ್ಲಿ ಹಲವು ಅಹಿತಕರ ಘಟನೆಗಳು ಜಿಲ್ಲೆಯಲ್ಲಿ ನಡೆದಿದ್ದು ಇದರಲ್ಲಿ ಸರಕಾರದ ನೇರ ಹಸ್ತಕ್ಷೇಪ ಎದ್ದು ಕಾಣುತ್ತಿದೆ, ಕರೋಪಾಡಿ, ಕನ್ಯಾನ, ಉಳ್ಳಾಲದಲ್ಲಿ ನಡೆದ ಘಟನೆಗಳು , ಮೂಡಬಿದ್ರೆಯಲ್ಲಿ ಹಟ್ಟಿಯಿಂದ ಗೋ ಕಳ್ಳತನ ಮುಂತಾದ ಹಲವು ಪ್ರಕರಣಗಳು ನಡೆದಿದ್ದರೂ ಪೋಲಿಸ್ ಇಲಾಖೆ ಕೈ ಕಟ್ಟಿ ಕುಳಿತಿದೆ ಎಂದು ಅವರು ಹೇಳಿದರು.
ಪಾಕಿಸ್ತಾನದಲ್ಲೂ ನಡೆಯದ ರೀತಿ ಬೆದರಿಕೆ:
ರಾಜ್ಯದ ಗೃಹ ಇಲಾಖೆಯು ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಹೇಳಿದ ಸಂಸದ ಕಟೀಲು, ಪಂಜಿಗುಡ್ಡೆ ಡಬಲ್ ಮರ್ಡರ್, ಉಪ್ಪಿನಂಗಡಿ ಪುಷ್ಪಲತಾ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದ್ದು, ನೈಜ ಆರೋಪಿಗಳನ್ನು ಬಂಧಿಸಲು ತಂತ್ರವನ್ನು ಹೂಡದೆ ಅಮಾಯಕ ಹಿಂದೂಗಳನ್ನು ಶಿಕ್ಷಿಸಲಾಗುತ್ತಿದೆ. ಕನ್ಯಾನದಲ್ಲಿ ಮಹಿಳೆಯರೋರ್ವರ ಮೇಲೆ ಅತ್ಯಾಚಾರ ಯತ್ನ ನಡೆಸಿ ಬಳಿಕ ಪಾಕಿಸ್ತಾನದಲ್ಲೂ ನಡೆಯದ ರೀತಿ ಬೆದರಿಕೆ ಹಾಕಿರುವುದು ಜನರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ ಎಂದು ಆರೋಪಿಸಿದರು.
ಕಲ್ಲಡ್ಕದಲ್ಲಿ ನಡೆದ ಚೂರಿ ಇರಿತ ಪ್ರಕರಣವು ಅನ್ಯಾಯಕ್ಕೊಳಗಾದವರಿಗೆ ಧೈರ್ಯ ತುಂಬಿದ ಒಂದು ವರ್ಗದವರ ಮೇಲೆ ಗೂಂಡಾ ಕಾಯಿದೆಯಡಿ ಕೇಸು ದಾಖಲಿಸಲಾಗಿದೆ. ಹಿಂಜಾವೇ ಮುಖಂಡನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ದೇವಸ್ಥಾನದಲ್ಲಿ ಪೂಜೆಯಲ್ಲಿ ಭಾಗವಹಿಸದವರನ್ನು ಪಶ್ಚಿಮ ಬಂಗಾಳದ ಕಾರ್ಮಿಕರನ್ನು ಬಂಧಿಸಿರುವುದು “ಜಂಗಳ್ ರಾಜ್” ಸ್ಥಿತಿಯನ್ನು ನೆನಪಿಸುವಂತೆ ಮಾಡಿದೆ. ಇದೆಲ್ಲವೂ ಕೇರಳ ಐಎಸ್ಐ ಪ್ರಚೋದಿತ ದಾಳಿಗಳು ಎಂದು ಆರೋಪಿಸಿದರು.
ರಾಜ್ಯಾಧ್ಯಕ್ಷರು ಪಾಲ್ಗೊಳ್ಳುವಿಕೆ:
ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಿ, ಜೂ.24ರಂದು ಬಂಟ್ವಾಳದಲ್ಲಿ ಹಿಂದೂ ಸಂಘಟನೆಗಳು ಆಯೋಜಿಸಿರುವ ಪ್ರತಿಭಟನಾ ಸಭೆಗೆ ಬಿಜೆಪಿಯು ಸಂಪೂರ್ಣ ಬೆಂಬಲವನ್ನು ನೀಡಲಿದೆ, ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಮುಂದೆ ನಡೆಯಲಿರುವ ರಾಜ್ಯ ಚುನಾವಣೆಯಲ್ಲಿ ಬಿಜೆಪಿಯು 150ಕ್ಕೂ ಅಧಿಕ ಸ್ಥಾನ ಪಡೆಯುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಅಭ್ಯರ್ಥಿಗಳ ಆಯ್ಕೆಯು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಿದಂತೆ. ಸೂಕ್ತ ಅಭ್ಯರ್ಥಿಗಳಿಗೆ ಪಕ್ಷ ಅವಕಾಶ ನೀಡಲಿದೆ, ಪಕ್ಷದಲ್ಲಿ ಸಂಘಟನಾತ್ಮಕ ಹಿಡಿತ ಹೊಂದಿರುವ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸಮರ್ಪಕ ಅಭ್ಯರ್ಥಿಗಳ ಆಯ್ಕೆ ಮಾಡಲಿದ್ದಾರೆ ಮತ್ತು ಅವರ ಆಯ್ಕೆಯೇ ಅಂತಿಮವಾಗಿರುತ್ತದೆ ಎಂದು ಹೇಳಿದರು.
ಮಹಿಳಾ ಮಿಸಲಾತಿ ಹೆಚ್ಚಳದ ಕುರಿತು ಅಧ್ಯಯನ :
ರಾಜ್ಯ ಸರಕಾರವು ಜಾತಿ ಸಮೀಕ್ಷೆಯನ್ನು ನಡೆಸಿದ್ದು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆ. ಸ್ವಾತಂತ್ರ್ಯ ಬಳಿಕವು ವಿಘಟನೆಯ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷವು ಜನಸಾಮಾನ್ಯರ ಹಾದಿತಪ್ಪಿಸುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಆರೋಪಿಸಿದರು.
ಮಹಿಳಾ ಮೀಸಲಾತಿ ಹೆಚ್ಚಳದ ಕುರಿತು ಕೇಂದ್ರ ಸರಕಾರವು ಅಧ್ಯಯನ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಿದೆ ಎಂದರು.
ಈ ಸಂಧರ್ಭದಲ್ಲಿ ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪುಯಿಲ ಕೇಶವ ಗೌಡ ಉಪಸ್ಥಿತರಿದ್ದರು.