ಮಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಮಂಗಳೂರು ದೇಶದಲ್ಲೇ ಉತ್ತಮ ಹೆಸರು ಗಳಿಸಿದ್ದು, ದೇಶದ ಮೂಲೆ ಮೂಲೆಯ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಇಲ್ಲಿಗೆ ಆಗಮಿಸುವುದೇ ಇದಕ್ಕೆ ಉತ್ತಮ ನಿದರ್ಶನ. ಶಿಕ್ಷಣ ಕ್ಷೇತ್ರದಲ್ಲಿ ವಿಕಾಸ್ ಎಜುಕೇಶನ್ನ 25 ವರ್ಷಗಳ ಸಾಧನೆ ಅದರ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ ಎಂದು ಕೇಂದ್ರ ಉಕ್ಕು ಸಚಿವ ಚೌಧರಿ ಬಿರೇಂದರ್ ಸಿಂಗ್ ಹೇಳಿದರು.
ಅವರು ಸೋಮವಾರ ನಗರದ ವಿಕಾಸ್ ಕಾಲೇಜಿನಲ್ಲಿ ವಿಕಾಸ್ ಎಜುಕೇಶನ್ ಟ್ರಸ್ಟ್ನ 25ನೇ ವರ್ಷಾಚರಣೆಯ ಲೋಗೊ ಅನಾವರಣಗೊಳಿಸಿ ಮಾತನಾಡಿದರು. ದೇಶದಲ್ಲಿ ಸುಮಾರು ಶೇ. 65ರಷ್ಟು ಯುವ ಜನಾಂಗವಿದ್ದು, ಅವರೆಲ್ಲರೂ ಶಿಕ್ಷಣ ಪಡೆದರೆ ದೇಶ ಬಲಿಷ್ಠವಾಗುತ್ತದೆ. ಅಮೆರಿಕದ ಸಿಲಿಕಾನ್ ಸಿಟಿಯನ್ನು ಶೇ. 38 ಭಾರತೀಯರೇ ನಿಯಂತ್ರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು, ಕಾಲೇಜಿನ ಅಧ್ಯಕ್ಷ ಕೃಷ್ಣ ಜೆ. ಪಾಲೇಮಾರ್, ಟ್ರಸ್ಟಿ ಜೆ. ಕೊರಗಪ್ಪ, ಸಲಹೆಗಾರ ಡಾ| ಅನಂತ್ ಪ್ರಭು ಜಿ, ಸಂಚಾಲಕ ಡಾ| ಡಿ. ಶ್ರೀಪತಿ ರಾವ್, ಪ್ರಾಂಶುಪಾಲ ಪ್ರೊ| ರಾಜಾರಾಮ್ ರಾವ್ ಟಿ. ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ಡಾ| ಶಂಕರ ಪ್ರಸಾದ್ ಉಪನ್ಯಾಸ ನೀಡಿದರು. ಕಾಲೇಜಿನ ಆಡಳಿತಾಧಿಕಾರಿ ವಿದ್ಯಾ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.
ವಿಜ್ಞಾನಿಗಳಿಗೆ ಉತ್ತಮ ಬೇಡಿಕೆ
ಆರಂಭದಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ನೊಬೆಲ್ ಪುರಸ್ಕೃತ ಭೌತಶಾಸ್ತ್ರ ವಿಜ್ಞಾನಿ ಸರ್ಜ್ ಹೆರೋಷ್, ಜಗತ್ತಿನಲ್ಲಿ ತಂತ್ರಜ್ಞಾನ ಕ್ಷೇತ್ರವು ಅತಿ ವೇಗದಿಂದ ಬೆಳೆಯುತ್ತಿದ್ದು, ಇದಕ್ಕೆ ಹೆಚ್ಚಿನ ಸಂಖ್ಯೆಯ ವಿಜ್ಞಾನಿಗಳ ಆವಶ್ಯಕತೆ ಇದೆ. ಹೀಗಾಗಿ ವಿಜ್ಞಾನಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ವಿದ್ಯಾರ್ಥಿಗಳು ವಿಜ್ಞಾನವನ್ನು ಸವಾಲಾಗಿ ಸ್ವೀಕರಿಸಿ ಮುಂದುವರಿಯಬೇಕಿದೆ ಎಂದರು.
Source : www.udayavani.com