ಗೋಸಂರಕ್ಷಣೆಗೆ ಸ್ಫೂರ್ತಿ ಸಿಕ್ಕಿದರೆ ಗೋಸ್ವರ್ಗ ಸಾರ್ಥಕ
ಮಂಗಳೂರು: ಗೋಸ್ವರ್ಗವನ್ನು ವೀಕ್ಷಿಸಿದ ಪ್ರತಿಯೊಬ್ಬರಿಗೂ ಗೋಸಂರಕ್ಷಣೆಗೆ ಸ್ಫೂರ್ತಿ ದೊರಕಬೇಕು ಎನ್ನುವುದೇ ಗೋಸ್ವರ್ಗದ ಆಶಯ. ಪ್ರಥಮ ಗೋಸ್ವರ್ಗವನ್ನು ಎಲ್ಲರೂ ಸೇರಿ ಕಟ್ಟೋಣ. ಗೋಸ್ವರ್ಗ ನಮ್ಮ ಸ್ವಂತ ಹಕ್ಕಲ್ಲ; ಇದು ಇಡೀ ಸಮಾಜಕ್ಕೆ ಸೇರಿದ್ದು. ಗೋಸ್ವರ್ಗಕ್ಕೆ ಎಲ್ಲರ ಸೇವೆ ಸಲ್ಲಬೇಕು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ಆಶಿಸಿದರು.
ಗೋವು ನಮ್ಮ ತಾಯಿ; ಆದರೆ ನಮ್ಮ ತಾಯಿ ಮಾತ್ರವಲ್ಲ; ನಿಮ್ಮೆಲ್ಲರ ತಾಯಿ ಕೂಡಾ. ಪ್ರತಿಯೊಬ್ಬರಿಗೂ ತಾಯಿಯ ಸೇವೆಗೆ ಅವಕಾಶ ನೀಡಬೇಕು ಎನ್ನುವ ಸಲುವಾಗಿ ಪ್ರತಿಯೊಬ್ಬರಿಗೂ ಸೇವೆಯ ಅವಕಾಶ ಕಲ್ಪಿಸಲಾಗಿದೆ. ಈ ಬಾರಿಯ ಗೋಸ್ವರ್ಗ ಚಾತುರ್ಮಾಸ್ಯಕ್ಕೆ ಆಗಮಿಸಿದ ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಗೋಸ್ವರ್ಗಕ್ಕೆ ವಿಶೇಷ ಮೆರುಗು ನೀಡಲಿದ್ದಾರೆ ಎಂದು ಬಣ್ಣಿಸಿದರು.
ಜನ, ಗೋವು ಹಾಗೂ ದೇವರ ತ್ರಿವೇಣಿ ಸಂಗಮ. ಇದು ಗೋಸೌಖ್ಯ ಕೇಂದ್ರ. ಗೋವುಗಳು ಸುಖವಾಗಿರಬೇಕು. ಗೋಸ್ವರ್ಗದ ಪರಿಕಲ್ಪನೆಯ ಮೂಲ. ಗೋವು ಸುಖವಾಗಿದ್ದರೆ, ಭೂಮಿ ಸ್ವರ್ಗವಾಗುತ್ತದೆ ಎಂದು ನಗರದ ಪುರಭವನದಲ್ಲಿ ನಡೆದ ಸ್ವರ್ಗಸಂವಾದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಪ್ರಕೃತಿಯ ರಮ್ಯ ತಾಣದ ನಡುವೆ ನಂದಿಶಾಲೆ, ಬಾಲವತ್ಸ ಶಾಲೆ, ಹಾಲು ಕರೆಯುವ ಹಸುಗಳಿಗೆ ಧೇನು, ಪ್ರತೀಕ್ಷಾ ಶಾಲೆ, ವತ್ಸ ಶಾಲೆ, ಗೋಸಾಕಾಣಿಕೆ ಚರಿತ್ರೆಯಲ್ಲೇ ಪ್ರಥಮ ಎನಿಸಿದ ಪ್ರಸವ ಶಾಲೆ, ಮುದಿ ಹಾಗೂ ಅಶಕ್ತ ಹಸುಗಳಿಗೆ ಕರುಣಾ ಭರಣ, ಸರ್ವಸುಸಜ್ಜಿತ ಅತ್ಯುತ್ಕøಷ್ಣ ಪಶು ಚಿಕಿತ್ಸಾಲಯ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪ್ರಯೋಗಾಲಯ, ಪಂಚಗವ್ಯ ಚಿಕಿತ್ಸೆಗಾಗಿ ಸುಸಜ್ಜಿತ ನಿರಾಮಯ ಆಸ್ಪತ್ರೆ, ಗೋವಿನ ಬಗೆಗಿನ ಚಿತ್ರಗಳ ಪ್ರದರ್ಶನಕ್ಕೆ ಥಿಯೇಟರ್, ಗೋಮ್ಯೂಸಿಯಂ ಗವ್ಯ ಆಹಾರ ವ್ಯವಸ್ಥೆಯಂಥ ಸೌಲಭ್ಯವಿದೆ ಎಂದು ವಿವರಿಸಿದರು.
