ಮಂಗಳೂರು : ದುಷ್ಕರ್ಮಿಗಳಿಂದ ಹತ್ಯೆಗೀಡಾದ ಶರತ್ ಮಡಿವಾಳ ಅವರ ಕುಟುಂಬಕ್ಕೆ ಸಾಂತ್ವನ ಹೇಳದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಜಿಲ್ಲೆಯಲ್ಲಿ ಇನ್ನಷ್ಟು ಅಶಾಂತಿ ಹಬ್ಬುವ ಹೇಳಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳು ರಮಾನಾಥ ರೈ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿದರೆ ಮಾತ್ರ ದ.ಕ.ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಸಂಸದ ನಳಿನ್ಕುಮಾರ್ ಕಟೀಲ್ ತಿಳಿಸಿದ್ದಾರೆ.
ಶರತ್ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳದ ಉಸ್ತುವಾರಿ ಸಚಿವರ ಮನೋಸ್ಥಿತಿ ಬಗ್ಗೆ ಜಿಲ್ಲೆಯ ಜನರಿಗೆ ಆಘಾತವಾಗಿದೆ. ಇಂತಹ ನಿಕೃಷ್ಟ ನಡವಳಿಕೆ ಖಂಡನೀಯ. ಸಚಿವರಾಗಿ ಎಲ್ಲ ವರ್ಗದ ಜನತೆಯನ್ನು ಸಮಾನವಾಗಿ ಕಾಣುವುದು ಧರ್ಮ. ಅಲ್ಪಸಂಖಾತರ ರಕ್ಷಣೆ ಎಂದು ಸದಾ ಬೊಬ್ಬೆ ಹೊಡೆಯುವ ರಮಾನಾಥ ರೈ ಅವರಿಗೆ ಓರ್ವ ಅಮಾಯಕ ಹಿಂದೂ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳುವ ಮಾನವೀಯತೆ ಇಲ್ಲದಿರುವುದು ವಿಷಾದನೀಯ ಎಂದು ಅವರು ಹೇಳಿದ್ದಾರೆ.
ಶರತ್ ಹಂತಕರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಬದಲು ಶಾಂತಿಯುತವಾಗಿ ಶರತ್ ಅಂತಿಮ ಯಾತ್ರೆ ನಡೆಸಿದ ಹಿಂದೂ ಯುವಕರನ್ನು ಬಂಧಿಸಲು ಉಸ್ತುವಾರಿ ಸಚಿವರೇ ಷಡ್ಯಂತ್ರ ನಡೆಸಿದ್ದಾರೆ. ಕಾನೂನು ಸುವ್ಯವಸ್ಥೆ ಸರಿ ಪಡಿಸುವ ಬದಲು ರಾಜಕೀಯ ಸವಾಲು ಒಡ್ಡುವ ಹೇಳಿಕೆ ನೀಡುತ್ತಿದ್ದಾರೆ. ಜಿಲ್ಲೆಯ ನಾಯಕರಾದ ಡಿ.ವಿ.ಸದಾನಂದ ಗೌಡ ಮತ್ತು ಶೋಭಾ ಕರಂದ್ಲಾಜೆ ಅವರು ಬೇರೆ ಜಿಲ್ಲೆಗಳಲ್ಲಿ ಸ್ಪರ್ಧಿಸಿಯೂ ಸಂಸತ್ಗೆ, ವಿಧಾನಸಭೆಗೆ ಚುನಾಯಿತರಾಗಿದ್ದಾರೆ. ಇದನ್ನು ರಮಾನಾಥ ರೈ ಅವರು ಅರಿತು ಮಾತನಾಡಲಿ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.