ಸಂಸದ ನಳಿನ್ ಕುಮಾರ್ ಕಟೀಲ್ ಇವರು ಇಂದು (02-08-2017) ಕೇಂದ್ರ ರೈಲ್ವೇ ರಾಜ್ಯ ಸಚಿವ ಮನೋಜ್ ಸಿನ್ಹ ಇವರನ್ನು ಭೇಟಿ ಮಾಡಿ ಮಂಗಳೂರು ಭಾಗದ ವಿವಿಧ ಬೇಡಿಕೆಗಳನ್ನು ಸಚಿವರ ಮುಂದಿಟ್ಟರು.
1995ರಲ್ಲಿ ಹಳಿ ಪರಿವರ್ತನೆಯ ಸಂದರ್ಭದಲ್ಲಿ ರದ್ದಾಗಿದ್ದ ವಿವಿಧ ರೈಲುಗಳಲ್ಲಿ ಮಂಗಳೂರನ್ನು ಕರ್ನಾಟಕದ ಉತ್ತರ ಭಾಗಗಳಾದ ಹುಬ್ಬಳ್ಳಿ, ಧಾರವಾಡ, ಬೆಳಗಾವಿಗಳನ್ನು ಸಂಪರ್ಕಿಸಲು ಓಡಾಟ ನಡೆಸುತ್ತಿದ್ದ “ಮಹಾಲಕ್ಷ್ಮಿ ಎಕ್ಸ್ ಪ್ರೆಸ್” ರೈಲೂ ಒಂದಾಗಿರುತ್ತದೆ. ಮಂಗಳೂರಿನಿಂದ ಕರ್ನಾಟಕದ ಉತ್ತರ ಭಾಗವನ್ನು ಸಂಪರ್ಕಿಸಲು ಯಾವುದೇ ರೈಲು ಇಲ್ಲದ ಈ ಸಂದರ್ಭದಲ್ಲಿ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲನ್ನು ಪುನಃ ಓಡಿಸುವುದು ಅತೀ ಅವಶ್ಯವಿರುತ್ತದೆ. ಉತ್ತರ ಕನ್ನಡ ಭಾಗದ ಸಾವಿರಾರು ಜನರು ಉದ್ಯೋಗ ಅರೆಸಿ ಮಂಗಳೂರಿನಲ್ಲಿ ನೆಲೆಸಿರುತ್ತಾರೆ ಅಲ್ಲದೇ ಮಂಗಳೂರಿನ ಜನರು ವಿವಿಧ ಉದ್ಯಮ-ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ನೆಲೆಸಿರುತ್ತಾರೆ. “ಮಹಾಲಕ್ಷ್ಮಿ ಎಕ್ಸ್ ಪ್ರೆಸ್” ರೈಲನ್ನು ಪುನಃ ಓಡಿಸಿದಲ್ಲಿ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸಂಸದರು ಸಚಿವರಿಗೆ ಮನವರಿಕೆ ಮಾಡಿದರು.
ಮಂಗಳೂರು ಜಂಕ್ಷನ್ ಹಾಗೂ ಮುಂಬೈ ನಡುವೆ ಸಂಚರಿಸುವ ಸೂಪರ್ ಫಾಸ್ಟ್ ರೈಲು 12132/33 ನ್ನು ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ವಿಸ್ತರಣೆ, ಮಂಗಳೂರು-ಅಹಮದಾಬಾದ್ ನಡುವೆ ಸಂಚರಿಸುವ ವಿಶೇಷ ರೈಲನ್ನು ಖಾಯಂಗೊಳಿಸುವುದು, ಮಂಗಳೂರು-ತಿರುವನಂತಪುರಂ ಮದ್ಯೆ ಸಂಚರಿಸುವ ಮಾವೇಲಿ ಎಕ್ಸ್ ಪ್ರೆಸ್ ರೈಲನ್ನು ಕನ್ಯಾಕುಮಾರಿಯವರೆಗೆ ವಿಸ್ತರಿಸುವಂತೆಯೂ ಮನವಿ ಮಾಡಿದರು.
ಈ ಬೇಡಿಕೆಯೊಂದಿಗೆ ಮಂಗಳೂರು ಕೇಂದ್ರ ರೈಲು ನಿಲ್ದಾಣದ ಎರಡನೇ ಪ್ರವೇಶ ದ್ವಾರ, ಹೆಚ್ಚುವರಿ ಪ್ಲಾಟ್ ಫಾರಂ, ರೈಲುನಿಲ್ದಾಣ ಕಟ್ಟಡ ಸೇರಿದಂತೆ ಮಂಗಳೂರು ಕೇಂದ್ರ ರೈಲು ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಸಚಿವರನ್ನು ಕೋರಿದರು.