ಸಾವಿರ ಗೋವುಗಳ ಸೆಗಣಿಯನ್ನು ಸಂಗ್ರಹಿಸುವ ಸೆಗಣಿ ಯಂತ್ರ, ದೂರಸಂವೇದನೆ ವ್ಯವಸ್ಥೆಯಂಥ ಅತ್ಯಾಧುನಿಕ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಗೋಪೂಜೆ, ತುಲಾಭಾರ, ತೆಪ್ಪೋತ್ಸವ, ರಥೋತ್ಸವದಂಥ ಸೇವೆಗಳ ವ್ಯವಸ್ಥೆಯೂ ಗೋಸ್ವರ್ಗದಲ್ಲಿ ಇದೆ. ಸಿಸಿ ಟಿವಿ ಕಣ್ಗಾವಲಿನ ವ್ಯವಸ್ಥೆಯೂ ಇದೆ. ಗೋಫಲ ಎನ್ನುವ ಹೆಸರಿನಲ್ಲಿ ದೇಶದಲ್ಲೇ ಅತ್ಯಂತ ಉತ್ಕøಷ್ಟ ಗವ್ಯೋತ್ಪನ್ನಗಳನ್ನು ನೀಡುವ ಗೋಫಲ ಉದ್ಯಮ ಇಲ್ಲಿರುತ್ತದೆ ಎಂದು ಹೇಳಿದರು.
3 ಲಕ್ಷ ಚದರ ಅಡಿಯ ಗೋಸ್ವರ್ಗದಲ್ಲಿ ಗೋಡೆ, ಕಿಟಕಿ ಅಥವಾ ಬಂಧನವಿಲ್ಲ. ಗೋವುಗಳು ಸದಾ ತೃಪ್ತಿಯಾಗುವಂತೆ ದಿನದ 24 ಗಂಟೆಯೂ ಗೋವಿಗೆ ಬೇಕಾದಾಗ ಆಹಾರ ಸ್ವೀಕರಿಸಲು ಅವಕಾಶವಿದೆ. ಶಿಲಾಮಯ ಮಹಾಪಾತ್ರಗಳಲ್ಲಿ ಅಮೃತಮಯ ಜಲಸೌಲಭ್ಯವಿದೆ. ನೀರು ಹಾಗೂ ದೇವರ ನಡುವೆ ಗೋವುಗಳು ಇಲ್ಲಿ ಗೋವುಗಳು ಸ್ವಚ್ಛಂದವಾಗಿ ವಿಹರಿಸುತ್ತವೆ ಎಂದು ಬಣ್ಣಿಸಿದರು.
