ಮಂಗಳೂರು : ಮಂಗಳೂರಿನಲ್ಲಿ ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (National Institute of Electronics and Information Technology-NIELIT) ಸ್ಥಾಪನೆಗೆ ಹಸಿರು ನಿಶಾನೆ ತೋರಿರುವ ಕೇಂದ್ರ ಸಚಿವ ಪಿ.ಪಿ. ಚೌಧರಿಯವರಿಗೆ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಕೃತಜ್ಞತೆ ಸಲ್ಲಿಸಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಎರಡನೇ ಸ್ತರದ ನಗರಗಳಲ್ಲಿ ಯುವ ಮನಸ್ಸುಗಳಿಗೆ ಉತ್ತೇಜನ ನೀಡುವ ಸಲುವಾಗಿ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಹಬ್ ಎನಿಸಿದ ಮಂಗಳೂರು ನಗರದಲ್ಲಿ ರಾಷ್ಟ್ರೀಯ ಮಹತ್ವದ ಈ ಸಂಸ್ಥೆಯನ್ನು ಸ್ಥಾಪಿಸಬೇಕು ಎಂದು ನಳಿನ್ ಕುಮಾರ್ ಕಟೀಲ್ ಈ ಹಿಂದೆ ಸಚಿವರನ್ನು ಮನವಿ ಮಾಡಿಕೊಂಡಿದ್ದರು.
ಕರಾವಳಿ ಭಾಗದಲ್ಲಿ ಸ್ಟಾರ್ಟ್ ಅಪ್ ಸಂಸ್ಕೃತಿಯನ್ನು ಹರಡಲು ಮತ್ತು ಈ ಕ್ಷೇತ್ರದ ಕುರಿತ ಸಮಸ್ಯೆಗಳ ನಿವಾರಣೆಗೆ ವಿಸ್ತೃತವಾಗಿ ತಂತ್ರಜ್ಞಾನದ ಮೂಲಕ ಪರಿಹಾರ ಕಲ್ಪಿಸಲೂ ಇದು ನೆರವಾಗಲಿದೆ. ಮಂಗಳೂರಿಗೆ ಐಟಿ ಹಬ್ ಆಗುವ ಎಲ್ಲ ಅರ್ಹತೆಗಳೂ ಇದ್ದು ಪ್ರಧಾನಮಂತ್ರಿಯವರ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಮಂಗಳೂರು, ಬ್ಯಾಂಕಿಂಗ್ ಉದ್ಯಮದ ಉಗಮಸ್ಥಾನವಾಗಿದೆ ಎಂದು ಸಂಸದರು ಸಚಿವರಿಗೆ ಮನವರಿಕೆ ಮಾಡಿದರು.
ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ವೃತ್ತಿಪರ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಿದ್ದು, ಉದ್ಯೋಗ ಅರಸಿ ಪ್ರತಿಭೆಗಳು ಪಲಾಯನಗೊಳ್ಳುತ್ತಿರುವುದನ್ನು ತಪ್ಪಿಸಲು ಮಂಗಳೂರಿನಲ್ಲಿ ಐಟಿ ಸಂಸ್ಥೆ ಆರಂಭಿಸಬೇಕು. ಬೆಂಗಳೂರಿನ ಮೇಲಾಗುವ ಒತ್ತಡ ತಪ್ಪಿಸಲು ಮಂಗಳೂರನ್ನು ಪರ್ಯಾಯ ಐಟಿ ಹಬ್ ಆಗಿ ಬೆಳೆಸಬೇಕು. ಕರಾವಳಿ ಕರ್ನಾಟಕದ ಸಮಗ್ರ ಅಭಿವೃದ್ಧಿ ಸರ್ಕಾರದ ಆದ್ಯತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೇ ಈ ಸಂಸ್ಥೆ ಆರಂಭಿಸಬೇಕು ಎಂದು ಸಂಸದರು ಹಕ್ಕೊತ್ತಾಯ ಮಂಡಿಸಿದರು.
ಐಟಿ ಉದ್ಯಮ ಬೆಳೆಯಲು ಪೂರಕವಾದ ಎಲ್ಲ ಸೌಲಭ್ಯಗಳು ಮಂಗಳೂರಿನಲ್ಲಿದ್ದು, ಬಂದರು, ರೈಲ್ವೆ ಹಾಗೂ ವಿಮಾನ ನಿಲ್ದಾಣದಂತಹ ಮೂಲಸೌಕರ್ಯವೂ ಇದೆ. ಇದು ವಲಯದ ಸುಲಲಿತ ಕಾರ್ಯನಿರ್ವಹಣೆಗೆ ಪೂರಕವಾಗಿದೆ ಎಂದು ನಳಿನ್ ಕುಮಾರ್ ಮನವಿಯಲ್ಲಿ ವಿವರಿಸಿದ್ದರು.
NIELIT ಕುರಿತು ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ http://www.nielit.gov.in/ ನ್ನು ಸಂಪರ್ಕಿಸಿ.