ಕಾಮಧೇನು ಸ್ತೂಪದ ಮೂಲಕ ಇಡೀ ಗೋಸ್ವರ್ಗವನ್ನು ವೀಕ್ಷಿಸುವ ಅವಕಾಶವಿದೆ. ಗೋಸ್ವರ್ಗದ ಪರಿಕಲ್ಪನೆ ನವನವೀನ. ಗೋಸೌಖ್ಯ ಕೇಂದ್ರದ ಪರಿಕಲ್ಪನೆಯೇ ಇದರ ಮೂಲ. ಗೋವುಗಳಿಗೆ ಕಸಾಯಿಖಾನೆಯಲ್ಲಿ ಮಾತ್ರವಲ್ಲ; ಮನೆಗಳಲ್ಲೂ ಗೋವಿಗೆ, ಕರುವಿಗೆ ಸೌಖ್ಯವಿಲ್ಲ. ಹುಟ್ಟಿದ ಪುಟ್ಟ ಕರುವಿಗೇ ಅಮ್ಮನ ಸಖ್ಯ ಇಲ್ಲ. ಕರುವಿನ ಪಾಲಿನ ಹಾಲನ್ನೇ ಕಿತ್ತುಕೊಳ್ಳುತ್ತೇವೆ. ಜೀವನ ಪರ್ಯಂತ ಬಂಧನದ ಶಿಕ್ಷೆ. ಇದನ್ನು ತಪ್ಪಿಸುವುದು ಗೋಸ್ವರ್ಗ ಪರಿಕಲ್ಪನೆಗೆ ಪ್ರೇರಣೆ ಎಂದರು.
ಕಸಾಯಿಖಾನೆಯಲ್ಲಿ ಮಾತ್ರವಲ್ಲ; ಗೋವಿನ ಬದುಕು ಕೂಡಾ ದುಃಖಮಯ. ಎಂಜಲು, ಹಳಸಲು ವಸ್ತುಗಳನ್ನು ಹಸುಗಳಿಗೆ ನೀಡುತ್ತೇವೆ ಎಂದು ವಿವರಿಸಿದರು.
ಕಾರಾಗೃಹದ ಕೈದಿಗಳ ಬದುಕಿಗಿಂತಲೂ ಬವಣೆಪಡುತ್ತಿವೆ. ಪ್ರಕೃತಿ- ಪುರುಷ ಸಂಯೋಗದ ಸುಖವೂ ಇಲ್ಲ. ಬೇಕಾದ ಆಹಾರ, ಬೇಕಾದಷ್ಟು ಪ್ರಮಾಣದಲ್ಲಿ ಇಲ್ಲ. ಗೋಸಾಕಣೆ ಸಂಪೂರ್ಣ ವ್ಯಾವಹಾರಿಕ. ವಿದೇಶಗಳಲ್ಲಿ ಮಾತ್ರವಲ್ಲ; ಭಾರತದಲ್ಲೂ ಪರಿಸ್ಥಿತಿ ಭಿನ್ನವಿಲ್ಲ. ಗೋವಿಗೆ ನೀರು, ಆಹಾರದಷ್ಟೇ ಸೂರ್ಯಕಿರಣ ಕೂಡಾ ಅಗತ್ಯ. ಅದರಿಂದಲೇ ವಂಚಿತರನ್ನಾಗಿ ಮಾಡುತ್ತೇವೆ. ನಿರಂತರ ದುಡಿತ- ಬಡಿತದಿಂದ ಗೋವಿನ ಬದುಕು ಬರ್ಬರವಾಗಿದೆ ಎಂದು ವಿಷಾದಿಸಿದರು.
ಭಾರ್ಗವ ಪರಶುರಾಮ ಆದದ್ದು ಕಾಮಧೇನುವಿಗೆ ತೊಂದರೆ ಬಂದಾಗ. ತನ್ನ ಗೋಶಾಲೆಯ ಗೋವುಗಳಿಗೆ ಆಪತ್ತು ಬಂದಾಗ ಕೊಡಲಿ ಎತ್ತಿದವರು ಭಾರ್ಗವರಾಮ. ಇಂಥ ನೆಚ್ಚಿನ, ಕೆಚ್ಚಿನ ವೀರಭೂಮಿಯ ಜನತೆಗೆ ಗೋವಿನ ಮಹತ್ವದ ಬಗ್ಗೆ ಹೇಳಬೇಕಾದ್ದಿಲ್ಲ. ಗೋರಕ್ಷಣೆಯ ಎಚ್ಚರ ಕೂಡಾ ಹೆಚ್ಚಾಗಿದೆ ಎಂದು ವಿಶ್ಲೇಷಿಸಿದರು.
ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಉತ್ತರಕಾಶಿ ಕಪಿಲಾಶ್ರಮದ ಶ್ರಿ ರಾಮಚಂದ್ರ ಗುರೂಜಿ, ಎಂಆರ್ಪಿಎಲ್ ಆಡಳಿತ ನಿರ್ದೇಶಕ ವೆಂಕಟೇಶ್, ಕುಂಟಾರು ರವೀಶ್ ತಂತ್ರಿ, ಸಂಸದ ನಳಿನ್ ಕುಮಾರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ರಾಜೇಂದ್ರ ಕುಮಾರ್, ಕೆಎಂಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ, ಕರ್ನಾಟಕ ರಾಜ್ಯ ಗೋಶಾಲೆಗಳ ಒಕ್ಕೂಟದ ಅಧ್ಯಕ್ಷ ಎಂ.ಬಿ.ಪುರಾಣಿಕ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಡಾ.ಸುರೇಶ್ ಶೆಟ್ಟಿ ಗುರ್ಮೆ, ಶರಣ್ ಪಂಪ್ವೆಲ್, ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ಬೊಳಿಯಾರ್, ಪಾಲಿಕೆ ಸದಸ್ಯೆ ರೂಪಾ ಡಿ.ಬಂಗೇರ, ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಗೋಸ್ವರ್ಗ ಸಂಸ್ಥಾನ ಸಮಿತಿ ಅಧ್ಯಕ್ಷ ಆರ್.ಎಸ್.ಹೆಗಡೆ, ದಿಗ್ದರ್ಶಕ ಡಾ.ವೈ.ವಿ.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಡಾ.ವಿಷ್ಣು ಭಟ್ ಪಾದೆಕಲ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಗೋ ಪರಿವಾರದ ಉಪಾಧ್ಯಕ್ಷ ಮುರಳಿ ಹಸಂತಡ್ಕ ಸಭಾಪೂಜೆ ನೆರವೇರಿಸಿದರು. ಮೇಧಾ ಪ್ರಾರ್ಥಿಸಿದರು. ಶ್ರೀಕೃಷ್ಣ ನೀರಮೂಲೆ ನಿರೂಪಿಸಿದರು.
ಕರ್ನಾಟಕ ಬ್ಯಾಂಕಿನ ಪರವಾಗಿ ಜಿಎಂ ಮಹಲಿಂಗೇಶ್ವರ ಭಟ್ ಅವರು ಗೋಸ್ವರ್ಗಕ್ಕೆ 25 ಲಕ್ಷ ರೂಪಾಯಿ, ಹಿರಣ್ಯ ಗಣಪತಿ ಭಟ್ 10 ಲಕ್ಷ ದೇಣಿಗೆ ನೀಡಿದರು.
ಗೋಸ್ವಾತಂತ್ರ್ಯ ಹೋರಾಟಕ್ಕೆ ಶ್ರೀಮಠದಿಂದ ನಾಂದಿ: ಸಂಸದ
ಬ್ರಿಟಿಷರು, ಮೊಘಲರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಭಾರತದಲ್ಲಿ ನಡೆದರೆ, ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಗೋವಿನ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿದ ಕೀರ್ತಿ ಶ್ರೀರಾಘವೇಶ್ವರಭಾರತೀಸ್ವಾಮೀಜಿಯವರಿಗೆ ಸಲ್ಲುತ್ತದೆ ಎಂದು ಸಂಸದ ನಳಿನ್ ಕುಮಾರ್ ಬಣ್ಣಿಸಿದರು.
ನಗರದ ಪುರಭವನದಲ್ಲಿ ನಡೆದ ಸ್ವರ್ಗಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗೋಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಶ್ರೀರಾಮಚಂದ್ರಾಪುರಮಠದ ಹೆಸರು ಶಾಶ್ವತವಾಗಿರುತ್ತದೆ ಎಂದರು.
ಹಿಂದೂ ಐಕ್ಯವೇದಿಕೆ ಕೇರಳ ಉಪಾಧ್ಯಕ್ಷ ಕುಂಟಾರು ರವೀಶ್ತಂತ್ರಿ ಮಾತನಾಡಿ, “ಕಟುಕರು ಮನೆಯ ಹಟ್ಟಿಯಿಂದಲೇ ಗೋವನ್ನು ಒಯ್ಯುವುದನ್ನು ನಮಗೆ ತಪ್ಪಿಸಲು ಸಾಧ್ಯವಾಗಿಲ್ಲ. ಆದರೆ ಗೋವಿಗೆ ಪರಿಪೂರ್ಣ ಸ್ವಾತಂತ್ರ್ಯ ನೀಡಿರುವ ಪ್ರೇರಣೆಯಿಂದ ಗೋಪರ ವಾತಾವರಣ ನಿರ್ಮಾಣವಾಗಬಹುದು. ಮುಂದೆ ಸಮಾಜದ ಎಲ್ಲೆಡೆ ಇಂಥ ಗೋಸ್ವರ್ಗಗಳು ತಲೆ ಎತ್ತಬಹುದು. ಶ್ರೀಗಳ ಗೋಸೇವೆಗೆ ಸದಾ ಕೈಜೋಡಿಸುತ್ತೇವೆ” ಎಂದು ಹೇಳಿದರು. ಗೋಪರ ಚಿಂತನೆ ಇಡೀ ಸಮಾಜದಲ್ಲಿ ಬೆಳೆಯಬೇಕು. ಇದನ್ನು ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬ ಗೋಪ್ರೇಮಿಯೂ ಮಾಡಬೇಕು ಎಂದು ಆಶಿಸಿದರು.
ರಾಜ್ಯ ಗೋಶಾಲೆಗಳ ಒಕ್ಕೂಟದ ಅಧ್ಯಕ್ಷ ಎಂ.ಬಿ.ಪುರಾಣಿಕ್ ಮಾತನಾಡಿ, “ಗೋವಿನ ಕ್ರಾಂತಿ ರಾಜ್ಯದಲ್ಲಿ ಆರಂಭವಾಗಲು ಸ್ವಾಮೀಜಿ ಕಾರಣ. ಗೋಸ್ವರ್ಗ ಇಡೀ ವಿಶ್ವಕ್ಕೆ ಒಳ್ಳೆಯ ಸಂದೇಶ ನೀಡುವ ಮಹತ್ವಾಕಾಂಕ್ಷಿ ಯೋಜನೆ” ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, “ಶ್ರೀಗಳು ಸ್ವರ್ಗದಿಂದ ಗೋಸ್ವರ್ಗವನ್ನು ಭೂಮಿಗೆ ತರುವ ಪ್ರಯತ್ನ ಮಾಡಿದ್ದಾರೆ. ಈ ಉದಾತ್ತ ಚಿಂತನೆಗೆ ಇಡೀ ಸಮಾಜ ಬೆಂಬಲಿಸಬೇಕು. ಹಳ್ಳಿಹಳ್ಳಿಗೆ ಗೋಸ್ವರ್ಗ ಒಯ್ಯೋಣ” ಎಂದು ಸಲಹೆ ಮಾಡಿದರು.
ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಹಿಂದೂ ಸಮಾಜವನ್ನು ಒಗ್ಗೂಡಿಸುವಲ್ಲಿ ಗೋವು ಮಹತ್ವದ ಪಾತ್ರ ವಹಿಸುತ್ತದೆ. ಇಂಥ ಗೋವಿನ ಬಗ್ಗೆಯೇ ಸದಾ ಚಿಂತಿಸುವ ಸ್ವಾಮೀಜಿಯವರು ಇಡೀ ಸಮಾಜದ ಹೆಮ್ಮೆ ಎಂದು ಬಣ್ಣಿಸಿದರು.
ಅಪೂರ್ವ ಗೋಸಂವಾದ
ಗೋಸಂತತಿ ಉಳಿದರೆ ಮುಂದೊಂದು ದಿನ ಗೋವು ಪ್ರಕೃತಿಗೆ ಹೊರೆಯಾಗಬಾರದೇ ಎಂಬ ಪ್ರಶ್ನೆಗೆ, “ಗೋವು ಎಂದೂ ಪ್ರಕೃತಿಗೆ ಹೊರೆಯಾಗದು. ನಮ್ಮ ಬಗ್ಗೆಯೂ ಅದೇ ಪ್ರಶ್ನೆಯನ್ನು ಕೇಳಿಕೊಳ್ಳುತ್ತೇವೆಯೇ” ಎಂದು ಸ್ವಾಮೀಜಿ ಪ್ರತಿಕ್ರಿಯಿಸಿದರು. ವಿಶ್ವಕ್ಕೆ ಇಂದು ಅಗತ್ಯವಿರುವ ಶೇಕಡ 10ರಷ್ಟೂ ಗೋವುಗಳಿಲ್ಲ” ಎಂದು ವಿವರಿಸಿದರು.
ಗೋವುಗಳಿಗೆ ಸಂಗೀತ ಇಷ್ಟ ಎಂಬ ಕಾರಣಕ್ಕಾಗಿ ಗೋಸ್ವರ್ಗದಲ್ಲಿ ನಾಲ್ಕು ಗೋಪದಗಳು ಇವೆ. ಗೋವುಗಳ ನಯನ ಸುಖ ಹಾಗೂ ಶ್ರವಣಸುಖಕ್ಕಾಗಿಯೂ ಗೋಸ್ವರ್ಗದಲ್ಲಿ ವಿಶೇಷ ವ್ಯವಸ್ಥೆಯಿದೆ ಎಂದು ಸಂವಾದದಲ್ಲಿ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಗೋವು ಸ್ವಚ್ಛಂದವಾಗಿ ವಿಹರಿಸಲು ಅವಕಾಶ ಕಲ್ಪಿಸಿರುವುದು ಶ್ಲಾಘನೀಯ. ಆದರೆ ಇದು ಗೋಕಳ್ಳತನಕ್ಕೆ ಅವಕಾಶವಾಗುವುದಿಲ್ಲವೇ ಎಂದು ಕೇಳಿದ ಪ್ರಶ್ನೆಗೆ, ಗೋಪಾಲಕರ ಪಡೆ ಗೋವಿನ ರಕ್ಷಣೆಗೆ ಇದೆ. ನಾವು ಹಾಗೂ ನಮ್ಮ ಕಾರ್ಯಕರ್ತರು ನಮ್ಮ ಪ್ರಾಣವನ್ನಾದರೂ ನೀಡುತ್ತೇವೆ; ಆದರೆ ಗೋವನ್ನು ಬಿಟ್ಟುಕೊಡುವುದಿಲ್ಲ ಎಂದು ವಿವರಿಸಿದರು. ಗೋಸ್ವರ್ಗ ಗೋಸಾಮರಸ್ಯದ ಕೇಂದ್ರವೂ ಹೌದು ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ಮಿಶ್ರತಳಿಯ ಪರಿಕಲ್ಪನೆಯನ್ನು ಸರ್ಕಾರ ಕೈಬಿಡಬೇಕು. ಅದು ಭಾರತದ ವಾತಾವರಣಕ್ಕೆ ಒಗ್ಗುವಂಥದ್ದಲ್ಲ. ಈ ಮೂರ್ಖತನದಿಂದ ಸರ್ಕಾರ ಹಿಂದೆ ಸರಿದು, ದೇಶಿ ಗೋಸಂರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.